ಉಡುಪಿ : ಗಾಂಧೀ ಜಯಂತಿಯ ಸಂದರ್ಭದಲ್ಲಿ ಕೊಂಕಣ ರೈಲ್ವೆಯು ‘ಏಕ್ ದಿನ್, ಏಕ್ ಘಂಟಾ, ಏಕ್ ಸಾಥ್’ ಅಭಿಯಾನದಡಿ ಉಡುಪಿಯ ಭಾರತ್ ಸ್ಕೌಟ್ ಮತ್ತು ಗೈಡ್ಸ್ ತಂಡದಿಂದ ನಡೆಸಿಕೊಂಡು ಬರುತ್ತಿರುವ ಸ್ವಚ್ಛ ಭಾರತ್ ದಿವಸ್ ಸಾಪ್ತಾಹಿಕದ 100ನೇ ಕಾರ್ಯಕ್ರಮವನ್ನುಇಂದು ಉಡುಪಿ ರೈಲು ನಿಲ್ದಾಣದಲ್ಲಿ ಆಚರಿಸಲಾಯಿತು.

ಇದರ ಅಂಗವಾಗಿ ಉಡುಪಿ ರೈಲು ನಿಲ್ದಾಣದಲ್ಲಿ ಸ್ವಚ್ಛತಾ ಪ್ರತಿಜ್ಞೆ ಹಾಗೂ ಒಂದು ಗಂಟೆಯ ಶ್ರಮದಾನ ಕಾರ್ಯಕ್ರಮ ನಡೆಯಿತು. ಉಡುಪಿಯ ಭಾರತ್ ಸ್ಕೌಟ್ ಹಾಗೂ ಗೈಡ್ಸ್ ನ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ಕೊಂಕಣ ರೈಲ್ವೇಯ ಉಪ ಮುಖ್ಯ ವೈದ್ಯಾಧಿಕಾರಿ ಡಾ.ಸ್ಟೀವನ್ ಜಾರ್ಜ್ ಸ್ವಚ್ಛತಾ ಪ್ರತಿಜ್ಞೆ ಭೋಧಿಸಿದರು. ಬಳಿಕ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಸರ್ವಧರ್ಮ ಪ್ರಾರ್ಥನೆ ನಡೆಯಿತು. ಕಾರ್ಯಕ್ರಮಕ್ಕೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಉಡುಪಿ ಜಿಲ್ಲಾ ಮುಖ್ಯ ಆಯುಕ್ತ ಇಂದ್ರಾಳಿ ಜಯಕರ ಶೆಟ್ಟಿ ಚಾಲನೆ ನೀಡಿದರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಕೆಎಂಸಿ ಮಣಿಪಾಲದ ಮಕ್ಕಳ ತಜ್ಞ ವೈದ್ಯ ಡಾ.ಸುನಿಲ್ ಮುಂಡ್ಕೂರು ಅವರ ಜೂನಿಯರ್ ಯಕ್ಷಗಾನ ತಂಡದ ಸದಸ್ಯರು ಸುಮಾರು 15 ನಿಮಿಷಗಳ ಕಾಲ ಯಕ್ಷಗಾನ ಪ್ರದರ್ಶನ ನೀಡಿದರು. ಯಕ್ಷಗಾನದ ಮೂಲಕ ಸ್ವಚ್ಛತೆ ಮತ್ತು ಸಾಮಾಜಿಕ ಜವಾಬ್ದಾರಿಯ ಸಂದೇಶವನ್ನು ಸಾರಲಾಯಿತು.

ಇದೇ ಸಂದರ್ಭದಲ್ಲಿ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಉಡುಪಿ, ಕಳೆದ ಹತ್ತು ವರ್ಷಗಳಿಂದ ಉಡುಪಿ ರೈಲು ನಿಲ್ದಾಣದಲ್ಲಿ ನಡೆಸುತ್ತಿರುವ ವಾರದ ಸ್ವಚ್ಛತಾ ಕಾರ್ಯಕ್ರಮದ 100ನೇ ವಾರದ ಸಂಭ್ರಮವನ್ನು ವಿಶೇಷವಾಗಿ ಆಚರಿಸಿದರು. ಬಳಿಕ ರೈಲು ನಿಲ್ದಾಣದ ವಿವಿಧ ಪ್ರದೇಶಗಳಲ್ಲಿ ಒಂದು ಗಂಟೆಗಳ ಕಾಲ ಶ್ರಮದಾನ ನಡೆಸಲಾಯಿತು.

ರೈಲು ನಿಲ್ದಾಣದ ಆವರಣ, ಪ್ರಯಾಣಿಕರ ಸಂಚಾರ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಕೊಂಕಣ ರೈಲ್ವೆಯ ಅಧಿಕಾರಿ, ಸಿಬ್ಬಂದಿಗಳು, ಸ್ಕೌಟ್ ಮತ್ತು ಗೈಡ್ಸ್ ನ ವಿದ್ಯಾರ್ಥಿಗಳು ಸ್ವಚ್ಛಗೊಳಿಸಿದರು. ಪರಿಸರದ ಸ್ವಚ್ಛತೆ ಕಾಪಾಡುವ ಕುರಿತು ಸಾರ್ವಜನಿಕರಲ್ಲಿಯೂ ಜಾಗೃತಿ ಮೂಡಿಸಲಾಯಿತು.

ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ, ಸ್ವಚ್ಚತೆ ಕೇವಲ ಒಂದು ದಿನದ ಕಾರ್ಯಕ್ರಮವಾಗದೇ ಪ್ರತಿಯೊಬ್ಬರ ದೈನಂದಿನ ಜೀವನದ ಭಾಗವಾಗಬೇಕು. ವಿದ್ಯಾರ್ಥಿಗಳು ನಾಲ್ಕು ಗೋಡೆಗಳ ಮಧ್ಯ ಕೇವಲ ಪಾಠಕ್ಕೆ ಸೀಮಿತವಾಗಿರದೇ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಸುಂದರ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.

ತಮ್ಮ ಸಂಸ್ಥೆಯ ರಾಜ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಅವರ ಆಶಯದಂತೆ ನಿರಂತರ ಹತ್ತು ವರ್ಷಗಳಿಂದ ಇಲ್ಲಿ ನೂರನೇ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದೇವೆ. ನಮ್ಮ ಮನೆ, ಪರಿಸರ ಹಾಗೂ ಗ್ರಾಮವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಸ್ವಚ್ಚ ಪರಿಸರದ ಮೂಲಕ ಸ್ವಚ್ಚ ಭಾರತ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದರು.

ಅಲೈಯನ್ಸ್ ಕ್ಲಬ್ ನ ಜಿಲ್ಲಾ ಗವರ್ನರ್ ಸುನೀಲ್ ಶೆಟ್ಟಿ ಮಾತನಾಡಿ,  ಗಾಂಧೀಜಿಯ ಸ್ವಚ್ಛತೆ ಮತ್ತು ಸೇವೆಯ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಭಾರತ್ ಸ್ಕೌಟ್ಸ್ - ಗೈಡ್ಸ್ ಹಮ್ಮಿಕೊಂಡಿರುವ ಸಾಮೂಹಿಕ ಸ್ವಚ್ಛತಾ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ನಮ್ಮ ಸಂಸ್ಥೆ ಕೊಂಕಣ ರೈಲ್ವೇ ನಿಲ್ದಾಣದ ಅಭಿವೃದ್ದಿಗೆ ಅಗತ್ಯವಿರುವ ಸಹಕಾರ ನೀಡಲಿದೆ ಎಂದರು.

ಕಾರ್ಯಕ್ರಮದಲ್ಲಿ ಕೊಂಕಣ ರೈಲ್ವೇ ವಾಣಿಜ್ಯ ವಿಭಾಗದ ಹಿರಿಯ ಮೇಲ್ವಿಚಾರಕಿ ಶಾಲಿನಿ, ಬಡಗುಬೆಟ್ಟು ಕೋ ಆಪರೇಟಿವ್ ಸೊಸೈಟಿ ಜನರಲ್ ಮ್ಯಾನೇಜರ್ ರಾಜೇಶ್ ಶೇರಿಗಾರ್, ಭಾರತ್ ಸ್ಕೌಟ್ಸ್, ಗೈಡ್ಸ್ ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಸುಮನ್ ಶೇಖರ್, ರೈಲ್ವೆ ಅಧಿಕಾರಿಗಳು, ಸಿಬ್ಬಂದಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್, ಉಡುಪಿ ಘಟಕದ ಸದಸ್ಯರು, ಅಲೈಯನ್ಸ್ ಸಂಸ್ಥೆಯ ಸದಸ್ಯರು ಹಾಗೂ ವಿವಿಧ ಗಣ್ಯರು ಪಾಲ್ಗೊಂಡಿದ್ದರು.

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor