ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಮುಂದೂಡಿಕೆ; ಜುಲೈ 09 ಕ್ಕೆ ನಡೆಸಲು ಜೆಸಿಟಿಯು ನಿರ್ಧಾರ
ಉಡುಪಿ: ಕೇಂದ್ರ ಕಾರ್ಮಿಕ ಸಂಘಟನೆಗಳು ಮೇ 20 ರಂದು ಕರೆ ನೀಡಿದ್ದ ಅಖಿಲ ಭಾರತ ಕಾರ್ಮಿಕರ ಮುಷ್ಕರವನ್ನು ಮುಂದೂಡಲಾಗಿದೆ.
ಮೇ 15, 2025 ರಂದು ಸಂಜೆ 5 ಗಂಟೆಗೆ ಸಭೆ ಸೇರಿದ್ದ ಜೆಸಿಟಿಯು ಮುಖಂಡರು ದೇಶದ ಈಗಿನ ಪರಿಸ್ಥಿತಿಯನ್ನು ಪರಿಗಣಿಸಿ, ಸಾರ್ವತ್ರಿಕ ಮುಷ್ಕರವನ್ನು ಮುಂದೂಡಲು ನಿರ್ಧರಿಸಿದ್ದೇವೆ ಎಂದು ಸಭೆಯ ಬಳಿಕ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದೇಶವು ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೂ ಭಾರತ ಸರ್ಕಾರವು ಕಾರ್ಮಿಕ ಸಂಹಿತೆಗಳ ಅನುಷ್ಠಾನಕ್ಕೆ ಆಕ್ರಮಣಕಾರಿಯಾಗಿ ಮುಂದಾಗಿದೆ. ಕೆಲಸದ ಅವಧಿ ಹೆಚ್ಚಿಸುವುದು ಸೇರಿದಂತೆ ಟ್ರೇಡ್ ಯೂನಿಯನ್ ಹಕ್ಕುಗಳನ್ನು ಹತ್ತಿಕ್ಕುತ್ತಿದೆ ಎಂದು ಕಾರ್ಮಿಕ ಸಂಘಟನೆಗಳ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಾರ್ವತ್ರಿಕ ಮುಷ್ಕರವನ್ನು ಜುಲೈ 9, 2025 ರಂದು (ಜೆಸಿಟಿಯು) ಭಾಗವಾಗಿರುವ ಎಲ್ಲ ಕೇಂದ್ರ ಕಾರ್ಮಿಕ ಸಂಘಟನೆಗಳು ಒಮ್ಮತದಿಂದ ನಿರ್ಧರಿಸಿವೆ.
ಮೇ 20, 2025 ರಂದು ಕೆಲಸದ ಸ್ಥಳ/ಸ್ಥಳೀಯ/ಜಿಲ್ಲಾ ಮಟ್ಟದಲ್ಲಿ ಮುಷ್ಕರಕ್ಕೆ ಸಜ್ಜುಗೊಳಿಸಲು ಕಾರ್ಯಕ್ರಮಗಳನ್ನು ನಡೆಸಲು ಕರೆ ನೀಡಿವೆ. ಹಾಗೆಯೇ ಮುಷ್ಕರದ ಅಂಗವಾಗಿ ನಡೆಸುತ್ತಿರುವ ಪ್ರಚಾರ, ಪ್ರಕ್ಷೋಭೆ / ಅಭಿಯಾನಗಳನ್ನು ಮುಂದುವರಿಸಬೇಕು ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹಾಗೂ ಜೆಸಿಟಿಯು ಸಂಚಾಲಕ ಕವಿರಾಜ್ ಎಸ್ ಕಾಂಚನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.