ಜ.7ರಂದು ಜಿಲ್ಲಾ ಮಟ್ಟದ ಸಹಕಾರ ಕ್ರೀಡಾಕೂಟ ‘ಸಪ್ತವರ್ಣ-2024’: ಡಾ.ಎಂ.ಎನ್.ರಾಜೇಂದ್ರ ಕುಮಾರ್
ಉಡುಪಿ, ಡಿ.2: ಉಡುಪಿ ಜಿಲ್ಲೆಯ ಸಹಕಾರ ಸಂಸ್ಥೆಗಳ ನೌಕರರು, ಆಡಳಿತ ಮಂಡಳಿ ಸದಸ್ಯರು, ನವೋದಯ ಸ್ವ-ಸಹಾಯ ಸಂಘಗಳ ಸದಸ್ಯರ ಸಹಕಾರ ಕ್ರೀಡಾಕೂಟ ‘ಸಪ್ತವರ್ಣ-2024’ ಮುಂದಿನ ಜನವರಿ 7ರ ರವಿವಾರ ಉಡುಪಿಯ ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ. ಎನ್.ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ಕ್ರೀಡಾಕೂಟದ ಸಂಘಟನೆಯ ಕುರಿತಂತೆ ಡಯಾನ ಹೊಟೇಲ್ ಸಭಾಂಗಣದಲ್ಲಿ ನಡೆದ ಸಹಕಾರಿಗಳ ಪೂರ್ವಭಾವಿ ಸಮಾಲೋಚನಾ ಸಭೆಯ ಕೊನೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮಂಗಳೂರು, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಉಡುಪಿ ಹಾಗೂ ಉಡುಪಿ ಜಿಲ್ಲೆಯ ಸಮಸ್ತ ಸಹಕಾರ ಸಂಸ್ಥೆಗಳ ಸಹಯೋಗದೊಂದಿಗೆ ಒಂದು ದಿನದ ಈ ಕ್ರೀಡಾಕೂಟ ನಡೆಯಲಿದೆ ಎಂದು ಅವರು ವಿವರಿಸಿದರು.
ಕ್ರೀಡಾಕೂಟದಲ್ಲಿ ಉಡುಪಿ ಜಿಲ್ಲೆಯ ಸಹಕಾರ ಸಂಸ್ಥೆಗಳ ನೌಕರರು, ಆಡಳಿತ ಮಂಡಳಿ ಸದಸ್ಯರು ಹಾಗೂ ನವೋದಯ ಸ್ವಸಹಾಯ ಸಂಘಗಳ ಸದಸ್ಯರು ಸೇರಿ ಸುಮಾರು 15,000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ರಾಜೇಂದ್ರ ಕುಮಾರ್ ತಿಳಿಸಿದರು.
ಕ್ರೀಡಾಕೂಟದಲ್ಲಿ ಭಾಗವಹಿಸುವ ಸುಮಾರು 10,000 ಮಹಿಳಾ ಹಾಗೂ 5000 ಪುರುಷ ಸಹಕಾರಿಗಳಿಂದ ಆಕರ್ಷಕ ಪಥಸಂಚಲನ ಕೂಟದ ಪ್ರಾರಂಭದಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ನಡೆಯಲಿದೆ ಎಂದರು.
ಕ್ರೀಡಾಕೂಟದಲ್ಲಿ 55ವರ್ಷ ಕೆಳಗಿನವರು ಹಾಗೂ 55 ವರ್ಷ ಮೇಲಿನ ಪುರುಷ ಹಾಗೂ ಮಹಿಳಾ ವಿಭಾಗ ಸೇರಿ ಒಟ್ಟು ನಾಲ್ಕು ವಿಭಾಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಎಲ್ಲಾ ವಿಭಾಗಗಳಿಗೂ 100ಮೀ.ಓಟ, ಗುಂಡೆಸೆತ, ಸಂಗೀತ ಕುರ್ಚಿ ಹಾಗೂ ಹಗ್ಗ-ಜಗ್ಗಾಟ ಸ್ಪರ್ಧೆಗಳು ನಡೆಯಲಿವೆ ಎಂದು ಎಂ.ಎನ್.ಆರ್ ನುಡಿದರು.
ಮುಂದಿನ ಜನವರಿ 18ರಂದು ಉಡುಪಿಯಲ್ಲಿ ನಡೆಯುವ ಪುತ್ತಿಗೆ ಶ್ರೀಗಳ ಪರ್ಯಾಯ ಮಹೋತ್ಸವಕ್ಕೆ ಎಸ್‌ಸಿಡಿಸಿಸಿ ಹಾಗೂ ನವೋದಯ ಸ್ವಸಹಾಯ ಸಂಘಗಳ ವತಿಯಿಂದ ಬೃಹತ್ ಹೊರೆ ಕಾಣಿಕೆಯನ್ನು ಮೆರವಣಿಗೆಯ ಮೂಲಕ ತಂದು ಮಠಕ್ಕೆ ಅರ್ಪಿಸಲಾಗುವುದು ಎಂದೂ ರಾಜೇಂದ್ರ ಕುಮಾರ್ ಪ್ರಕಟಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಉಪಾಧ್ಯಕ್ಷ ಅಶೋಕಕುಮಾರ್ ಬಲ್ಲಾಳ್, ಎಸ್‌ಸಿಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರಾದ ಬೆಳಪು ದೇವಿಪ್ರಸಾದ್ ಶೆಟ್ಟಿ, ರಾಜು ಪೂಜಾರಿ, ವಾದಿರಾಜ ಶೆಟ್ಟಿ, ರಾಜೇಶ್ ರಾವ್ ಪಾಂಗಾಳ, ಜಿಲ್ಲಾ ಸಹಕಾರಿ ಯೂನಿಯನ್‌ನ ನಿರ್ದೇಶ ಮಂಜಯ್ಯ ಶೆಟ್ಟಿ ಹಾಗೂ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಅರುಣ್‌ಕುಮಾರ್ ಎಸ್. ವಿ. ಅವರು ಉಪಸ್ಥಿತರಿದ್ದರು.