ಬರ ಪರಿಹಾರಕ್ಕೆ 5,000 ಕೋಟಿ ರೂ. ಬಿಡುಗಡೆ ಮಾಡಿ: ಕೋಟ ಶ್ರೀನಿವಾಸ ಪೂಜಾರಿ
ಉಡುಪಿ, ಅ.25: ರಾಜ್ಯದಲ್ಲಿ ಬರದಿಂದಾಗಿ ರೈತರು 30,000ಕೋಟಿ ರೂ. ಮೌಲ್ಯದ ಬಿತ್ತನೆ ಬೀಜ, ಗೊಬ್ಬರ, ಬೆಳೆ ನಾಶ ಅನುಭವಿಸಿದ್ದು ಕನಿಷ್ಠ 5,000 ಕೋಟಿ ರೂ. ಪರಿಹಾರ ಕೂಡಲೇ ಬಿಡುಗಡೆ ಮಾಡಿ ರೈತರ ಕಣ್ಣೀರೊರೆಸುವ ಕೆಲಸ ವನ್ನು ರಾಜ್ಯ ಸರಕಾರ ಮಾಡಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.
ಬುಧವಾರ ತನ್ನ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಅಪಾರ ನಿರೀಕ್ಷೆಯಿಟ್ಟ ಜನರ ಬಹುಮತದ ಆಧಾರದಲ್ಲಿ ಅಧಿಕಾರಿಕ್ಕೇರಿ ಆರು ತಿಂಗಳು ಪೂರೈಸಿದ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರ ಉತ್ತಮ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದರು.
ರಾಜ್ಯ ಕಂಡುಕೇಳರಿಯದ ಬರ 227 ತಾಲೂಕುಗಳ ಪೈಕಿ 195 ತಾಲೂಕುಗಳನ್ನು ತೀವ್ರವಾಗಿ ಕಾಡಿದೆ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಸರಕಾರ ಗೋಶಾಲೆ ಇನ್ನೂ ಆರಂಭಿಸಿಲ್ಲ. ಕೇಂದ್ರಕ್ಕೆ ವರದಿ ಸಲ್ಲಿಸಿ ಸುಮ್ಮನಿರುವ ಸರಕಾರ, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಎದುರಾಗಬಹುದಾದ ಹಾಹಾಕಾರ ಎದುರಿಸಲು ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ ಎಂದು ಟೀಕಿಸಿದರು.
ಬರ ಅಧ್ಯಯನ ಮಾಡೋದರಲ್ಲೇ ಸರಕಾರ ಕಾಲ ಕಳೆಯುತ್ತಿದ್ದು ಏಳು ಗಂಟೆ ತ್ರಿಫೇಸ್ ವಿದ್ಯುತ್ ಎರಡು ಗಂಟೆಗೆ ಇಳಿ ದಿದ್ದು ರೈತರು ಕಂಗಾಲಾಗಿದ್ದಾರೆ. ರಾಜ್ಯದ 54 ಲಕ್ಷ ರೈತರಿಗೆ ಬಿಜೆಪಿ ಸರಕಾರ ನೀಡುತ್ತಿದ್ದ 4,000ರೂ. ಕಿಸಾನ್ ಸಮ್ಮಾನ್ ನಿಧಿಯನ್ನು ಕಾಂಗ್ರೆಸ್ ಸರಕಾರ ನೀಡುತ್ತಿಲ್ಲ ಎಂದರು.
ಶಾಸಕರು, ನಾಯಕರಿಂದಾಗಿ ಸರಕಾರ ವಿಭಜನೆಯಾಗಿದೆ. ಶಾಸಕರ ನೇತೃತ್ವದ ಅಭಿವೃದ್ಧಿಗೆ ಒಂದು ಕೋ.ರೂ.ಕೂಡ ಬಿಡುಗಡೆಯಾಗಿಲ್ಲ. ಶಾಲೆಯಲ್ಲಿ ವಿವೇಕ ಕೊಠಡಿಗಳು ನಿರ್ಮಾಣ ಆಗುತ್ತಿಲ್ಲ. 9000 ಕೊಠಡಿ ನಿರ್ಮಾಣ ಬಾಕಿಯಿದೆ. ಶಾಸಕರು ವಿಧಾನಸೌಧದ ಕಡೆಗೆ ಬರುತ್ತಿಲ್ಲ ಎಂದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಶಾಸನಬದ್ಧ 35,000ಕೋಟಿ ರೂ. ಅನುದಾನದಲ್ಲಿ ಒಂದು ನಯಾ ಪೈಸೆಯನ್ನೂ ಬಿಡುಗಡೆ ಮಾಡಿಲ್ಲ. 15,000ಕೋಟಿ ರೂ. ಮೊತ್ತವನ್ನು ಗ್ಯಾರಂಟಿ ಯೋಜನೆಗೆ ವರ್ಗ ಮಾಡಿದ್ದು, ಅಕ್ಷಮ್ಯ ಅಪರಾಧ ಎಂದರು.
ಬಿಜೆಪಿ ಕಾರ್ಯಕರ್ತ ಶಿವಶಂಕರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್‌ಗೊಂದು ಕಾನೂನು, ಈ ಹಿಂದೆ ಸಚಿವ ಈಶ್ವರಪ್ಪ ರಾಜೀನಾಮೆಗೊಂದು ಕಾನೂನು ಅನುಸರಿಸೋದು ಸರಿಯಲ್ಲ. ಬಡವರ ಪರವಾಗಿ ಕಾಂಗ್ರೆಸ್ ಕಾರ್ಯನಿರ್ವಹಿಸದಿದ್ದರೆ ಬೀದಿಗಿಳಿದು ಹೋರಾಡುತ್ತೇವೆ ಎಂದು ಎಚ್ಚರಿಸಿದರು.