ಬೈಕಾಡಿ ತಂದೆ-ತಾಯಿಯ ಹತ್ಯೆ ಪ್ರಕರಣ: ಆರೋಪಿ ಪೊಲೀಸ್ ಕಸ್ಟಡಿಗೆ
ಆರೋಪಿ ಮಾದಕ ದ್ರವ್ಯ ಸೇವಿಸಿಲ್ಲ, ಪರೀಕ್ಷೆಯಿಂದ ದೃಢ : ಎಸ್ಪಿ
ಶಾಹಿದ್ ಅಲಿ
ಬ್ರಹ್ಮಾವರ : ಗಾಂಧಿನಗರ ಬೈಕಾಡಿ ಎಂಬಲ್ಲಿ ಆ.23ರಂದು ತಂದೆ ತಾಯಿಯನ್ನು ಬರ್ಬರವಾಗಿ ಕೊಲೆಗೈದ ಪ್ರಕರಣದ ಆರೋಪಿ ಶಾಹಿದ್ ಅಲಿ(31) ಎಂಬಾತನನ್ನು ಬ್ರಹ್ಮಾವರ ಪೊಲೀಸರು ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಶಾಹಿದ್ ಅಲಿ, ತನ್ನ ತಂದೆ ಮೆಹಬೂಬ್ ಅಲಿ ಹಾಗೂ ತಾಯಿ ಸಂಶಾದ್ ಬೇಗಂ ಅವರನ್ನು ಮನೆಯಲ್ಲಿ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದನು. ಬಳಿಕ ಆತನೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಅದರಂತೆ ಆ.24ರಂದು ಆರೋಪಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಇದೀಗ ಹೆಚ್ಚಿನ ತನಿಖೆ, ಸಾಕ್ಷ್ಯ ಸಂಗ್ರಹ, ಮಹಜರು ಪ್ರಕ್ರಿಯೆ ನಡೆಸಲು ಆರೋಪಿಯನ್ನು ಪ್ರಕರಣದ ತನಿಖಾಧಿಕಾರಿ ಗೋಪಿಕೃಷ್ಣ ತಂಡ ಉಡುಪಿ ನ್ಯಾಯಾಲಯಕ್ಕೆ ಮನವಿ ಮಾಡಿ, ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದೆ. ಅದರಂತೆ ಆರೋಪಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಆರೋಪಿ ಮಾದಕ ದ್ರವ್ಯ ಸೇವಿಸಿ ಈ ಹತ್ಯೆ ಮಾಡಿರಬಹುದೆಂಬ ಸಂಶಯದಲ್ಲಿ ಆತನ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಪರೀಕ್ಷೆಯ ವರದಿಯಲ್ಲಿ ಆತ ಯಾವುದೇ ಮಾದಕ ದ್ರವ್ಯವನ್ನು ಸೇವಿಸಿರುವುದು ಕಂಡುಬಂದಿಲ್ಲ ಎಂದು ಉಡುಪಿ ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.