×
Ad

ಜು.14: ಉಡುಪಿ ಜಿಲ್ಲೆಯಾದ್ಯಂತ ಎಸ್‌ವೈಎಸ್ ಸೌಹಾರ್ದ ಸಂಚಾರ

Update: 2025-07-12 19:58 IST

ಉಡುಪಿ, ಜು.12: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್ ವೈಎಸ್) ವತಿಯಿಂದ ಜುಲೈ14ರಿಂದ 16ರವರೆಗೆ ‘ಹೃದಯ ಹೃದಯಗಳನ್ನು ಬೆಸೆಯೋಣ’ ಎಂಬ ಘೋಷಣೆಯೊಂದಿಗೆ ಸೌಹಾರ್ದ ಸಂಚಾರ ಕಾರ್ಯಕ್ರಮ ಕರಾವಳಿ ಜಿಲ್ಲೆಗಳಲ್ಲಿ ನಡೆಯಲಿದ್ದು, ಜು.14ರಂದು ಉಡುಪಿ ಜಿಲ್ಲೆಯಲ್ಲಿ ಸೌಹಾರ್ದ ಸಂದೇಶ ಜಾಥಾ ನಡೆಯಲಿದೆ ಎಂದು ಸೌಹಾರ್ದ ಸಂಚಾರ ಸಮಿತಿಯ ಜಿಲ್ಲಾ ಸಂಚಾಲಕ ಹಂಝತ್ ಹೆಜಮಾಡಿ ತಿಳಿಸಿದ್ದಾರೆ.

ಉಡುಪಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನ್ಯಾಯವಾದಿ ಹಂಝತ್, ಕರಾವಳಿ ಕರ್ನಾಟಕದ ಇತ್ತೀಚಿನ ಬೆಳವಣಿಗೆಗಳು ಶೀರಾ ಆತಂಕಕಾರಿಯಾಗಿದೆ. ಕರಾವಳಿ ಕರ್ನಾಟಕದಲ್ಲಿ ಕೋಮು ವೈಷಮ್ಯ ತೀವ್ರಗೊಳ್ಳುತ್ತಿದ್ದು ಹಲ್ಲೆ, ಹತ್ಯೆಗಳು ಸಾಮಾನ್ಯವಾಗುತ್ತಿದೆ. ಯಾರೂ ಯಾರನ್ನೂ ನಂಬಲಾಗದಂತೆ ಆತಂಕ ಕವಿದಿದೆ. ಇದು ಎಲ್ಲಾ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತಿದೆ. ಮನುಷ್ಯ ಮನಸ್ಸುಗಳ ನಡುವಿನ ಅಂತರ ಹೆಚ್ಚಾಗು ತ್ತಿದೆ. ಇದಕ್ಕೆಲ್ಲ ಇತಿಶ್ರೀ ಹಾಡುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದರು.

‘ಹೃದಯ ಹೃದಯಗಳನ್ನು ಬೆಸೆಯೋಣ’ ಎಂಬ ಘೋಷಣೆಯೊಂದಿಗೆ ಸೌಹಾರ್ದ ಸಂಚಾರ ಜುಲೈ 14ರಿಂದ 16ರವರೆಗೆ ಕುಂದಾಪುರದಿಂದ ಸುಳ್ಯ ತನಕ ಸರ್ವ ಮತೀಯರನ್ನೂ ಜೊತೆಗೂಡಿಸಿಕೊಂಡು ಸಾಗಲಿದ್ದು, ಸೌಹಾರ್ದ ಸಂದೇಶವನ್ನು ಸಮಾಜದ ಮುಂದೆ ತೆರೆದಿಡಲಿದೆ ಎಂದರು.

ಜು.14ರ ಸೋಮವಾರ ಬೆಳಗ್ಗೆ 8:00 ಗಂಟೆಗೆ ಕುಂದಾಪುರ ಅಸ್ವಯ್ಯದ್ ಯೂಸುಫ್ ವಲಿಯುಲ್ಲಾಹಿ ರವರ ದರ್ಗಾದಲ್ಲಿ ಝಿಯಾರತ್‌ನೊಂದಿಗೆ ಆರಂಭವಾಗುವ ಸೌಹಾರ್ದ ಸಂಚಾರ, 9:00 ಗಂಟೆಗೆ ಕುಂದಾಪುರ ದರ್ಗಾದಿಂದ ಶಾಸ್ತ್ರಿ ಸರ್ಕಲ್ ತನಕ ಸೌಹಾರ್ದ ಕಾಲ್ನಡಿಗೆ ಜಾಥಾ ಹಾಗೂ ಸೌಹಾರ್ದ ಸಂದೇಶ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.

ಅಪರಾಹ್ನ 12 ಗಂಟೆಗೆ ಉಡುಪಿ ಜಾಮಿಯಾ ಮಸೀದಿಯಿಂದ ಮದರ್ ಆಫ್ ಸೋರೋಸ್ ಚರ್ಚ್ ತನಕ ಕಾಲ್ನಡಿಗೆ ಜಾಥಾ ಹಾಗೂ ಸೌಹಾರ್ದ ಸಂದೇಶ ನಡೆಯಲಿದೆ. ಅಪರಾಹ್ನ 3:30ಕ್ಕೆ ಕಾರ್ಕಳ ಗ್ಯಾಲಕ್ಸಿ ಹಾಲ್‌ನಿಂದ ಬಸ್ಸು ನಿಲ್ದಾಣದವರೆಗೆ ಕಾಲ್ನಡಿಗೆ ಜಾಥಾ ಹಾಗೂ ಸೌಹಾರ್ದ ಸಂದೇಶ ನಡೆಯಲಿದೆ. ಸಂಜೆ 5:30ಕ್ಕೆ ಕಾಪು ಪೊಲಿಪು ಜಾಮಿಯಾ ಮಸೀದಿಯಿಂದ ಕಾಪು ಪೇಟೆ ತನಕ ಸೌಹಾರ್ದ ನಡಿಗೆ ಹಾಗೂ ಸಂದೇಶ ಭಾಷಣ ನಡೆದರೆ, ರಾತ್ರಿ 8:00 ಗಂಟೆಗೆ ಪಡುಬಿದ್ರಿಯಲ್ಲಿ ಸೌಹಾರ್ದ ಭಾಷಣ ನಡೆಯಲಿದೆ ಎಂದರು.

ಈ ಸೌಹಾರ್ದ ಸಂಚಾರದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು, ಕ್ರೈಸ್ತ ಧರ್ಮಗುರುಗಳು, ಮುಸ್ಲಿಂ ಧಾರ್ಮಿಕ ವಿದ್ವಾಂಸರು, ಸಾಮಾಜಿಕ ಶೈಕ್ಷಣಿಕ ಹಾಗೂ ಇನ್ನಿತರ ಪ್ರಮುಖ ನಾಯಕರುಗಳು ಭಾಗವಹಿಸಲಿದ್ದಾರೆ ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಉಪಾಧ್ಯಕ್ಷ ಹಬೀಬ್ ಆಲಿ, ಪ್ರಧಾನ ಕಾರ್ಯದರ್ಶಿ ಎಂ. ಸಲೀಂ ಪಕೀರ್ಣಕಟ್ಟೆ, ಎಸ್‌ವೈಎಸ್ ಜಿಲ್ಲಾ ಸಮಿತಿ ಉಪಾಧ್ಯಕ್ಷ ಹುಸೈನ್ ಸಅದಿ ಹೊಸ್ಮಾರು, ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಹಾರಿಸ್ ಹೆಮ್ಮಾಡಿ, ಸ್ವಾಗತ ಸಮಿತಿ ಸಂಚಾಲಕ ಇಂತಿಯಾಝ್ ಹೊನ್ನಾಳ, ಕಾರ್ಯದರ್ಶಿ ತೌಫೀಕ್ ಅಂಬಾಗಿಲು ಉಪಸ್ಥಿತರಿದ್ದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News