×
Ad

ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆ| ಉಡುಪಿ ಜಿಲ್ಲೆಯಲ್ಲಿ ಶೇ.95.75ರಷ್ಟು ಪ್ರಗತಿ: ಡಿಸಿ ಡಾ.ವಿದ್ಯಾಕುಮಾರಿ

Update: 2025-05-17 21:14 IST

ಉಡುಪಿ, ಮೇ 17: ಈಗಾಗಲೇ ಆರಂಭಗೊಂಡಿರುವ ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಕುರಿತ ಸಮೀಕ್ಷೆಯನ್ನು ಮೇ 25ರವರೆಗೆ ವಿಸ್ತರಿಸಲಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಈವರೆಗೆ 15329 ಪರಿಶಿಷ್ಟ ಜಾತಿ ಕುಟುಂಬಗಳ ಪೈಕಿ 14941 ಕುಟುಂಬಗಳ ಸಮೀಕ್ಷೆ ಮಾಡುವ ಮೂಲಕ ಶೇ.95.75 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ತಿಳಿಸಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 5ರಿಂದ ಆರಂಭಗೊಂಡ ಈ ಸಮೀಕ್ಷೆ ಕಾರ್ಯ ವನ್ನು ಇದೀಗ ವಿಸ್ತರಿಸಲಾಗಿದ್ದು, ಮನೆಮನೆ ಭೇಟಿ ನೀಡುವ ಸಮೀಕ್ಷೆಯನ್ನು ಮೇ 25ರವರೆಗೆ, ವಿಶೇಷ ಶಿಬಿರವನ್ನು ಮೇ 26ರಿಂದ 28ರವರೆಗೆ, ಆನ್‌ಲೈನ್ ಮೂಲಕ ಸ್ವಯಂ ಘೋಷಣೆಯನ್ನು ಮೇ 19ರಿಂದ ಮೇ 28ರವರೆಗೆ ವಿಸ್ತರಿಸಲಾಗಿದೆ ಎಂದರು.

ಜಿಲ್ಲೆಯ 1112 ಗಣತಿದಾರರು ಈ ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿದ್ದು, ಎಸ್‌ಟಿ ಸಮೀಕ್ಷೆಯಲ್ಲಿ ಇಂದು ಶೇ.100 ಪ್ರಗತಿ ಸಾಧಿಸುವ ಸಾಧ್ಯತೆ ಇದೆ. ಉಳಿದಂತೆ ಜಿಲ್ಲೆಯಲ್ಲಿ 3.14ಲಕ್ಷ ಎಸ್‌ಟಿಯೇತರ ಕುಟುಂಬಗಳಿದ್ದು, ಅವುಗಳ ಪೈಕಿ ಸುಮಾರು 2.5ಲಕ್ಷ ಕುಟುಂಬಗಳ ಸಮೀಕ್ಷೆ ನಡೆಸಲಾಗಿದೆ. ಉಳಿದ ಕುಟುಂಬಗಳ ಸಮೀಕ್ಷೆಯನ್ನು ಮೇ 25ರೊಳಗೆ ಸಂಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದರು.

ಗಣತಿದಾರರು ಶಾಸಕರು, ಗ್ರಾಪಂ ಸದಸ್ಯರು ಸೇರಿದಂತೆ ಜನಪ್ರತಿನಿಧಿಗಳು, ವಿದ್ವಾಂಸರು, ಲೇಖಕರು, ಕವಿಗಳು ಸಹಿತ ಗಣ್ಯ ವ್ಯಕ್ತಿಗಳ ಮನೆಗಳಿಗೂ ಕಡ್ಡಾಯ ಭೇಟಿ ನೀಡಿ ಅವರ ಸಮೀಕ್ಷೆ ಕೂಡ ಮಾಡಬೇಕು ಎಂದು ಸೂಚಿಸಲಾಗಿದೆ. ಇವರೆಲ್ಲ ಮಾಹಿತಿ ನೀಡದೆ ಇರಬಹುದು ಎಂಬ ಭಯದಿಂದ ಗಣತಿದಾರರು ಹೋಗದೇ ಇರುವ ಸಲುವಾಗಿ ಈ ಸೂಚನೆ ನೀಡಲಾಗಿದೆ. ಈ ಸಮೀಕ್ಷೆಯಿಂದ ಯಾವುದೇ ಮನೆಗಳು ಬಿಟ್ಟು ಹೋಗಬಾರದು ಎಂಬುದು ನಮ್ಮ ಉದ್ದೇಶವಾಗಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಸ್ಪಂದನೆ ಮಾಡದ ಕುರಿತು ಗಣತಿದಾರರಿಂದ ಯಾವುದೇ ದೂರುಗಳು ಬಂದಿಲ್ಲ ಎಂದರು.

‘ಜಾತಿಯಲ್ಲಿ ಗೊಂದಲ ಇಲ್ಲ’

ಸಮೀಕ್ಷೆ ಮಾಡುವ ಆ್ಯಪ್‌ನಲ್ಲಿ ರಾಷ್ಟ್ರಪತಿ ಗಳಿಂದ ಅನುಮೋದಿತವಾದ 101 ಜಾತಿಗಳ ಪಟ್ಟಿ ಇದ್ದು, ಅದು ಬಿಟ್ಟು ಬೇರೆ ಜಾತಿಗಳನ್ನು ಸೇರಿಸಲು ಈ ಹಂತದಲ್ಲಿ ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ತಿಳಿಸಿದರು.

ಅವಿಭಜಿತ ದ.ಕ. ಜಿಲ್ಲೆಯಲ್ಲಿ ಮೇರಾ ಮತ್ತು ಮನ್ಸ ಎಂಬ ಜಾತಿಗಳು ಆ ಪಟ್ಟಿಯಲ್ಲಿ ಇಲ್ಲ ಎಂದು ಹೇಳಲಾಗುತ್ತದೆ. ಮೇರಾ ಜಾತಿಯವರು ಅವರ ಮೂಲ ಜಾತಿ ಮುಗೇರ ಅಥವಾ ಆದಿದ್ರಾವಿಡದಲ್ಲಿ ಗುರುತಿಸಿಕೊಳ್ಳಲು ಅವಕಾಶ ಇದೆ. ಮನ್ಸ ಜಾತಿ ಸೇರ್ಪಡೆ ಆಗಿಲ್ಲ. ಅದರ ಬಗ್ಗೆ ಸರಕಾರಕ್ಕೆ ಈಗಾಗಲೇ ಪತ್ರ ಬರೆದು ಮಾಹಿತಿಯನ್ನು ನೀಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News