Udupi | ಜಿಲ್ಲಾಡಳಿತದ ವತಿಯಿಂದ ಗಾಂಧೀ ಜಯಂತಿ ಆಚರಣೆ
ಉಡುಪಿ : ಮಹಾತ್ಮ ಗಾಂಧೀಜಿ ಅವರು ಸತ್ಯ, ಅಹಿಂಸೆ ಮಾರ್ಗವನ್ನು ಅನುಸರಿಸಿ ದೇಶದ ಎಲ್ಲಾ ವರ್ಗದ ಜನರನ್ನು ಒಟ್ಟು ಗೂಡಿಸುವ ಮೂಲಕ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆದು ಅವರ ಕನಸನ್ನು ನನಸು ಮಾಡಬೇಕು. ಗಾಂಧೀ ತ್ಯಾಗವನ್ನು ಸದಾ ಸ್ಮರಿಸುತ್ತಿರಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದ್ದಾರೆ.
ನಗರದ ಅಜ್ಜರಕಾಡು ಭುಜಂಗ ಶೆಟ್ಟಿ ಪಾರ್ಕಿನ ಗಾಂಧಿ ಕಟ್ಟೆಯಲ್ಲಿ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ನಗರಸಭೆ ಉಡುಪಿ ಇವರ ಸಹಯೋಗದಲ್ಲಿ ಆಯೋಜಿಸಿಲಾದ ಜಿಲ್ಲಾಮಟ್ಟದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಸ್ವಚ್ಛತೆಗೆ ಗಾಂಧೀಜಿ ನೀಡುತಿದ್ದ ಆದ್ಯತೆಯನ್ನು ನೆನಪಿಸಿಕೊಂಡು ಅವರ ಆಶಯದಂತೆ ಪರಿಸರದ ಸ್ವಚ್ಛತೆಗೆ ವಿಶೇಷ ಮಹತ್ವವನ್ನು ನೀಡಬೇಕು ಎಂದ ಜಿಲ್ಲಾಧಿಕಾರಿ, ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 122ನೇ ಜನ್ಮ ದಿನಾಚರಣೆ ಶುಭವನ್ನು ಕೋರಿದರು.
ಗಾಂಧಿ ಜಯಂತಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು, ಮಹಾತ್ಮ ಗಾಂಧೀಜಿ ಅವರ ವಿಚಾರಧಾರೆ, ತತ್ವ ಹಾಗೂ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಿತ್ಯ ಜೀವನದಲ್ಲಿ ಪಾಲಿಸಬೇಕು ಎಂದರು.
ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಉಡುಪಿಯ ಅಜ್ಜರಕಾಡಿಗೆ ಭೇಟಿ ನೀಡಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರನ್ನು ಒಂದೆಡೆ ಸೇರಿಸಿ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದರು. ಅವರ ಸವಿನೆನಪಿಗಾಗಿ ಇಲ್ಲಿ ಗಾಂಧೀಜಿಯವರ ಪುತ್ಥಳ್ಳಿಯನ್ನು ಪಾರ್ಕಿನಲ್ಲಿ ನಿರ್ಮಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಆಬೀದ್ ಗದ್ಯಾಳ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ ನಾಯಕ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಶೆಟ್ಟಿ, ನಗರಸಭಾ ಆಯುಕ್ತ ಮಹಾಂತೇಶ್ ಹಂಗರಗಿ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ. ಮತ್ತಿತರರು ಉಪಸ್ಥಿತರಿದ್ದರು.