ಅಜ್ಜರಕಾಡು ಕಾಡಬೆಟ್ಟು ಕಾಲೊನಿಯಲ್ಲಿ ಡೆಂಗ್ಯೂ ಭೀತಿ
ಉಡುಪಿ: ಡೆಂಗ್ಯೂ ಹಾವಳಿಯಿಂದ ತತ್ತರಿಸಿರುವ ನಗರದ ಅಜ್ಜರಕಾಡು ವಾರ್ಡ್‌ನ ಕಾಡಬೆಟ್ಟು ಕಾಲೊನಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಮುಖಂಡ ಪ್ರಸಾದ್‌ರಾಜ್ ಕಾಂಚನ್ ಮಂಗಳವಾರ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು.
ಈ ವೇಳೆ ಸ್ಥಳೀಯ ನಿವಾಸಿಗಳು, ಕಾಲೊನಿಯಲ್ಲಿ ಕೊಳಚೆ ನೀರು ಸಮರ್ಪಕವಾಗಿ ಹರಿಯದೇ ದುರ್ವಾಸನೆ ಉಂಟಾಗುತ್ತಿದೆ. ನಗರಸಭೆ ಯಿಂದ ಸ್ವಚ್ಛತಾ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಇದರ ಪರಿಣಾಮವಾಗಿ ಬಹುತೇಕ ಮನೆಗಳಲ್ಲಿ ಮೂರುರಿಂದ ನಾಲ್ಕು ಮಂದಿ ಜ್ವರದಿಂದ ಬಳಲುತ್ತಿದ್ದು, ಡೆಂಗ್ಯೂ ಭೀತಿ ಹೆಚ್ಚಾಗಿದೆ ಎಂದು ಅಳಲು ತೋಡಿಕೊಂಡರು.
ಕಾಡಬೆಟ್ಟು ಕಾಲೊನಿಯ ಸ್ವಚ್ಛತೆ ಹಾಗೂ ಚರಂಡಿ ಸಮಸ್ಯೆಯನ್ನು ತಕ್ಷಣ ಬಗೆಹರಿಸಿ ಅಗತ್ಯ ಆರೋಗ್ಯ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಸಾದ್ ರಾಜ್ ಕಾಂಚನ್, ಪೌರಾಯುಕ್ತರಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸುರೇಂದ್ರ ಆಚಾರ್ಯ, ಡೊಮಿನಿಕ್ ಮಸ್ಕರೇನ್ಹಸ್, ಸುರೇಶ್ ಶೆಟ್ಟಿ ಬನ್ನಂಜೆ, ಪ್ರಶಾಂತ್ ಪೂಜಾರಿ, ಸಜ್ಜನ್ ಶೆಟ್ಟಿ, ಸದಾನಂದ ಮುಲ್ಯ, ಸುರೇಶ್ ಕುಂರ್ದ, ಶರತ್ ಕುಂದರ್ ಉಪಸ್ಥಿತರಿದ್ದರು.