ಉಡುಪಿ ಜಿಲ್ಲೆಯಾದ್ಯಂತ ಕನ್ನಡ ನಾಮಫಲಕ ಅಳವಡಿಕೆಗೆ 15 ದಿನಗಳ ಗಡು: ಕರವೇ ಎಚ್ಚರಿಕೆ
ಉಡುಪಿ, ಆ.6: ಉಡುಪಿ ನಗರಸಭಾ ವ್ಯಾಪ್ತಿಯೂ ಸೇರಿದಂತೆ ಜಿಲ್ಲೆಯಾದ್ಯಂತ ನಾಮಫಲಕಗಳಲ್ಲಿ ಪ್ರಾಧಾನ್ಯತೆ ಯನ್ನು ನೀಡಿ ಕನ್ನಡ ಭಾಷೆಯನ್ನು ಅಳವಡಿಸಲು ಇನ್ನ 15 ದಿನಗಳ ಕಾಲಾವಕಾಶ ನೀಡಲಿದ್ದು, ಅನಂತರ ಅವುಗಳ ವಿರುದ್ಧ ಹೋರಾಟ ಪ್ರಾರಂಭಿಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ)ಯ ಉಡುಪಿ ಜಿಲ್ಲಾಧ್ಯಕ್ಷ ಅ.ರಾ.ಪ್ರಭಾಕರ ಪೂಜಾರಿ ಎಚ್ಚರಿಸಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಅಂಗಡಿ, ಶೋರೂಮ್, ಹೊಟೇಲ್, ಶಾಲಾ-ಕಾಲೇಜುಗಳು, ವಿವಿಧ ಕಾರ್ಖಾನೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅಳವಡಿಸಲು ಸರಕಾರ ಆದೇಶ ಹೊರಡಿಸಿದ್ದರೂ, ಅದು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂದರು.
ಉಡುಪಿ, ಮಣಿಪಾಲ ಆಸುಪಾಸಿನ, ಜಿಲ್ಲೆಯ ಅನೇಕ ಅಂಗಡಿ, ಶೋರೂಮ್‌ಗಳು, ಹೊಟೇಲ್, ಶಾಲಾ ಕಾಲೇಜು ಗಳು ಅನ್ನೂ ಕನ್ನಡ ನಾಮಫಲಕ ಅಳವಡಿಸಿಲ್ಲ. ಇದರಿಂದ ಉಡುಪಿ ಜಿಲ್ಲೆಯಲ್ಲಿ ಕನ್ನಡ ಮಾಯವಾಗುತ್ತಿದೆ ಎಂದು ದೂರಿದರು.
ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಯವರಿಗೆ ಹಾಗೂ ಇಂದು ಉಡುಪಿ ನಗರಸಭೆಯ ಪೌರಾಯುಕ್ತರಾದ ಮಹಾಂತೇಶ್ ಹಂಗರಗಿ ಅವರಿಗೆ ಮನವಿ ಸಲ್ಲಿಸಿ ಕನ್ನಡ ಕಡ್ಡಾಯವಾಗಿ ಅನುಷ್ಠಾನಗೊಳಿಸುವಂತೆ ಮನವಿ ಮಾಡಲಾಗಿದೆ ಎಂದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರು ಇತ್ತೀಚೆಗೆ ಕರೆದ ಸಭೆಯಲ್ಲೂ ಈ ವಿಷಯ ಪ್ರಸ್ತಾಪಿಸಿರುವುದಾಗಿ ಪ್ರಭಾಕರ ಪೂಜಾರಿ ಹೇಳಿದರು.
ನಾಮಫಲಕಗಳಲ್ಲಿ ಶೇ.60ರಷ್ಟು ಬಾಗದಲ್ಲಿ ಕನ್ನಡ ಮುಂದಿನ 15 ದಿನ ದೊಳಗೆ ಕಡ್ಡಾಯವಾಗಿ ಜಾರಿಗೊಳ್ಳಲೇ ಬೇಕು. ಇಲ್ಲದಿದ್ದರೆ ನಾವು ಹೋರಾಟಕ್ಕೆ ಬೀದಿಗಿಳಿಯುತ್ತೇವೆ ಎಂದರು. ಮುಂದೆ ಕೊಲ್ಲೂರಿನಲ್ಲೂ ನಮ್ಮ ಹೋರಾಟ ನಡೆಯಲಿದೆ. ಅಲ್ಲಿ ಕನ್ನಡವೇ ಮಾಯವಾಗುತಿದ್ದು ಮಲಯಾಳಂ ವಿಜೃಂಭಿಸುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಹೇಮಂತ ಕುಮಾರ್, ಉಪಾಧ್ಯಕ್ಷರಾದ ಅನಿಲ್ ಪೂಜಾರಿ, ಶಾಬುದ್ದೀನ್, ಜಿಲ್ಲಾ ಪ್ರಧಾನ ಸಂಚಾಲಕ ಕಿರಣ್ ಪಿಂಟೊ ಉಪಸ್ಥಿತರಿದ್ದರು.