×
Ad

ಉಡುಪಿ: ಮೇ 4ರಂದು ನೀಟ್ - ಯುಜಿ ಪರೀಕ್ಷೆ; 2947 ಅಭ್ಯರ್ಥಿಗಳು

Update: 2025-05-03 19:33 IST

ಉಡುಪಿ, ಮೇ 3: ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ವೈದ್ಯಕೀಯ ಶಿಕ್ಷಣಕ್ಕೆ (ಎಂಬಿಬಿಎಸ್) ಅವಕಾಶ ಕಲ್ಪಿಸುವ ನೀಟ್-ಯುಜಿ ಪ್ರವೇಶ ಪರೀಕ್ಷೆ-2025 ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ವತಿಯಿಂದ ನಾಳೆ ಮೇ 4ರಂದು ಜಿಲ್ಲೆಯ ಎಂಟು ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.

ಪರೀಕ್ಷೆಯು ರವಿವಾರ ಅಪರಾಹ್ನ 2 ರಿಂದ 5ಗಂಟೆಯವರೆಗೆ ಒಂದೇ ಪಾಳಿಯಲ್ಲಿ ನಡೆಯಲಿದೆ. ಜಿಲ್ಲೆಯ ಎಂಟು ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 2947 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆ ಸಂಬಂಧ ಅಭ್ಯರ್ಥಿಗಳಿಗೆ ಸಲಹೆ-ಸೂಚನೆಗಳನ್ನು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ನೀಡಿದ್ದಾರೆ.

ಪರೀಕ್ಷೆ ಬರೆಯಲು ನೊಂದಾಯಿಸಿಕೊಂಡಿರುವ ಅಭ್ಯರ್ಥಿಗಳು ಪರೀಕ್ಷಾ ದಿನದಂದು ಬೆಳಗ್ಗೆ 11 ಗಂಟೆಯಿಂದ ಅಪರಾಹ್ನ 1:30ರೊಳಗೆ ನಿಗದಿ ಪಡಿಸಿದ ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ಮೊಬೈಲ್, ಸೆಲ್ಯೂಲಾರ್ ಫೋನ್, ಟ್ಯಾಬ್ಲೆಟ್, ಪೆನ್‌ಡ್ರೈವ್, ಬ್ಲೂಟೂತ್ ಡಿವೈಸ್, ಸ್ಮಾರ್ಟ್‌ವಾಚ್, ಕ್ಯಾಲ್ಕುಲೇಟರ್ ಹಾಗೂ ಇತರೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳು ಅಥವಾ ಲಾಗ್ ಟೇಬಲ್, ಕೈಚೀಲ, ಪರ್ಸ್, ನೋಟುಗಳು, ಚಾರ್ಟ್, ಬಿಡಿಹಾಳೆ ಅಥವಾ ರೆಕಾರ್ಡಿಂಗ್ ಸಾಧನಗಳು ಸೇರಿದಂತೆ ಯಾವುದೇ ರೀತಿಯ ಉಪಕರಣಗಳನ್ನು ಪರೀಕ್ಷಾ ಕೇಂದ್ರದೊಳಗೆ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ.

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಹೀಗಾಗಿ ತಿನ್ನಬಹುದಾದ ಪದಾರ್ಥಗಳನ್ನು ಅಥವಾ ಕುಡಿಯುವ ನೀರಿನ ಬಾಟಲಿಯನ್ನು ಪರೀಕ್ಷಾ ಕೊಠಡಿಯೊಳಗೆ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ.

ಪೆನ್ಸಿಲ್, ಪೇಪರ್, ಎರೇಸರ್, ಜಾಮಿಟ್ರಿ ಬಾಕ್ಸ್‌ಗಳು ಮತ್ತು ಲಾಗ್ ಟೇಬಲ್‌ಗಳನ್ನು ಪರೀಕ್ಷಾ ಕೇಂದ್ರ ದೊಳಗೆ ತರುವಂತಿಲ್ಲ. ಅಭ್ಯರ್ಥಿಗಳಿಗೆ ಪೆನ್‌ಗಳನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ವತಿಯಿಂದಲೇ ನೀಡಲಾಗುವುದು.

ಪರೀಕ್ಷೆಗೆ ಹಾಜರಾಗಲಿರುವ ಅಭ್ಯರ್ಥಿಗಳು ಎರಡು ಪಾಸ್‌ಪೋರ್ಟ್ ಸೈಜ್ ಭಾವಚಿತ್ರ, ಒಂದು ಪೋಸ್ಟ್‌ ಕಾರ್ಡ್ ಸೈಜ್ ಭಾವಚಿತ್ರವನ್ನು ಕಡ್ಡಾಯ ವಾಗಿ ತರಬೇಕು. ವಸ್ತ್ರಸಂಹಿತೆಯನ್ನು ಅಭ್ಯರ್ಥಿಗಳು ಕಡ್ಡಾಯ ವಾಗಿ ಪಾಲಿಸಬೇಕು ಹಾಗೂ ಪೂರ್ಣ ತೋಳಿನ ಉಡುಪನ್ನು ಧರಿಸಿ ಬರುವಂತಿಲ್ಲ.

ವಿಕಲಚೇತನ (ಪಿಡಬ್ಲ್ಯೂಡಿ) ಅಭ್ಯರ್ಥಿಗಳಿಗೆ ಹೆಚ್ಚುವರಿ 1 ಗಂಟೆ ಅಂದರೆಅಪರಾಹ್ನ 2ರಿಂದ ಸಂಜೆ 6  ಗಂಟೆಯವರೆಗೆ ಪರೀಕ್ಷೆ ಬರೆಯಲು ಕಾಲಾವಕಾಶ ನೀಡಲಾಗುತ್ತದೆ. ಪರೀಕ್ಷಾ ಕೇಂದ್ರದಲ್ಲಿ ಇವರಿಗಾಗಿ ವಿಲ್ಹ್‌ಚೇರ್ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಪ್ರತೀ ಪರೀಕ್ಷಾ ಕೇಂದ್ರದಲ್ಲಿ ದೊಡ್ಡ ಗೋಡೆ ಗಡಿಯಾರ ವಿದ್ದು, ಪರೀಕ್ಷೆ ಪ್ರಾರಂಭವಾದ ಪ್ರತೀ ಮೂವತ್ತು ನಿುಷಕ್ಕೊಮ್ಮೆ ಬೆಲ್ ಬಾರಿಸಲಾಗುವುದು.

ಅಭ್ಯರ್ಥಿಗಳು ಪರೀಕ್ಷೆ ಮುಕ್ತಾಯವಾದ ನಂತರ ಬುಕ್‌ಲೆಟ್ ಮತ್ತು ಪೆನ್‌ನ್ನು ಪರೀಕ್ಷಾ ಕೇಂದ್ರದಿಂದ ತರಬಹುದು. ಪರೀಕ್ಷಾ ಕೇಂದ್ರದಲ್ಲಿ ಅಂಬುಲೆನ್ಸ್‌ನೊಂದಿಗೆ ವೈದ್ಯಕೀಯ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ.

ಪರೀಕ್ಷೆ ಬರೆಯುವ ಪ್ರತಿಯೊಬ್ಬ ಅಭ್ಯರ್ಥಿಯೂ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಿಗದಿಪಡಿಸಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಷೇಧಾಜ್ಞೆ ಜಾರಿ: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ವತಿಯಿಂದ ಮೇ 4 ರಂದು ಜಿಲ್ಲೆಯ 8 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿರುವ ನೀಟ್ -ಯು.ಜಿ 2025ರ ಪ್ರವೇಶ ಪರೀಕ್ಷೆ ದೋಷರಹಿತ, ಶಾಂತಿಯುತ ವಾಗಿ ನಡೆಯಲು ಹಾಗೂ ನಡೆಯಬಹುದಾದ ಎಲ್ಲಾ ರೀತಿಯ ಅವ್ಯವಹಾರಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿಗದಿಪಡಿಸಿದ ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತಲೂ 200ಮೀ. ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ, ಅಲ್ಲಿರುವ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163 ರನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಿ, ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News