ಉಡುಪಿ : ಗಾಂಧೀಜಿಯವರ ತತ್ತ್ವಚಿಂತನೆಯ ಮೂಲ ಆಶಯವೆಂದರೆ, ನಮ್ಮನ್ನು ಮತ್ತೊಬ್ಬರು ಆಳಬಾರದು ಮಾತ್ರವಲ್ಲದೆ, ನಾವು ಯಾರು ಎಂಬುದನ್ನು ನಾವೇ ಅರಿತುಕೊಳ್ಳಬೇಕು ಎಂಬುದಾಗಿದೆ ಎಂದು ಬಾರಕೂರಿನ ಎಸ್‌ಆರ್‌ಎಸ್‌ಎಂಎನ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಪ್ರಸಾದ್ ರಾವ್ ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಶಿವರಾಮ ಕಾರಂತ ಟ್ರಸ್ಟ್ ಹಾಗೂ ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಕಾಲೇಜಿನ ಪಿ.ಜಿ.ಎ.ವಿ. ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾದ ಕಾರಂತರ ಚಿಂತನೆಯಲ್ಲಿ ಗಾಂಧೀಜಿ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡುತ್ತಿದ್ದರು.

ಉಪ್ಪಿನಂತಹ ಮೂಲಭೂತ ವಸ್ತುವನ್ನೂ ತಯಾರಿಸುವ ಸ್ವಾತಂತ್ರ್ಯ ಇಲ್ಲದಿರುವುದು ಸ್ವಾತಂತ್ರ್ಯಹೀನತೆಯ ಸಂಕೇತ ಎಂಬ ಸಂದೇಶವನ್ನು ಗಾಂಧೀಜಿ ಸಾರಿದರು. ರೈತರು ಹಾಗೂ ಬಡವರ್ಗದ ಅಸಹಾಯಕ ಪರಿಸ್ಥಿತಿಯನ್ನು ಅವರು ತಮ್ಮ ಚಳವಳಿಯ ಮೂಲಕ ಜನಾಂದೋಲನದ ರೂಪಕ್ಕೆ ತಂದರು. 1909ರಲ್ಲಿ ಗಾಂಧೀಜಿ ಬರೆದ ಹಿಂದ್ ಸ್ವರಾಜ್’ ಕೃತಿ ಅವರ ವೈಯಕ್ತಿಕ ಸಂವಿಧಾನದಂತಿದ್ದು, ಗಾಂಧೀಜಿಯವರ ಚಿಂತನೆಗಳನ್ನು ಅರಿಯಲು ಅತ್ಯಂತ ಮಹತ್ವದ ಕೃತಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಡಾ.ಶಿವರಾಮ ಕಾರಂತ ಟ್ರಸ್ಟ್‌ನ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ಇಂದು ಪ್ರಚಲಿತದಲ್ಲಿರುವ ಸ್ವದೇಶಿ ಚಳವಳಿ, ಸ್ವಚ್ಛತಾ ಅಭಿಯಾನ ಸೇರಿದಂತೆ ಹಲವು ಚಳವಳಿಗಳ ಮೂಲ ಪ್ರೇರಣೆ ಗಾಂಧೀಜಿಯವರ ತತ್ತ್ವಚಿಂತನೆಯಲ್ಲಿದೆ ಎಂದು ಹೇಳಿದರು.

ಗಾಂಧೀಜಿಯವರನ್ನು ಸ್ಮರಿಸುವ ಸಂದರ್ಭದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಕಡೆಗಣಿಸಲಾಗಿಲ್ಲ. ಲಾಲ್ ಬಹದ್ದೂರ್ ಶಾಸ್ತ್ರಿಯವರು ಸ್ವತಃ ಗಾಂಧಿ ಶಿಷ್ಯ ಮತ್ತು ತಮ್ಮ ಬದುಕಿನಲ್ಲಿ ಗಾಂಧೀವಾದಿ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದರು ಎಂದು ಅವರು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲೆ ಪ್ರೊ.ನಿಕೇತನ ಮಾತನಾಡಿ, ಗಾಂಧೀಜಿಯವರ ಪ್ರಬಲ ಅಸ್ತ್ರಗಳಾದ ಸತ್ಯ ಮತ್ತು ಅಹಿಂಸೆ ಇಂದಿಗೂ ಪ್ರಸ್ತುತವಾಗಿವೆ. ಗಾಂಧೀಜಿಯವರ ಸರಳ ಜೀವನ ಹಾಗೂ ಮೌಲ್ಯಗಳನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿ ಕೊಳ್ಳಬೇಕು ಎಂದರು.

ಶಿವರಾಮ ಕಾರಂತ ಟ್ರಸ್ಟ್‌ನ ಸದಸ್ಯ ಸಂಚಾಲಕ ಸತೀಶ್ ಕೊಡವೂರು, ವರ್ಷ, ಪ್ರಾಧ್ಯಾಪಕರಾದ ಪ್ರೊ.ಪಿ.ಬಿ.ಪ್ರಸನ್ನ, ರೇಖಾ ಎಸ್.ಎನ್., ಜಯಲಿಂಗ ಮೂರ್ತಿ, ಸಚಿನ್ ಕೇಣಿರ್ಕ, ಪುರುಷೋತ್ತಮ, ಪುನೀತ್ ತೆಂಡೂಲ್ಕರ್, ಸಂತೋಷ್ ಪ್ರಭು ಎಂ., ಅಶ್ವಿಜಾ ಮೊದಲಾದವರು ಉಪಸ್ಥಿತರಿದ್ದರು.

ಕಾಲೇಜಿನ ಎನ್‌ಎಸ್‌ಎಸ್ ಹಾಗೂ ಯುವ ರೆಡ್‌ಕ್ರಾಸ್ ಘಟಕಗಳ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಯುವ ರೆಡ್‌ಕ್ರಾಸ್ ಘಟಕದ ಸಂಚಾಲಕಿ ಕವಿತಾ ಸ್ವಾಗತಿಸಿದರು. ಡಾ.ಸಫಿಯಾ ವಂದಿಸಿದರು. ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ರಾಕೇಶ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor