ಮಿಷನ್ ಏಡ್ಸ್ ಸುರಕ್ಷಾ ಮೊಬಿಲೈಸೇಷನ್ ಅಭಿಯಾನ| 1141 ಎಚ್‌ಐವಿ ಸೋಂಕಿತರ ಪತ್ತೆಗೆ ಕ್ರಮ: ಎಡಿಸಿ ಅಬೀದ್ ಗದ್ಯಾಳ್
ಉಡುಪಿ, ಜು.29: ಉಡುಪಿ ಜಿಲ್ಲೆಯಲ್ಲಿ 5790 ಎಚ್‌ಐವಿ ಸೋಂಕಿತರು ಜೀವನ ನಡೆಸುತ್ತಿದ್ದಾರೆ ಎಂದು ಅಂದಾಜಿ ಸಲಾಗಿದ್ದು, ಪ್ರಸ್ತುತ ಜಿಲ್ಲೆಯಲ್ಲಿ 4691 ಜನರು ಮಾತ್ರ ತಮ್ಮ ಎಚ್‌ಐವಿ ಸ್ಥಿತಿಯನ್ನು ತಿಳಿದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು 1141 ಜನರಿಗೆ ಎಚ್‌ಐವಿ ಸೋಂಕು ಇದ್ದರೂ ಅವರು ತಮ್ಮ ಎಚ್‌ಐವಿ ಸ್ಥಿತಿಯನ್ನು ಇನ್ನೂ ತಿಳಿದುಕೊಂಡಿಲ್ಲ ಅವರನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಬೇಕಾಗಿರುತ್ತದೆ. ಇವರನ್ನು ಪತ್ತೆ ಹಚ್ಚಲು ಸರಕಾರ ನಾನಾ ಉಪಕ್ರಮಗಳನ್ನು ಕೈಗೊಂಡಿದೆ ಎಂದು ಉಡುಪಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ತಿಳಿಸಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಮೊದಲನೇ ಮಹಡಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಫಸ್ಟ್ 95 ಸಮಿತಿ ಹಾಗೂ ಜಿಲ್ಲಾ ಜಂಟಿ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಸರಕಾರ ಎಚ್‌ಐವಿ ಸೋಂಕಿನ ಬಗ್ಗೆ ಅರಿವು ಮೂಡಿಸುವುದು ಹಾಗೂ ಎಚ್‌ಐವಿ ಸೋಂಕಿನ ಬಗ್ಗೆ ತಿಳಿದಿಲ್ಲದ ಜನರನ್ನು ಗುರುತಿಸಿ, ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಮಿಷನ್ ಏಡ್ಸ್ ಸುರಕ್ಷಾ ಮೊಬಿಲೈಸೇಷನ್ ಅಭಿಯಾನವನ್ನು ಆರಂಭಿಸಿದ್ದು, ಇದು ಸಮರ್ಪಕವಾಗಿ ಅನುಷ್ಠಾನಗೊಳಿಸ ಬೇಕು ಎಂದರು.
ಭಾರತದಲ್ಲಿ ಎಚ್‌ಐವಿ ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಮೊಬಿಲೈಸೇಷನ್ ಫಾರ್ ಏಡ್ಸ್ ಸುರಕ್ಷಾ(ಎಂಎಎಸ್) ಕಾರ್ಯಕ್ರಮವನ್ನು ಜಾರಿಗೆ ತರಲಾಗಿದ್ದು, 2027ರ ಡಿಸೆಂಬರ್ 1ರ ವಿಶ್ವ ಏಡ್ಸ್ ದಿನದೊಳಗೆ ಜಿಲ್ಲೆಯಲ್ಲಿ ಎಚ್‌ಐವಿ ಸಾಂಕ್ರಾಮಿಕವನ್ನು ಪರಿಣಾಮ ಕಾರಿಯಾಗಿ ನಿಯಂತ್ರಿಸುವುದು ಗುರಿ ಹೊಂದಲಾಗಿದೆ. ಈ ಕಾರ್ಯಕ್ರಮವು 95-95-99 ಗುರಿಗಳನ್ನು ಪರಿಣಾಮಕಾರಿಯಾಗಿ ಸಾಧಿಸುವತ್ತ ಕೇಂದ್ರಿ ಕರಿಸಿದ್ದು, ಅಭಿಯಾನವು 2026 ಡಿಸೆಂಬರ್‌ವರೆಗೆ ಚಾಲ್ತಿಯಲ್ಲಿ ಇರುತ್ತದೆ ಎಂದು ಅವರು ತಿಳಿಸಿದರು.
ಜನಸಾಮಾನ್ಯರಲ್ಲಿ ಈ ಕಾರ್ಯಕ್ರಮದ ಬಗ್ಗೆ ಹೆಚ್ಚು ಹೆಚ್ಚು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುವುದರ ಜೊತೆಗೆ ಅವರುಗಳೆ ಸ್ವಯಂ ಪ್ರೇರಿತರಾಗಿ ಎಚ್‌ಐವಿ ಪರೀಕ್ಷೆಗೆ ಸಂಬಂಧಿಸಿದ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಅಲ್ಲಿ ನೀಡುವ ಪ್ರಶ್ನೆಗಳಿಗೆ ಉತ್ತರಿಸಿ, ಸಂಶಯ ಬಂದಲ್ಲಿ ಎಚ್‌ಐವಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳು ವಂತೆ ಉತ್ತೇಜನ ಮಾಡಬೇಕು ಎಂದು ಅವರು ಹೇಳಿದರು.
ಯುವ ಸಮುದಾಯವು ಹೆಚ್ಚಿರುವ ಶಾಲಾ-ಕಾಲೇಜುಗಳಲ್ಲಿ ಏಡ್ಸ್ ರೋಗದ ನಿಯಂತ್ರಣ, ಹರಡುವಿಕೆ, ಗುರುತಿಸುವಿಕೆ ಹಾಗೂ ಚಿಕಿತ್ಸೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದ ಅವರು, ಸಂಘ-ಸಂಸ್ಥೆಗಳು, ಯುವಕ ಸಂಘಗಳು ಹಾಗೂ ಎನ್‌ಜಿಓಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮುಂದಾಗಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಏಡ್ಸ್ ರೋಗ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು, ಜಿಲ್ಲಾ ಸರ್ಜನ್ ಡಾ.ಎಚ್.ಅಶೋಕ್, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಜ್ಯೋತ್ಸ್ನಾ ಬಿ.ಕೆ. ಮೊದಲಾದವರು ಉಪಸ್ಥಿತರಿದ್ದರು.