×
Ad

ಡಿ.9ರಿಂದ ಉಡುಪಿ ಐತಿಹಾಸಿಕ ಸಬ್‌ಜೈಲಿನ ವಾಸ್ತುಶಿಲ್ಪದ ಪ್ರದರ್ಶನ

Update: 2023-12-08 18:46 IST

ಉಡುಪಿ, ಡಿ.8: ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ಸ್ಮಾರಕವೆನಿಸಿರುವ ಉಡುಪಿಯ ಸಬ್‌ಜೈಲ್ ಬಗೆಗಿನ ವಿವರವಾದ ವಾಸ್ತುಶಿಲ್ಪದ ದಾಖಲಾತಿಯ ಪ್ರದರ್ಶನ ಡಿ.9ರಿಂದ 11ರವರೆಗೆ ಸಿಟಿ ಬಸ್ ನಿಲ್ದಾಣದ ಬಳಿ ಇರುವ ಜಂಗಮ ಮಠದ ಚಿತ್ರಕಲಾ ಮಂದಿರ ಕಲಾಶಾಲೆಯ ವಿಭೂತಿ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆ.

ಉಡುಪಿಯಲ್ಲಿ ಇಂದಿಗೂ ಉಳಿದಿರುವ ಕೆಲವೇ ಕೆಲವು ಪಾರಂಪರಿಕ ಕಟ್ಟಡಗಳ ಪೈಕಿ ಒಂದೆನಿಸಿರುವ ಈ ಸಬ್ ಜೈಲನ್ನು 1906ರಲ್ಲಿ ಕಟ್ಟಲಾಗಿದ್ದು 2009ರವರೆಗೂ ಈ ಕಟ್ಟಡದಲ್ಲಿ ಸರಕಾರಿ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದವು. ಅನಂತರ ಅದು ಪಾಳುಬಿದ್ದ ಕಟ್ಟಡದಂತಾಗಿದೆ.

ಸದ್ಯ ಪಾಳುಬಿದ್ದಿರುವ ಈ ಕಟ್ಟಡದ ಐತಿಹಾಸಿಕ ಅಸ್ತಿತ್ವವನ್ನು ದಾಖಲಿಸುತ್ತ ವಿಭಿನ್ನ ದೃಷ್ಟಿಕೋನದಿಂದ ಪ್ರದರ್ಶನವನ್ನು ನಡೆಸಲಾಗುತ್ತಿದೆ. ಇದರ ಛಾಯಾಚಿತ್ರಗಳು, ವಾಸ್ತು ವೈಶಿಷ್ಟ್ಯತೆಗಳನ್ನೆಲ್ಲ ಸಾರ್ವಜನಿಕರಿಗೆ ತೋರ್ಪಡಿಸುವ ಉದ್ದೇಶದಿಂದ ಡಿ.9ರಿಂದ 11ರ ಸೋಮವಾರದ ತನಕ ಪ್ರತಿದಿನ ಸಂಜೆ 3:00ರಿಂದ 7:00ಗಂಟೆಯವರೆಗೆ ವಿಭೂತಿ ಆರ್ಟ್ ಗ್ಯಾಲರಿಯಲ್ಲಿ ಇವು ಪ್ರದರ್ಶನಗೊಳ್ಳಲಿವೆ.

ಇದರ ಜೊತೆಜೊತೆಗೇ ಬ್ರಿಟಿಷ್ ಆಡಳಿತ ಕಾಲದಲ್ಲಿಯೇ ನಿರ್ಮಾಣ ಗೊಂಡು ಇಂದಿಗೆ ಪರ್ಯಾಯ ಬಳಕೆಯಲ್ಲಿರುವ ಭಾರತದ ಮೂರು ಪ್ರಮುಖ ಜೈಲುಗಳಾದ ಅಂಡಮಾನ್ ಸೆಲ್ಯುಲಾರ್ ಜೈಲ್, ಕೊಲ್ಕತ್ತಾದ ಅಲಿಫೋರ್ ಜೈಲ್ ಹಾಗೂ ಬೆಂಗಳೂರಿನ ಜೈಲುಗಳನ್ನು ಯಾವ ರೀತಿಯಲ್ಲಿ ಸಂರಕ್ಷಣೆಯನ್ನು ಮಾಡಿಕೊಳ್ಳುತ್ತ ಮರು ಬಳಕೆ ಮಾಡಲಾಗುತ್ತಿದೆ ಎಂಬುದರ ಸಂಪೂರ್ಣ ಚಿತ್ರಣವನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ.

ಈ ಕಾರ್ಯಕ್ರಮವನ್ನು ಇಂಡಿಯನ್ ನೇಶನಲ್ ಟ್ರಸ್ಟ್ ಫಾರ್ ಆರ್ಟ್ ಆಂಡ್ ಕಲ್ಚರಲ್ ಹೆರಿಟೇಜ್ ಸಂಸ್ಥೆಯ ಮಂಗಳೂರು ವಿಭಾಗ ಹಾಗೂ ಉಡುಪಿ ಮಣಿಪಾಲ ಉಪವಿಭಾಗದೊಂದಿಗೆ ಚಿತ್ರಕಲಾ ಮಂದಿರ ಕಲಾ ಶಾಲೆಯ ಸಹಯೋಗದಲ್ಲಿ ಪ್ರದರ್ಶಿಸಲಾಗುತ್ತಿದೆ.

ನಾಳೆ ಸಂಜೆ 5 ಗಂಟೆಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆಯ ಪೌರಾಯುಕ್ತರಾದ ರಾಯಪ್ಪ, ಚಿತ್ರಕಲಾ ಮಂದಿರ ಕಲಾಶಾಲೆಯ ನಿರ್ದೇಶಕರಾದ ಡಾ.ಯು.ಸಿ ನಿರಂಜನ್ ಮುಖ್ಯ ಅತಿಥಿಗಳಾಗಿ ಭಾಗವಹಿ ಸಲಿದ್ದಾರೆ. ಇಂಟ್ಯಾಕ್ ಮಂಗಳೂರು ವಿಭಾಗದ ಸಂಚಾಲಕ, ಆರ್ಕಿಟೆಕ್ಟ್ ಸುಭಾಷ್‌ಚಂದ್ರ ಬಸು, ಸದಸ್ಯರಾದ ಕಲಾವಿದ ಡಾ.ಜನಾರ್ದನ ಹಾವಂಜೆ ಮತ್ತು ಆರ್ಕಿಟೆಕ್ಟ್ ಶರ್ವಾಣಿ ಭಟ್ ಉಪಸ್ಥಿತ ರಿರುವರು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News