ಎಸ್‌ಐಆರ್: ಉಡುಪಿ ಜಿಲ್ಲೆಯಲ್ಲಿ ಶೇ.92.83ರಷ್ಟು ಡಿಜಿಟಲಿಕರಣ ಪ್ರಕ್ರಿಯೆ ಪೂರ್ಣ: ಡಿಸಿ ಸ್ವರೂಪ ಟಿ.ಕೆ.
ಉಡುಪಿ, ಜು.29: ಜಿಲ್ಲೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯವು ಸಮರ್ಪಕ ವಾಗಿ ನಡೆಯುತ್ತಿದ್ದು ಈವರೆಗೆ ಜಿಲ್ಲೆಯ ಒಟ್ಟು 10,63,876 ಮತದಾರರಲ್ಲಿ ಒಟ್ಟು 9,87587 ಗಣತಿ ನಮೂನೆಯನ್ನು ಡಿಜಿಟಲೀಕರಣ ಗೊಳಿಸಿ ಶೇ.92.83ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ರಾಜಕೀಯ ಪಕ್ಷದ ವತಿಯಿಂದ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಚರ್ಚಿಸಲು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ಯಾರೊಬ್ಬ ಮತದಾರರು ಮತದಾರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿ ಕೊಳ್ಳಬೇಕು. ಇದಕ್ಕೆ ರಾಜಕೀಯ ಪಕ್ಷಗಳು, ಬಿಎಲ್‌ಓಗಳು, ಬಿಎಲ್‌ಎಗಳು, ಪರಿಷ್ಕರಣೆ ಕಾರ್ಯದಲ್ಲಿ ಕೈಜೋಡಿಸುವುದರೊಂದಿಗೆ ಪೂರ್ಣ ಪ್ರಮಾಣ ದಲ್ಲಿ ಮತದಾರರ ಕರಡು ಪಟ್ಟಿ ತಯಾರಿಸಲು ಸಹಕಾರ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಒಟ್ಟು 1112 ಮತಗಟ್ಟೆಗಳಿದ್ದು, ಅವುಗಳಲ್ಲಿ 733 ಮತಗಟ್ಟೆಗಳಲ್ಲಿ ಶೇ.100ರಷ್ಟು ಡಿಜಿಟಲಿಕರಣ ಪ್ರಕ್ರಿಯೆ ಪೂರ್ಣ ಗೋಳಿಸಿದ್ದು, ಇವುಗಳಲ್ಲಿ 562 ಮತಗಟ್ಟೆಗಳಲ್ಲಿ ವೆರಿಫಿಕೇಷನ್ ಪ್ರಕ್ರಿಯೆ ಪೂರ್ಣಗೊಂಡಿದ್ದು, 171 ಮತಗಟ್ಟೆಗಳಲ್ಲಿ ಅಲ್ಪಪ್ರಮಾಣದ ವೆರಿಫಿಕೇಷನ್‌ಗೆ ಬಾಕಿ ಇದೆ. ಇದು ತ್ವರಿತಗತಿಯಲ್ಲಿ ಆಗಬೇಕಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ 19,840 ಮತದಾರರು ಮೃತಪಟ್ಟಿರುವುದು ಮನೆ ಭೇಟಿಯ ವೇಳೆ ಕಂಡುಬಂದಿದೆ. 24,679 ಮತದಾರರು ಖಾಯಂ ಆಗಿ ಬೇರೆ ಕಡೆಗೆ ವರ್ಗಾವಣೆಗೊಂಡಿದ್ದು, 7521 ಮತದಾರರು ತಮ್ಮ ದಾಖಲಾತಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಬಿಎಲ್‌ಓಗಳು ಜೂ.30ರಿಂದ ಜು.29ರವರೆಗೆ ಮನೆ ಮನೆಗೆ ಭೇಟಿ ನೀಡಿ ಪೂರ್ವದಲ್ಲಿ ಮುದ್ರಣಗೊಂಡಿರುವ ನಮೂನೆಯನ್ನು ದ್ವಿ ಪ್ರತಿಯಲ್ಲಿ ವಿತರಿಸಿದ್ದು, ಇವುಗಳ ಡಿಜಿಟಲೀಕರಣ ಕಾರ್ಯವು ಮುಕ್ತಾಯದ ಹಂತದಲ್ಲಿದೆ. ಆದಷ್ಟು ಶೀಘ್ರದಲ್ಲಿ ಮುಗಿಸಿದಲ್ಲಿ ರಾಜಕೀಯ ಪಕ್ಷದವರಿಗೆ ವಿತರಿಸಲು ಅನುಕೂಲಕರ ವಾಗಲಿದೆ ಎಂದರು.
ರಾಜಕೀಯ ಪಕ್ಷಗಳ ಮುಖಂಡರುಗಳು ಮಾತನಾಡಿ, ಎಸ್‌ಐಆರ್ ಕಾರ್ಯದಲ್ಲಿ ಸರಕಾರಿ ನೌಕರರು, ಅಂಗನ ವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ಬಿಎಲ್‌ಎಗಳು ಸಕ್ರಿಯವಾಗಿ ತೊಡಗಿಸಿಕೊಳ್ಳುವುದ ರೊಂದಿಗೆ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾವು ಎಲ್ಲಾ ರೀತಿಯಲ್ಲಿ ಸಹಕಾರ ನೀಡುತ್ತಿದ್ದೇವೆ. ಪ್ರಸ್ತುತ ಡಿಜಿಟಲೀಕರಣ ಪೂರ್ಣ ಗೊಂಡಿರುವ ಹಿನ್ನೆಲೆ ಕರಡು ಮತದಾರರ ಪಟ್ಟಿ ತಯಾರಿಸಿ ಘೋಷಣೆಗೂ ಮುನ್ನ ಮತದಾರರ ಪಟ್ಟಿ ನೀಡಿದಲ್ಲಿ ಕೆಲವು ನ್ಯೂನ್ಯತೆಗಳನ್ನು ಸರಿಪಡಿಸಲು ಅನುಕೂಲವಾಗಲಿದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳಾದ ಕಾಂಗ್ರೆಸ್‌ನ ಕೆ.ಗೋಪಾಲ ಪೂಜಾರಿ, ಅಬೀಬ್ ಅಲಿ, ಅಶೋಕ್, ಬಿ.ವಿಜಯ, ಬಿಜೆಪಿಯ ಚಂದ್ರಶೇಖರ ಪ್ರಭು, ಶ್ರೀಕಾಂತ್ ನಾಯಕ್, ಜೆಡಿಎಸ್‌ನ ಜಯರಾಮ್ ಆಚಾರ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.