ಬೆಳಗಾವಿ ಸದನದಲ್ಲಿ ಬೈಂದೂರು ರೈತರ ಹೋರಾಟದ ಪರ ಧ್ವನಿ
ಬೈಂದೂರು, ಡಿ.10: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಬೈಂದೂರಿನ ರೈತರ ಹೋರಾಟದ ಬಗ್ಗೆ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದರು.
ಬೈಂದೂರು ಗ್ರಾಮೀಣ ಭಾಗದ ರೈತರಿಗೆ ಪಟ್ಟಣ ಪಂಚಾಯತ್ ವ್ಯಾಪ್ತಿ ಸೇರ್ಪಡೆಯಿಂದಾಗಿ ತೊಂದರೆ ಹಾಗೂ ಕಳೆದ 81 ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿರುವ ರೈತರ ಸಮಸ್ಯೆ ಕುರಿತು ವಿವರವಾಗಿ ಅವರು ಬೆಳಕು ಚೆಲ್ಲಿದರು.
ಪ್ರಸ್ತುತ ಪಟ್ಟಣ ಪಂಚಾಯತ್ 54.4 ಕಿ.ಮೀ ವ್ಯಾಪ್ತಿ ಹೊಂದಿದೆ. ಗ್ರಾಮೀಣ ಪ್ರದೇಶವನ್ನು ಕೈಬಿಡುವಂತೆ ಪ್ರತಿಭಟಿಸುತ್ತಿದ್ದಾರೆ. ಪ್ರಸ್ತುತ ಈ ಭಾಗಕ್ಕೆ ಸವಲತ್ತು ನೀಡಲು ಅಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿಗಳು 5 ವಾರ್ಡ್ಗಳನ್ನು ಕೈಬಿಟ್ಟು ಪರಿಷ್ಕ್ರತ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಿದ್ದಾರೆ. ಹೀಗಾಗಿ ಸರಕಾರ ಈ ಪ್ರಸ್ತಾವನೆ ಕುರಿತು ಶೀಘ್ರ ರೈತರಿಗೆ ನ್ಯಾಯ ಒದಗಿಸಬೇಕೆಂದು ಅವರು ಪೌರಾಡಳಿತ ಸಚಿವರನ್ನು ಒತ್ತಾಯಿಸಿದರು.
ಗ್ರಾಮ ಪಂಚಾಯತ್ ಆಗಿರುವ ಬೈಂದೂರನ್ನು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಿರುವುದು ಅತ್ಯಂತ ಆವೈಜ್ಞಾನಿಕ ನಿಲುವು ಎನ್ನುವುದು ಹೋರಾಟಗಾರರ ವಾದ. ಇದರಲ್ಲಿ ಪಟ್ಟಣಕ್ಕಿಂತ ಹಳ್ಳಿ ಭಾಗವೇ ಹೆಚ್ಚಾಗಿದೆ. ಜತೆಗೆ ಅರಣ್ಯ ವ್ಯಾಪ್ತಿಯನ್ನೂ ಸೇರಿಸಿರುವುದರಿಂದ ತಾಂತ್ರಿಕ ಸಮಸ್ಯೆಯೂ ಎದುರಾಗಲಿದ್ದು, ರೈತರ ಹಿತದೃಷ್ಟಿಯಿಂದ ಕೂಡಲೇ ಸಮಸ್ಯೆಯನ್ನು ಬಗೆಹರಿಸಬೇಕೆಂದು ಮಾನ್ಯ ಪೌರಾಡಳಿತ ಮಂತ್ರಿಗಳನ್ನು ಶೂನ್ಯವೇಳೆಯಲ್ಲಿ ಒತ್ತಾಯಿಸಿದ್ದಾರೆ.