ರಾ.ಹೆದ್ದಾರಿ 66ರಲ್ಲಿ ಬಸ್ ಬೇ ನಿರ್ಮಾಣಕ್ಕೆ ನಿರ್ದೇಶನ ನೀಡಿ ಡಿಸಿಗೆ ಸಂಸದ ಕೋಟ ಸೂಚನೆ
Update: 2025-05-12 18:28 IST
ಉಡುಪಿ, ಮೇ 12: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-66ರ ಬಹುತೇಕ ಕಡೆಗಳಲ್ಲಿ ಬಸ್‌ಗಳ ನಿಲುಗಡೆಗೆ ಬಸ್ ಬೇ ಇಲ್ಲದೇ ಇರುವ ಕಾರಣ ಬಸ್‌ಗಳು ಹೆದ್ದಾರಿಯಲ್ಲೇ ನಿಂತು ಪ್ರಯಾಣಿಕರನ್ನು ಹತ್ತಿಸಿ-ಇಳಿಸುತ್ತಿದ್ದು, ಇದರಿಂದ ಸುಗಮ ಸಂಚಾರಕ್ಕೆ ತೊಡಕಾಗುವುದು ಮಾತ್ರವಲ್ಲದೇ, ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿ ಜಿಲ್ಲೆಯ ಹೆಮ್ಮಾಡಿ, ತಲ್ಲೂರು, ಬಸ್ರೂರು ಮೂರು ಕೈ, ಹಂಗಳೂರು, ಕೋಟೇಶ್ವರ, ಕುಂಭಾಶಿ, ತೆಕ್ಕಟ್ಟೆ, ಕೋಟ, ಕೋಟ ಮೂರು ಕೈ, ಬ್ರಹ್ಮಾವರ ಈ ಭಾಗಗಳಲ್ಲಿ ಬಸ್ ಬೇ ಅತೀ ಅಗತ್ಯವಾಗಿದೆ. ಈ ಭಾಗ ಗಳಲ್ಲಿ ಬಾಕಿಯಿರುವ ಸರ್ವಿಸ್ ರಸ್ತೆ ನಿರ್ಮಾಣ ಮಾಡಿ, ಬಸ್ ಬೇ ಅಳವಡಿಸುವಂತೆ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಸೂಕ್ತ ನಿರ್ದೇಶನ ನೀಡುವಂತೆ ಸಂಸದ ಕೋಟ ಉಡುಪಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.