ಕೊಂಕಣ ರೈಲ್ವೆಗೆ 2024-25ನೇ ಸಾಲಿನಲ್ಲಿ 137.69 ಕೋಟಿ ರೂ. ಲಾಭ
ಉಡುಪಿ, ಅ.21: ಕೊಂಕಣ ರೈಲ್ವೆ ನಿಗಮವು (ಕೆಆರ್‌ಸಿಎಲ್) 2024-25ನೇ ಸಾಲಿನಲ್ಲಿ 137.69 ಕೋಟಿ ರೂ. ಲಾಭವನ್ನು ದಾಖಲಿಸಿದೆ ಎಂದು ನಿಗಮದ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ (ಸಿಎಂಡಿ) ಸಂತೋಷ್ ಕುಮಾರ್ ಝಾ ತಿಳಿಸಿದ್ದಾರೆ. ಕಳೆದ ವರ್ಷ ನಿಗಮ 301.75 ಕೋಟಿ ರೂ. ಲಾಭ ದಾಖಲಿಸಿತ್ತು.
ನವಿ ಮುಂಬಯಿಯಲ್ಲಿ ನಡೆದ ಕೆಆರ್‌ಸಿಎಲ್‌ನ 35ನೇ ಸಂಸ್ಥಾಪಕರ ದಿನಾಚರಣೆಯಲ್ಲಿ ಮಾತನಾಡಿದ ಝಾ, ನಿಗಮವು ಸತತ ಮೂರನೇ ವರ್ಷದಲ್ಲಿ ಲಾಭವನ್ನು ದಾಖಲಿಸುತ್ತಿದೆ ಎಂದರಲ್ಲದೇ, ಇದರೊಂದಿಗೆ ನಿಗಮವು 4,157 ಕೋಟಿ ರೂ.ಮೌಲ್ಯದ ಹೊಸ ಯೋಜನೆಗಳನ್ನು ಪಡೆದಿದೆ. ಇದರಲ್ಲಿ 3000 ಕೋಟಿ ರೂ.ಗಳ ವಿದ್ಯುದ್ದೀಕರಣ ಕಾರ್ಯವೂ ಸೇರಿದೆ ಎಂದು ಅವರು ವಿವರಿಸಿದರು.
ಸಂತೋಷ್ ಕುಮಾರ್ ಝಾ ಅವರು ಕೊಂಕಣ ರೈಲ್ವೆ ನಿಗಮದ ಕಳೆದ 35 ವರ್ಷಗಳ ಸೋಲು-ಗೆಲುವು, ಸಾಧನೆಗಳ ಪಕ್ಷಿನೋಟವನ್ನು ನೀಡಿದರು. ಸಿಬ್ಬಂದಿಗಳ ಸಂಘಟಿತ ಪ್ರಯತ್ನದ ಫಲವೇ ನಿಗಮದ ಬೆಳವಣಿಗೆ ಹಾಗೂ ಯಶಸ್ಸಿಗೆ ಕಾರಣೀಭೂತವಾಗಿದೆ. ಮುಂದೆಯೂ ನಿಗಮವು ಆಧುನೀಕರಣ, ಸುರಕ್ಷತೆ, ಸುಸ್ಥಿರತೆ ಹಾಗೂ ವಿಸ್ತರಣೆಗೆ ಹೆಚ್ಚಿನ ಒತ್ತು ನೀಡಲಿದೆ ಎಂದರು.
ನಿರ್ದೇಶಕರಾದ ರಾಜೇಶ್ ಎಂ.ಬಿ (ಆರ್ಥಿಕ), ಸುನಿಲ್ ಗುಪ್ತಾ (ಆಪರೇಷನ್ಸ್ ಮತ್ತು ವಾಣಿಜ್ಯ), ರಾಜೀವ್ ಕುಮಾರ್ ಮಿಶ್ರಾ (ನಿರ್ವಹಣೆ) ಇವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಳೆದೊಂದು ವರ್ಷ ನಿಗಮದ ಸಾಧನೆಗಳ ಮೇಲೆ ಬೆಳಕು ಚೆಲ್ಲಿದ ಸಂತೋಷ್ ಕುಮಾರ್ ಝಾ, ಪ್ರಯಾಣಿಕರಿಗೆ ಹೆಚ್ಚಿನ ಸೇವೆ, ರೈಲ್ವೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ತಾಂತ್ರಿಕತೆ ಸಾಧಿಸಿದ ಪ್ರಗತಿಯ ಕುರಿತು ವಿವರಿಸಿದರು.
2024-25ನೇ ಸಾಲಿನಲ್ಲಿ ಕೊಂಕಣ ರೈಲ್ವೆಯು ವಾರ್ಷಿಕವಾಗಿ 4,202.67 ಕೋಟಿ ರೂ.ವ್ಯವಹಾರವನ್ನು ನಡೆ ಸಿದೆ. ಕಳೆದ ಜೂನ್ 6ರಂದು ಪ್ರದಾನಿ ನರೇಂದ್ರ ಮೋದಿ ಅವರು ಕೊಂಕಣ ರೈಲ್ವೆ ನಿರ್ಮಿಸಿದ ಜಮ್ಮು ಕಾಶ್ಮೀರದ ಉದಮ್‌ಪುರ್- ಶ್ರೀನಗರ- ಬಾರಮುಲ್ಲಾ ರೈಲ್ವೆ ಲಿಂಕ್ ಯೋಜನೆಯನ್ನು ದೇಶಕ್ಕೆ ಸಮರ್ಪಿಸಿದ್ದಲ್ಲದೇ ಕತ್ರಾ ಹಾಗೂ ಶ್ರೀನಗರ ನಡುವೆ ವಂದೇಭಾರತ್ ರೈಲಿಗೆ ಚಾಲನೆಯನ್ನು ನೀಡಿದ್ದರು ಎಂದರು.
1,482.92 ಕೋಟಿ ರೂ. ಮೊತ್ತದ ವಿಝಿಜಾಮ್ ಅಂತಾರಾಷ್ಟ್ರೀಯ ಸೀಪೋರ್ಟ್ ರೈಲು ಸಂಪರ್ಕ ಯೋಜನೆಯ ಡಿಪಿಆರ್‌ಗೆ ಕೇರಳ ಸರಕಾರ ತನ್ನ ಅನುಮೋದನೆಯನ್ನು ನೀಡಿದೆ ಎಂದ ಝಾ, 1,341 ಕೋಟಿ ರೂ. ಮೊತ್ತದ ಅನಕಂಪೋಲಿ-ಕಲ್ಲಾಡಿ-ಮೆಪ್ಪಾಡಿ ಸುರಂಗ ರಸ್ತೆ ಯೋಜನೆಗೆ ಪರಿಸರ ಇಲಾಖೆಯ ಅನುಮೋದನೆ ದೊರಕಿದೆ ಎಂದು ವಿವರಿಸಿದರು.
ಇವಲ್ಲದೇ ಒಡಿಸ್ಸಾ, ಗಜರಾತ್ ಹಾಗೂ ರಾಜಸ್ತಾನಗಳಲ್ಲಿ ಹೊಸ ರೈಲ್ವೆ ಯೋಜನೆಗಳ ನಿರ್ಮಾಣ ಕಾಮಗಾರಿಯೂ ಪ್ರಾರಂಭಗೊಂಡಿದೆ. ಕಳೆದ ಗಣೇಶ ಚೌತಿಯ ಹಬ್ಬದ ಸಂದರ್ಭದಲ್ಲಿ ಕೊಂಕಣ ರೈಲ್ವೆ 381 ವಿಶೇಷ ರೈಲುಗಳನ್ನು ಒಡಿಸಿದ್ದು, 9 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಇದರಲ್ಲಿ ಪ್ರಯಾಣಿಸಿದ್ದಾರೆ. ಅಲ್ಲದೇ ಮೊದಲ ಬಾರಿ ಕೊಂಕಣ ರೈಲ್ವೆಯಲ್ಲಿ ರೋ-ರೋ ಕಾರು ಸಾಗಾಟ ಸೇವೆಯನ್ನು ಸಹ ಪ್ರಾರಂಭಿಸಿದ್ದೇವೆ.