46ನೇ ʼಸ್ವಚ್ಛ ಕಡಲತೀರ-ಹಸಿರು ಕೋಡಿ’ ಅಭಿಯಾನ
ಕುಂದಾಪುರ, ಮೇ 9: ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ‘ಸ್ವಚ್ಛ ಕಡಲತೀರ-ಹಸಿರು ಕೋಡಿ’ ಇದರ 46ನೇ ಅಭಿಯಾನ ಶನಿವಾರ ಜರಗಿತು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ.ಅಬ್ದುಲ್ ರೆಹಮಾನ್ ಬ್ಯಾರಿ ಅಭಿಯಾನವನ್ನುದ್ದೇಶಿಸಿ ಮಾತನಾಡಿ, ಕಡಲು ಕೇವಲ ಮೀನುಗಳಿರುವ ಜಾಗವಲ್ಲ, ಬದಲಾಗಿ ಅದು ನಮ್ಮ ಪ್ರಪಂಚದ ಅತಿ ಮುಖ್ಯವಾದ ಆಧಾರ ಸ್ತಂಭವಾಗಿದೆ. ನಮ್ಮ ಊರಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಒಂದು ಪುಣ್ಯದ ಕೆಲಸವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಅಭಿಯಾನದಲ್ಲಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿಶ್ವಸ್ಥ ಮಂಡಳಿಯ ಸದಸ್ಯ ಡಾ.ಆಸೀಫ್ ಬ್ಯಾರಿ, ಕೋಡಿ ಚಕ್ರೇಶ್ವರಿ ದೇವಸ್ಥಾನದ ಧರ್ಮದರ್ಶಿ ಗೋಪಾಲ ಪೂಜಾರಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಪ್ರಭಾಕರ ಶೇರಿಗಾರ್, ಅಷ್ಪಾಕ್, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ವಿಭಾಗಗಳ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಮುಖ್ಯಸ್ಥರು, ಸಂಸ್ಥೆಯ ಬೋಧಕ - ಬೋಧಕೇತರ ಸಿಬ್ಬಂದಿಗಳು ಮತ್ತು ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಕನ್ನಡ ಉಪನ್ಯಾಸಕಿ ಸುಮನ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.