×
Ad

ಬೈರಂಪಳ್ಳಿ: ಧಮ್ಮ ದೀಕ್ಷೆ -ಮಹಿಷಾಸುರ ಹಬ್ಬ ಆಚರಣೆ

Update: 2023-10-15 18:40 IST

ಉಡುಪಿ: ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಮತ್ತು ದಲಿತ ಸಂಘರ್ಷ ಸಮಿತಿ ಭೀಮವಾದ ಉಡುಪಿ ಜಿಲ್ಲೆ ಇದರ ವತಿಯಿಂದ ಬಿ.ಆರ್.ಅಂಬೇಡ್ಕರ್ ಅವರ ಧಮ್ಮ ದೀಕ್ಷೆ ದಿನಾಚರಣೆ ಮತ್ತು ಮೂಲನಿವಾಸಿ ಗಳ ರಾಜ ಮಹಿಷಾ ಸುರ ಹಬ್ಬವನ್ನು ಶನಿವಾರ ಬೈರಂಪಳ್ಳಿ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ, ವಿಚಾರ ಮಂಡಿಸಿದ ಸಾಹಿತಿ, ಬರಹಗಾರ, ಲೇಖಕ ಡಾ.ಕೆ.ಎ.ಓಬಳೇಶ್, ಸಾವಿರಾರು ವರ್ಷಗಳ ಅಜ್ಞಾನದ ಕತ್ತಲೆಗೆ ಶಾಶ್ವತವಾಗಿ ಪರಿಹಾರವನ್ನು ರೂಪಿಸಿ ನಮ್ಮೆಲ್ಲರಿಗೂ ಸಮಾನತೆಯ ಅವಕಾಶ ವನ್ನು ಕಲ್ಪಿಸಿ ಕೊಟ್ಟ ಬಾಬಸಾಹೇಬ್ ಅಂಬೇಡ್ಕರ್ ಸ್ವಾಭಿಮಾನಕ್ಕೊಸ್ಕರ ಬೌದ್ದ ಧಮ್ಮ ಸ್ವೀಕರಿಸಿದರು. ಈ ನೆಲದ ಮೂಲ ನಿವಾಸಿಗಳ ರಾಜ ಮಹಿಷಾಸುರ. ಈ ದೇಶಕ್ಕೆ ವಲಸೆ ಬಂದ ಆರ್ಯರು ಮಹಿಷಾನನ್ನು ರಾಕ್ಷಸ ಎಂದು ಬಿಂಬಿಸಿ, ಚಿತ್ರಿಸಿದ್ದಾರೆ. ಮಹಿಷಾಸುರನ ಆಳ್ವಿಕೆಗೆ ಒಳಪಟ್ಟ ನಾಡು ಮಹಿಷಾ ಮಂಡಲ ವಾಗಿತ್ತು ಎಂದರು.

ಸಂಘಟನೆಯ ರಾಜ್ಯ ನಾಯಕ ಶೇಖರ್ ಹಾವಂಜೆ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದಲ್ಲಿ ಸಮಾನತೆಗಾಗಿ ಹೋರಾಡಿದ ನಾಯಕರುಗಳ ನಿಜವಾದ ಇತಿಹಾಸವನ್ನು ಮರೆಮಾಚಿ, ಮನುವಾದಿಗಳು ಸುಳ್ಳು, ತಪ್ಪು, ಕಾಲ್ಪನಿಕ ಕಥೆಗಳನ್ನು ಸೃಷ್ಟಿಸಿದರು. ಅಲ್ಲದೆ ಅದನ್ನೇ ಸತ್ಯ ಎಂದು ದೇಶದ ಬಹು ಜನರನ್ನು ವಂಚಿಸುತ್ತಾ ಬಂದರು. ಇದನ್ನು ಇಂದಿನ ವೈಜ್ಞಾನಿಕ ಮನೋಭಾವ ಹೊಂದಿರುವ ನಾವು ಅರ್ಥೈಸಿಕೊಂಡು ನಮ್ಮ ಪೂರ್ವಜರ ಇತಿಹಾಸವನ್ನು ಸಮಾಜಕ್ಕೆ ತಿಳಿಸಿ, ಅಂಬೇಡ್ಕರ್ ಮಾರ್ಗದಲ್ಲಿ ಸಾಗಿ ಸಮ ಸಮಾಜ ನಿರ್ಮಾಣ ಮಾಡಬೇಕು ಎಂದರು.

ಮುಖ್ಯ ಅತಿಥಿಯಾಗಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಕೆ.ಬಿ.ರಾಜು ಕೊಡಗು ಮಾತನಾಡಿ, ಆರ್ಯರು ವಲಸೆ ಬಂದು ಈ ದೇಶದ ಮೂಲನಿವಾಸಿಗಳಾದ ನಮ್ಮನ್ನು ವಿಂಗಡಿಸಿ ಜಾತಿಯನ್ನು ಸೃಷ್ಟಿಸಿದರು. ಇಂದು ಇಡೀ ದೇಶ ಆರ್ಯರ ಕೈವಶ ಆಗಿದೆ ಎಂದು ದೂರಿದರು.

ಅಧ್ಯಕ್ಷತೆಯನ್ನು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಪಕ್ಷದ ಉಡುಪಿ ಜಿಲ್ಲಾಧ್ಯಕ್ಷ ಸದಾಶಿವ ಶೆಟ್ಟಿ ಹೇರೂರು ವಹಿಸಿದ್ದರು. ದಸಂಸ ಜಿಲ್ಲಾ ಸಂಚಾಲಕ ಸಂಜೀವ ಕುಕ್ಕೆಹಳ್ಳಿ, ಜಿಲ್ಲಾ ಸಂಘಟನಾ ಸಂಚಾಲಕ ರಮೇಶ್ ಹರಿಖಂಡಿಗೆ ಉಪಸ್ಥಿತರಿದ್ದರು. ಶರತ್ ಎಸ್.ಹಾವಂಜೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News