×
Ad

ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ಕ್ರಿಸ್ಮಸ್ ಈವ್ ಆಚರಣೆ

Update: 2025-12-24 20:56 IST

ಉಡುಪಿ, ಡಿ.24: ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಏಸುವಿನ ಜನ್ಮದಿನ ಕ್ರಿಸ್ಮಸ್ ಈವ್ ಹಬ್ಬವನ್ನು ಬುಧವಾರ ರಾತ್ರಿ ಕ್ರೈಸ್ತರು ಉಡುಪಿ ಜಿಲ್ಲೆಯಾದ್ಯಂತ ಸಡಗರ, ಸಂಭ್ರಮ, ಉತ್ಸಾಹದಿಂದ ಆಚರಿಸಿದರು.

ಹಬ್ಬದ ಭಾಗವಾಗಿ ಕ್ರೈಸ್ತ ಬಾಂಧವರು ಬುಧವಾರ ರಾತ್ರಿ ಸಮೀಪದ ಚರ್ಚ್‌ಗಳಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಸ್ನೇಹಿತರು, ಬಂಧು ಬಾಂಧವರೊಂದಿಗೆ ಶುಭಾಶಯಗಳ ವಿನಿಮಯ ಮಾಡಿಕೊಂಡರು.

ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಸಂಜೆಯ ಬಲಿಪೂಜೆಯನ್ನು ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ಅರ್ಪಿಸಿ ಹಬ್ಬದ ಸಂದೇಶ ನೀಡಿದರು.

ಈ ವೇಳೆ ಮಾತನಾಡಿದ ಅವರು ಕ್ರಿಸ್ತ ಜಯಂತಿ ಶಾಂತಿ ಮತ್ತು ಭರವಸೆಯ ಸಮಯವಾಗಿದ್ದು, ಬೆತ್ಲೆಹೇಮಿನ ದನದ ಕೊಟ್ಟಿಗೆಯಲ್ಲಿ ದೀನ ನಾಗಿ ಜನಿಸಿದ ಪ್ರಭು ಯೇಸುವಿನ ಜನನ, ದೇವರು ನಮ್ಮ ಮೇಲಿರಿಸಿದ ಪ್ರೀತಿ ಸ್ಮರಣೆಯಾಗಿದೆ. ದ್ವೇಷ, ಕಲಹ, ವಿಭಜನೆ ಹಾಗೂ ಪ್ರಾಕೃತಿಕ ವಿಕೋಪಗಳಿಂದ ನಲುಗಿದ ಜಗತ್ತಿಗೆ ಕ್ರಿಸ್ತ ಜಯಂತಿಯ ಸಂದೇಶವು ದೇವರ ಅಪರಿಮಿತಿ ಪ್ರೀತಿ ಮತ್ತು ನಿರಂತರ ಪ್ರಸನ್ನತೆಯ ಪ್ರತೀಕವಾಗಿದೆ. ಪರರ ಪ್ರೀತಿಸಲು ಮತ್ತು ಕಾಳಜಿ ವಹಿಸಲು ಪ್ರಭುವಿನ ಮಧುರ ಕರೆಯನ್ನು ನೆನಪಿಸುತ್ತದೆ. ನಮ್ಮ ಮನೆ ಮನಗಳನ್ನು ಶಾಂತಿಯಿಂದ ಹಾಗೂ ನಮ್ಮ ಸಮುದಾಯಗಳನ್ನು ಸಾಮರಸ್ಯದಿಂದ ತುಂಬಲಿ ಎಂದವರು ಶುಭ ಹಾರೈಸಿದರು.

ಪ್ರಭು ಯೇಸು ಜಗಜ್ಯೋತಿಯಾಗಿ ಭುವಿಯ ಅಂಧಕಾರ ನೀಗಿಸಿದರು. ಕ್ರಿಸ್ಮಸ್ ಮನುಜನ ಬದುಕನ್ನು ಜ್ಯೋತಿ ಯಾಗಿ ಆಲಂಗಿಸಿ ಪ್ರೀತಿಯ ಸಿಂಚನ ವೆರೆದ ಹಬ್ಬ. ಕ್ರಿಸ್ಮಸ್, ನಮ್ಮ ಬದುಕಿನ ಬೆಳಕಿನ ಹಬ್ಬ. ಕ್ರಿಸ್ತ ಜಯಂತಿ ಯಲ್ಲಿನ ಜಗಜ್ಯೋತಿ ಯೇಸು ನಮ್ಮ ಹೃದಯಲ್ಲಿ ಜನಿಸಲಿ. ಅವರ ಪ್ರಭೆಯಿಂದ ಪುಳಕಿತರಾಗಿ, ಸ್ವಾರ್ಥ ದ್ವೇಷ ತೊರೆದು, ಐಕ್ಯತೆ, ಅನ್ಯೋನ್ಯತೆಯಿಂದ ನಾವು ಬದುಕುವಂತಾಗಲಿ. ಸಹೋದರತ್ವ, ಸಾಮರಸ್ಯದ ಬದುಕು ನಮ್ಮದಾಗಲಿ ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದರು.

ಧರ್ಮಪ್ರಾಂತದ ಶ್ರೇಷ್ಠಗುರು ಹಾಗೂ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನ ಪ್ರಧಾನ ಧರ್ಮಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಸಹಾಯಕ ಧರ್ಮಗುರು ವಂ.ಪ್ರದೀಪ್ ಕಾರ್ಡೋಜಾ, ಕಥೊಲಿಕ್ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ವಂ. ವಿನ್ಸೆಂಟ್ ಕ್ರಾಸ್ತಾ, ಪಿಲಾರ್ ಸಭೆಯ ವಂ.ಪರೇಲ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ಕ್ರಿಸ್ಮಸ್ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಪ್ರಮುಖ ಕ್ರೈಸ್ತ ದೇವಾಲಯ ಗಳು ಭಕ್ತಾದಿಗಳಿಂದ ತುಂಬಿ ತುಳುಕುತ್ತಿ ದ್ದವು. ಚರ್ಚ್‌ಗಳು ವಿದ್ಯುತ್ ದೀಪಾಲಂಕಾರ, ನಕ್ಷತ್ರಗಳಿಂದ ಕಂಗೊಳಿಸುತ್ತಿದ್ದವು. ಯೇಸುವಿನ ಜನ್ಮದಿನದ ಪ್ರಯುಕ್ತ ಮಾಡಿದ್ದ ಗೋದಲಿ ಹಾಗೂ ಪುಟ್ಟ ಗೊಂಬೆಗಳ ಪ್ರದರ್ಶನ ಆಕರ್ಷಣೆಯ ಕೇಂದ್ರ ಬಿಂದುಗಳಾಗಿದ್ದವು. ಏಸು ಕ್ರಿಸ್ತನ ಜನ್ಮ ವೃತ್ತಾಂತವನ್ನು ಗೋದಲಿಯಲ್ಲಿ ಪುಟ್ಟ ಗೊಂಬೆಗಳ ಮೂಲಕ ಪ್ರದರ್ಶಿಸಲಾಯಿತು.

ಹಬ್ಬದ ಅಂಗವಾಗಿ ಚರ್ಚುಗಳಲ್ಲಿ ಯುವ ಸಂಘಟನೆಯ ಸದಸ್ಯರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ, ಮಕ್ಕಳ ಪ್ರಿತಿಗೆ ಪಾತ್ರನಾದ ಸಾಂತಾಕ್ಲಾಸ್ ವೇಷ, ಭಕ್ತಾದಿಗಳಿಗೆ ಕ್ರಿಸ್ಮಸ್ ಕೇಕ್ ವಿತರಣೆ ಕೂಡ ನಡೆಯಿತು.

ಜಿಲ್ಲೆಯ ಪ್ರಮುಖ ಚರ್ಚುಗಳಾದ ಅತ್ತೂರು ಸಂತ ಲಾರೆನ್ಸ್ ಬೆಸಿಲಿಕಾದಲ್ಲಿ ವಂ.ಆಲ್ಬನ್ ಡಿಸೋಜ, ತೊಟ್ಟಂ ಸಂತ ಅನ್ನಮ್ಮ ಚರ್ಚಿನಲ್ಲಿ ಧರ್ಮಗುರು ವಂ.ಡೆನಿಸ್ ಡೆಸಾ, ಸಾಸ್ತಾನ ಸಂತ ಅಂತೋನಿ ಚರ್ಚಿನಲ್ಲಿ ವಂ.ಸುನೀಲ್ ಡಿಸಿಲ್ವಾ, ಉಡುಪಿ ಶೋಕಮಾತಾ ಚರ್ಚಿನಲ್ಲಿ ವಂ.ಚಾರ್ಲ್ಸ್ ಮಿನೇಜಸ್ ನೇತೃತ್ವದಲ್ಲಿ ಹಬ್ಬದ ವಿಶೇಷ ಬಲಿಪೂಜೆಗಳು ಜರುಗಿದವು.





 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News