ಬ್ರಹ್ಮಾವರ| ಅಕ್ಷತಾ ಪೂಜಾರಿ ಪ್ರಕರಣ: ದೂರು- ಪ್ರತಿದೂರುಗಳೆರಡೂ ಸಿಐಡಿ ತನಿಖೆಗೆ - ಎಸ್ಪಿ ಹರಿರಾಮ್ ಶಂಕರ್
ಹರಿರಾಮ್ ಶಂಕರ್
ಉಡುಪಿ, ಡಿ.24: ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಜಾರಿಯಾದ ನ್ಯಾಯಾಲಯದ ವಾರಂಟ್‌ನ ಜಾರಿ ವಿಷಯದಲ್ಲಿ ಇತ್ತೀಚೆಗೆ ಉಂಟಾದ ವಿವಾದದಲ್ಲಿ ಉಪ್ಪೂರಿನ ಅಕ್ಷತಾ ಪೂಜಾರಿ ಎಂಬ ವಿದ್ಯಾರ್ಥಿನಿ ಬ್ರಹ್ಮಾವರ ಪೊಲೀಸರ ವಿರುದ್ಧ ದಾಖಲಿಸಿದ ಪ್ರಕರಣ ಹಾಗೂ ಪೊಲೀಸರು ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕುರಿತಂತೆ ಆಕೆಯ ವಿರುದ್ಧ ದಾಖಲಿಸಿದ ಪ್ರಕರಣಗಳೆರಡನ್ನೂ ಸಿಐಡಿ ತನಿಖೆಗೆ ವರ್ಗಾಯಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಸುವಂತೆ ಡಿಜಿ ಕಚೇರಿಗೆ ಕಳುಹಿಸಿದ ಪ್ರಸ್ತಾಪವನ್ನು ಅಂಗೀಕರಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆಗಾಗಿ ಸಿಐಡಿಗೆ ವರ್ಗಾಯಿಸಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರು ಹಾಗೂ ಪ್ರತಿದೂರುಗಳೆರಡರ ತನಿಖೆಯನ್ನು ಸಿಐಡಿ ನಡೆಸಲಿದೆ ಎಂದು ಅವರು ತಿಳಿಸಿದರು.
ಇದಕ್ಕೆ ಮುನ್ನ ನೀಡಿದ ಹೇಳಿಕೆಯಲ್ಲಿ ಅವರು ಪ್ರಕರಣಗಳ ತನಿಖೆಯನ್ನು ಮಣಿಪಾಲ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಮೂವರು ಪೊಲೀಸರನ್ನು ರಜೆಯ ಮೇಲೆ ಕಳುಹಿಸಲಾಗಿದೆ ಎಂದು ಹೇಳಿದ್ದರು.
ಪ್ರಕರಣದಲ್ಲಿ ನ್ಯಾಯ ಹಾಗೂ ಪಾರದರ್ಶಕತೆಯನ್ನು ಖಚಿತಪಡಿಸಿ ಕೊಳ್ಳಲು ಇವನ್ನು ಮಾಡಲಾಗಿದೆ. ಡಿ.18ರಂದು ಬ್ರಹ್ಮಾವರ ಠಾಣೆ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಕಾರರ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನಕಾರರು ಠಾಣೆಯ ಮುಂದೆ ಅನುಮತಿ ಇಲ್ಲದೇ ಧ್ವನಿವರ್ದಕ ಬಳಸಿದ್ದ ಕ್ಕಾಗಿ 200ರೂ. ದಂಡ ವಿಧಿಸ ಬಹುದಾದ ಪ್ರಕರಣ ದಾಖಲಿಸಲಾಗಿದೆ. ಪ್ರತಿಭಟನೆಗೆ ಮುನ್ನ ಪೊಲೀಸರು ಆಯೋಜಕರಿಗೆ ನೋಟೀಸು ನೀಡಿದ್ದರೂ ಅನುಮತಿ ಇಲ್ಲದೇ ಅದನ್ನು ಬಳಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಹರಿರಾಂ ಶಂಕರ್ ತಿಳಿಸಿದ್ದರು.
ಗೃಹಸಚಿವರಿಗೆ ದೂರು
ವಿನಾಕಾರಣ ಪೊಲೀಸರಿಂದ ಹಲ್ಲೆಗೊಳಗಾದ ಅಕ್ಷತಾ ಪೂಜಾರಿ ಅವರಿಗೆ ನ್ಯಾಯ ಸಿಗಬೇಕೆಂಬ ಉದ್ದೇಶದಿಂದ ನಾವು ಕಾನೂನು ಬದ್ಧವಾಗಿ ಪ್ರತಿಭಟನೆ ಮಾಡುತಿದ್ದೇವೆ. ಆದರೆ ಪೊಲೀಸರು ನಮ್ಮ ಹೋರಾಟವನ್ನು ಹತ್ತಿಕ್ಕಲು ವಿವಿಧ ಪ್ರಯತ್ನಗಳನ್ನು ನಡೆಸುತಿದ್ದಾರೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಎಂ.ಪೂಜಾರಿ ಆರೋಪಿಸಿದ್ದಾರೆ.
ಅಕ್ಷತಾ ಪೂಜಾರಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆ ಎದುರು ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪ್ರವೀಣ್ ಎಂ. ಪೂಜಾರಿ ಇಂದು ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವು ಶಾಂತಿ ಯುತ ಪ್ರತಿಭಟನೆ ನಡೆಸಿದರೂ ನಮ್ಮ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಆದ್ದರಿಂದ ನಾವೀಗ ಹೋರಾಟ ವನ್ನು ರಾಜ್ಯಮಟ್ಟಕ್ಕೆ ಒಯ್ಯುವ ಕುರಿತಂತೆ ಆಲೋಚಿಸುತಿದ್ದೇವೆ. ಈ ಸಂಬಂಧ ರಾಜ್ಯ ಗೃಹ ಸಚಿವರನ್ನು ಭೇಟಿಯಾಗುವ ಯೋಚನೆಯೂ ಇದೆ ಎಂದರು.
ಬ್ರಹ್ಮಾವರ ಠಾಣೆ ಎದುರು ನಡೆದ ಪ್ರತಿಭಟನೆಗೆ ಮಣಿದು ಮೂವರು ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಾ ದರೂ ಇನ್ನೂ ತನಿಖೆ ಪ್ರಾರಂಭ ಗೊಂಡಿಲ್ಲ. ತನಿಖಾಧಿಕಾರಿಯ ನೇಮಕವಾಗಿಲ್ಲ. ಹೀಗಾಗಿ ಇಡೀ ಪ್ರಕ್ರಿಯೆ ಕುರಿತಂತೆ ನಮಗೆ ಸಂಶಯವಿದೆ. ಅಲ್ಲದೇ ಅಕ್ಷತಾ ಪೂಜಾರಿ ನೀಡಿದ ದೂರಿನ ತಪ್ಪಿತಸ್ಥ ಪೊಲೀಸರ ವಿರುದ್ಧ ಯಾವುದೇ ರೀತಿಯ ಕ್ರಮ ಇನ್ನೂ ಆಗಿಲ್ಲ. ಹೀಗಾಗಿ ತಕ್ಷಣವೇ ನಿಷ್ಪಕ್ಷಪಾತ ತನಿಖೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಒತ್ತಾಯಿಸುವುದಾಗಿ ಅವರು ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿ ಬಿಲ್ಲವ ಮುಖಂಡರಾದ ಸುಧಾಕರ್ ಡಿ.ಅಮೀನ್ ಪಾಂಗಾಳ, ರಾಜು ಪೂಜಾರಿ ಉಪ್ಪೂರು, ಮಹೇಶ್ ಆಂಚನ್ ಕಟಪಾಡಿ ಉಪಸ್ಥಿತರಿದ್ದರು.