ತಂದೆಗೆ ಯಾವುದೇ ರೀತಿಯ ಹಿಂಸೆ ನೀಡದಂತೆ ಚೈತ್ರಾ ಕುಂದಾಪುರಗೆ ಕೋರ್ಟ್ ಆದೇಶ
ಚೈತ್ರಾ ಕುಂದಾಪುರ
ಕುಂದಾಪುರ: ಚೈತ್ರಾ ಕುಂದಾಪುರ ತನ್ನ ತಂದೆಗೆ ಯಾವುದೇ ರೀತಿಯ ದೈಹಿಕ, ಮಾನಸಿಕ ಹಿಂಸೆ ನೀಡದಂತೆ ಹಾಗೂ ಅವರ ಮನೆಯಲ್ಲಿ ನಿರ್ಭೀತಿಯಿಂದ ವಾಸಿಸಲು ಅನುವು ಮಾಡಿಕೊಂಡುವಂತೆ ಕುಂದಾಪುರ ಉಪವಿಭಾಗಾಧಿಕಾರಿಗಳ ನ್ಯಾಯಾಲಯ ನಿರ್ದೇಶಿಸಿದೆ.
ಕುಂದಾಪುರ ತಾಲೂಕಿನ ಚಿಕ್ಕನ್‌ಸಾಲ್ ರಸ್ತೆಯ ಬಾಲಕೃಷ್ಣ ನಾಯ್ಕ(71), ಪೋಷಕರು ಮತ್ತು ಹಿರಿಯ ನಾಗರಿಕರ ಪಾಲನೆ ಹಾಗೂ ಕಲ್ಯಾಣ ಕಾಯ್ದೆ 2007ರಡಿ ಪರಿಹಾರ ಕೋರಿ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು.
ಪತ್ನಿ ಹಾಗೂ ಮಗಳು ಚೈತ್ರಾ ಸೇರಿಕೊಂಡು ಮನೆಯ ದಾಖಲೆಗಳನ್ನು ಅವರ ಹೆಸರಿಗೆ ವರ್ಗಾಯಿಸುವಂತೆ ಒತ್ತಡ ಹೇರಿದ್ದು, ಬಾಲಕೃಷ್ಣ ನಾಯ್ಕ ಇದನ್ನು ನಿರಾಕರಿಸಿದ ಕಾರಣ ಚೈತ್ರಾ ತನ್ನ ತಾಯಿ ಹಾಗೂ ಸಹಚರರೊಂದಿಗೆ ಸೇರಿಕೊಂಡು ತನ್ನ ಅಕ್ರಮ ವ್ಯವಹಾರಗಳನ್ನು ಬಯಲು ಮಾಡಿದಲ್ಲಿ ಬಾಲಕೃಷ್ಣ ನಾಯ್ಕ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಬೆದರಿಕೆಯಿಂದ ಬಾಲಕೃಷ್ಣ ನಾಯ್ಕ ಮಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದು, ಹಿರಿಯ ಮಗಳನ್ನು ಭೇಟಿಯಾಗಲು ಆಗಾಗೆ ಊರಿಗೆ ಬರುತ್ತಿದ್ದರು. ಪ್ರಸ್ತುತ ಚೈತ್ರಾ ಹಾಗೂ ಆಕೆಯ ತಾಯಿ, ಬಾಲಕೃಷ್ಣ ನಾಯ್ಕ ಅವರಿಗೆ ಅವರ ಸ್ವಂತ ಮನೆಗೆ ಪ್ರವೇಶಿಸಲು ಅನುವು ಮಾಡದೆ, ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವುದಾಗಿ ದೂರಲಾಗಿದೆ.
ಚೈತ್ರಾ ವಿನಾಕಾರಣ ಸಾರ್ವಜನಿಕವಾಗಿ ಬಾಲಕೃಷ್ಣ ನಾಯ್ಕ ಅವರ ಮಾನ ಹಾನಿ ಮಾಡಿದ್ದು, ಈ ಬಗ್ಗೆ ಬಾಲಕೃಷ್ಣ ನಾಯ್ಕ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಚೈತ್ರಾ ವಿರುದ್ಧ ದೂರು ದಾಖಲಿಸಿದ್ದರು. ಮನೆಯಲ್ಲಿ ವಾಸಿಸಲು ಅನುವು ಮಾಡಿಕೊಡಬೇಕು ಮತ್ತು ಚೈತ್ರಾಳಿಂದ ಜೀವ ಮತ್ತು ಆಸ್ತಿಗೆ ರಕ್ಷಣೆ ಒದಗಿಸಬೇಕು. ಸಂಬಂಧಪಟ್ಟ ಆಸ್ತಿಯಿಂದ ಬರುವ ಬಾಡಿಗೆ ತನಗೆ ದೊರೆಯಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ವಾದ ಪ್ರತಿವಾದ ಆಲಿಸಿದ ಕುಂದಾಪುರ ಸಹಾಯಕ ಕಮಿಷನರ್ ರಶ್ಮೀ ಎಸ್.ಆರ್., ಬಾಲಕೃಷ್ಣ ನಾಯ್ಕ ಅವರ ಮನವಿಯನ್ನು ಪುರಸ್ಕರಿಸಿ, ಬಾಲಕೃಷ್ಣ ಅವರಿಗೆ ಯಾವುದೇ ರೀತಿಯ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡದಂತೆ ಹಾಗೂ ಅವರ ಮನೆಯಲ್ಲಿ ನಿರ್ಭೀತಿಯಿಂದ ವಾಸಿಸಲು ಅನುವು ಮಾಡಿಕೊಡುವಂತೆ ಚೈತ್ರಾಳಿಗೆ ನಿರ್ದೇಶಿಸಿದ್ದಾರೆ.
ಈ ನಿಯಮಗಳು 2009ರ ನಿಯಮ 21ರಂತೆ ಬಾಲಕೃಷ್ಣ ನಾಯ್ಕ ಅವರ ಜೀವ ಮತ್ತು ಸೊತ್ತಿಗೆ ರಕ್ಷಣೆ ನೀಡಲು ನಿಯಮಾನುಸಾರ ಕ್ರಮ ಕೈಗೊಳ್ಳಬೇಕೆಂದು ಕುಂದಾಪುರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಿಗೆ ಕೋರ್ಟ್ ಸೂಚನೆ ನೀಡಿದೆ. ಅರ್ಜಿದಾರರ ಪರವಾಗಿ ವಕೀಲ ಕೆ.ಸಿ.ಶೆಟ್ಟಿ ಕುಂದಾಪುರ ವಾದಿಸಿದ್ದರು.