×
Ad

ಯಕ್ಷಗಾನ ಕಲಾರಂಗದ 64ನೇ ಮನೆ ಫಲಾನುಭವಿಗೆ ಹಸ್ತಾಂತರ

Update: 2025-02-07 21:35 IST

ಉಡುಪಿ, ಫೆ.7: ಉಡುಪಿಯ ಯಕ್ಷಗಾನ ಕಲಾರಂಗ ದಾನಿಗಳ ಮೂಲಕ ವಿದ್ಯಾಪೋಷಕ್‌ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸಂದರ್ಶಿನಿ ಇವಳಿಗೆ ನಿರ್ಮಿಸಿಕೊಟ್ಟ ‘ಸಹನಾ ಸದನ’ ಮನೆಯನ್ನು ಕಾರ್ಕಳ ತಾಲೂಕಿನ ಶಿವತಿಕೆರೆಯ ಹಿರಿಯಂಗಡಿಯಲ್ಲಿ ಫಲಾನುಭವಿ ಕುಟುಂಬಕ್ಕೆ ನಿನ್ನೆ ಹಸ್ತಾಂತರಿಸಲಾಯಿತು.

ಉಡುಪಿಯ ನಿವೃತ್ತ ಬ್ಯಾಂಕ್ ಉದ್ಯೋಗಿಗಳಾದ ಸದಾನಂದ ಪಿ. ಶೆಣೈ - ಸಹನಾ ಎಸ್. ಶೆಣೈ ಅವರ ಪ್ರಾಯೋಜಕತ್ವ ದಲ್ಲಿ ಈ ಮನೆಯನ್ನು ನಿರ್ಮಿಸಲಾಗಿತ್ತು. ಮನೆಯನ್ನು ಸದಾನಂದ ಪಿ. ಶೆಣೈ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನೀಡಿದ ಹಣವನ್ನು ಒಂದು ರೂಪಾಯಿಯೂ ಪೋಲಾಗದಂತೆ ಫಲಾನುಭವಿಗೆ ತಲಪಿಸಿರುವುದಕ್ಕಅ ಅವರು ಹರ್ಷ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿ, ಯಕ್ಷಗಾನ ಕಲಾರಂಗ ಸಮಾಜಪರ ಕಾಳಜಿ ಯಿಂದ ಮಾಡುತ್ತಿರುವ ಈ ಕೆಲಸ ಸರಕಾರಕ್ಕೂ ಮಾದರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಉಡುಪಿಯ ಮನೋರೋಗ ತಜ್ಞ ಡಾ. ವಿರೂಪಾಕ್ಷ ದೇವರುಮನೆ ಯಕ್ಷಗಾನ ಕಲಾರಂಗದ ಸೇವಾನಾಯಕತ್ವವನ್ನು ಪ್ರಶಂಸಿಸಿದರು.

ನಿವೃತ್ತ ಉಪನ್ಯಾಸಕ ಡಾ.ಸಿ.ಪಿ ಅತಿಕಾರಿ, ನಿವೃತ್ತ ಬ್ಯಾಂಕ್ ಅಧಿಕಾರಿ, ದಾನಿ ಅಶೋಕ ನಾಯಕ್, ಸಾಮಾಜಿಕ ಕಾರ್ಯಕರ್ತ ವಿಠಲ ಕುಂದರ್ ಅತಿಥಿಗಳಾಗಿ ಉಪಸ್ಥಿತರಿದ್ದರು.

ಯಕ್ಷಗಾನ ಕಲಾರಂಗದ ಕೋಶಾಧಿಕಾರಿ ಕೆ. ಸದಾಶಿವ ರಾವ್ ಸದಸ್ಯರಾದ ಯು.ವಿಶ್ವನಾಥ ಶೆಣೈ, ಯು.ಎಸ್. ರಾಜಗೋಪಾಲ ಆಚಾರ್ಯ, ಭುವನ ಪ್ರಸಾದ್ ಹೆಗ್ಡೆ, ವಿಜಯಕುಮಾರ್ ಮುದ್ರಾಡಿ, ಅನಂತರಾಜ ಉಪಾಧ್ಯ, ದಿನೇಶ್ ಪಿ. ಪೂಜಾರಿ, ಎ.ಅಜಿತ್ ಕುಮಾರ್, ಕೃಷ್ಣರಾಜ ತಂತ್ರಿ, ಕಿಶೋರ್, ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ್ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ವಂದಿಸಿದರು.

ಹಸ್ತಾಂತರ: ಇದೇ ವೇಳೆ ಉಡುಪಿ ಗೋಪಾಲಪುರದ ಉದ್ಯಮಿಗಳಾದ ಅರವಿಂದ ಆರ್‌ನಾಯಕ್ ಅವರ ಪ್ರಾಯೋಜಕತ್ವ ದಲ್ಲಿ ಯಕ್ಷಗಾನ ಕಲಾರಂಗ ಬೈಂದೂರು ತಾಲೂಕಿನ ಅರೆಶಿರೂರಿನ ವಿದ್ಯಾಪೋಷಕ್ ವಿದ್ಯಾರ್ಥಿಗಳಾದ ರಶ್ಮಿತಾ ಹಾಗೂ ರಕ್ಷತ್‌ಗೆ ನಿರ್ಮಿಸಿಕೊಟ್ಚ 63ನೇ ಮನೆ ‘ಇಂದಿರಾ ನಿಲಯ’ವನ್ನು ಇತ್ತೀಚೆಗೆ ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.

ಉಡುಪಿ ಸಮೀಪದ ಕೊಡವೂರು ಚಾಚನಕೆರೆಯಲ್ಲಿ ವಿದ್ಯಾಫೋಷಕ್ ವಿದ್ಯಾರ್ಥಿ ತನುಷ್‌ಗೆ ಶಿರ್ವದ ನಿವೃತ್ತ ಉಪನ್ಯಾಸಕಿ ಶಾರದಾ ಎಂ. ಪ್ರಾಯೋಜಕತ್ವದಲ್ಲಿ ನಿರ್ಮಿಸಿಕೊಟ್ಟ 62ನೇ ಮನೆಯನ್ನೂ ಫಲಾನುಭವಿ ತನುಷ್ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News