ಕಾರಂತರ ಕಾದಂಬರಿಗಳಲ್ಲಿ ವರ್ತಮಾನದ ತಲ್ಲಣ ಎದುರಿಸುವ ಅಸ್ತ್ರ: ಕೆ.ಪಿ.ಸುರೇಶ್ ಕಂಜರ್ಪಣೆ
ಉಡುಪಿ, ಡಿ.22: ಶಿವರಾಮ ಕಾರಂತರು ಬಹಳ ಶ್ರೇಷ್ಠ ಎನಿಸುವುದು ಅವರ ಕಾದಂಬರಿಗಳಿಂದಾಗಿ. ಪ್ರಸ್ತುತ ಕಾಲದ ಬಿಕ್ಕಟ್ಟು ಎದುರಿಸಲು ಅದರೊಂದಿಗೆ ಅನುಸಂಧಾನ ಮಾಡಲು ಬೇಕಾದ ಅಂಶಗಳು ಅವರ ಕಾದಂಬರಿ ಗಳಲ್ಲಿ ಇವೆ. ಅವರ ಕಾದಂಬರಿಗಳು ವರ್ತಮಾನದ ತಲ್ಲಣಗಳು ಹಾಗೂ ಆತಂಕಗಳನ್ನು ಎದುರಿಸಲು ಬೇಕಾದ ಅಸ್ತ್ರಗಳನ್ನು ನೀಡುತ್ತದೆ. ಎಂದು ಚಿಂತಕ ಕೆ.ಪಿ.ಸುರೇಶ್ ಕಂಜರ್ಪಣೆ ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆ ವತಿಯಿಂದ ಉಡುಪಿ ರಥಬೀದಿ ಗೆಳೆಯರು ಸಾಂಸ್ಕೃತಿಕ ವೇದಿಕೆಯ ಸಹಯೋಗದೊಂದಿಗೆ ಸೋಮವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ಉಪನ್ಯಾಸ ಮತ್ತು ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ‘ನಮ್ಮ ಕಾಲದಲ್ಲಿ ಕಾರಂತರು-ಒಂದು ವಿಶ್ಲೇಷಣೆ’ ಕುರಿತು ಉಪನ್ಯಾಸ ನೀಡಿದರು.
ಸದ್ಯ ಕರ್ನಾಟಕ ಸಾಂಸ್ಕೃತಿಕ ಬೌದ್ಧಿಕ ಚರ್ಚೆಯ ಸ್ಪೂರ್ತಿಯ ಮೂಲ ಬಸವಣ್ಣ, ಕುವೆಂಪು ಮತ್ತು ಅಂಬೇಡ್ಕರ್ ಮಾತ್ರ ಇದ್ದಾರೆ. ಕಳೆದ 25 ವರ್ಷಗಳ ಹಿಂದೆ ಕಾರಂತರು ಕೂಡ ಸ್ಪೂರ್ತಿಯಮೂಲದ ಭಾಗವಾಗಿ ದ್ದರು. ಆದರೆ ಕಳೆದ 20ವರ್ಷಗಳಿಂದ ಕಾರಂತರು ಅಲ್ಲಿ ಇಲ್ಲ. ಕಾರಂತರು ಯಾಕೆ ಸ್ಪೂರ್ತಿಯ ಮೂಲವಾಗಿ ಕರ್ನಾಟಕದ ಎಲ್ಲ ಚಲನಶೀಲ ಚಟುವಟಿಕೆಗಳ ಭಾಗವಾಗಿಲ್ಲ ಎಂಬುದು ಪ್ರಶ್ನೆಯಾಗಿದೆ ಎಂದರು.
ವರ್ತಮಾನದ ಜಿಜ್ಞಾಸೆ, ಬಿಕ್ಕಟ್ಟುಗಳಿಗೆ ಉತ್ತರ ಹಾಗೂ ಸವಾಲು ಆಗುವಂತಹ ಒಳನೋಟುಗಳನ್ನು ಕಾರಂತರ ಕಾದಂಬರಿ ಮೂಲಕ ನಾವು ಹುಡುಕುವ ಪ್ರಯತ್ನ ಮಾಡಿಲ್ಲ. ಕಾರಂತರ ಅತ್ಯಂತ ಶ್ರೇಷ್ಠ ಕೊಡುಗೆಗಳಾದ ಕಾದಂಬರಿಗಳಲ್ಲಿ ಬಿಕ್ಕಟ್ಟು ಎದುರಿಸುವ ಅಂಶಗಳನ್ನು ಗುರುತಿಸುವಲ್ಲಿ ನಾವು ನಿರ್ಲಕ್ಷ್ಯ ಮಾಡಿದ್ದೇವೆ ಎಂದರು.
ಈ ದೇಶದ ಎಲ್ಲ ಜ್ವಲಂತ ಸಮಸ್ಯೆಗಳ ಹೋರಾಟಗಳಲ್ಲಿ ಬಹಳ ಸ್ಪೂರ್ತಿಯ ನೆಲೆಯಾಗಿ ಬಹಳ ನೇರವಾಗಿ ಇದ್ದವರು ಕಾರಂತರು. ಅವರು 10 ವಿಶ್ವವಿದ್ಯಾನಿಲಯ ಮಾಡುವ ಕೆಲಸವನ್ನು ಹಾಗೂ 10 ಸಂಘಟನೆಗಳು ಮಾಡುವ ಗ್ರಾಮೀಣಾಬಿವೃದ್ಧಿ ಬೇಕಾದ ಕೆಲಸವನ್ನು ಕಾರಂತರು ಒಬ್ಬರೇ ಮಾಡಿದ್ದಾರೆ. ನಾಗರಿಕತೆ ಬೆಳೆಯಲು ಬೇಕಾದ ಶಿಕ್ಷಣ, ಸಾಹಿತ್ಯ, ಕಲೆ, ಗ್ರಾಮೀಣ ಅಭಿವೃದ್ಧಿ ಸೇರಿದಂತೆ ಎಲ್ಲ ಚಟುವಟಿಕೆಗಳನ್ನು ಕಾರಂತರು ಬೌದ್ಧಿಕವಾಗಿ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ಕಾರಂತರ ಶಕ್ತಿ ಅವರ ಕಾದಂಬರಿಯಲ್ಲಿ ಇತ್ತು. ಆ ಕಾದಂಬರಿಗಳೆಲ್ಲ ಒಂದು ಕಾಲಘಟ್ಟದ, ಒಂದು ನಾಗರಿಕತೆ ಬಹಳ ಅಪೂರ್ವ ರೂಪಕಗಳಿದ್ದವು ಅವರು ಕಾದಂಬರಿ ಮತ್ತು ಯಕ್ಷಗಾನದಂತಹ ಎರಡು ಕ್ಷೇತ್ರದಲ್ಲಿ ಬಹಳ ದೊಡ್ಡ ಸಾಧನೆಯನ್ನು ಮಾಡಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಅಧ್ಯಕ್ಷತೆಯನ್ನು ಡಾ.ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ವಹಿಸಿದ್ದರು. ಮುಖ್ಯ ಅತಿಥಿ ಯಾಗಿ ಕಾರ್ಕಳ ಯಕ್ಷ ರಂಗಾಯಣ ನಿರ್ದೇಶಕ ಬಿ.ಆರ್.ವೆಂಕಟರಮಣ ಐತಾಳ ಮಾತನಾಡಿದರು. ಈ ಸಂದರ್ಭದಲ್ಲಿ ಟ್ರಸ್ಟ್‌ನ ವಾರ್ತಾಪತ್ರವನ್ನು ಬಿಡುಗಡೆ ಮಾಡಲಾಯಿತು.
ರಥಬೀದಿ ಗೆಳೆಯರು ಕಾರ್ಯದರ್ಶಿ ಪ್ರೊ.ಸುಬ್ರಹ್ಮಣ್ಯ ಜೋಶಿ, ಟ್ರಸ್ಟ್‌ನ ಸದಸ್ಯ ಸಂಚಾಲಕ ಸತೀಶ್ ಕೊಡವೂರು ಉಪಸ್ಥಿತರಿದ್ದರು. ರಥಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ಸದಸ್ಯ ಸಂಚಾಲಕ ಸಂತೋಷ್ ನಾಯಕ್ ಪಟ್ಲ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಯಕ್ಷ ರಂಗಾಯಣ ರೆಪರ್ಟರಿ ಕಲಾವಿದರು ಪ್ರಸ್ತುತ ಪಡಿಸುವ ನಾಟಕ ‘ಸೋಮಿಯ ಸೌಭಾಗ್ಯ’ ಪ್ರದರ್ಶನಗೊಂಡಿತು.