ಬಿಜೆಪಿಯವರು ಅಷ್ಟಮಂಗಲ ಪ್ರಶ್ನೆ ಪದ್ಧತಿಯನ್ನು ಅಪಹಾಸ್ಯ ಮಾಡತ್ತಿದ್ದಾರೆ: ಪ್ರದೀಪ್ ಬೆಲಾಡಿ ಆರೋಪ
ಕಾರ್ಕಳ: ಹಿಂದುತ್ವದ ಪ್ರತಿಪಾದಕರೆಂದು ಬೊಗಳೆ ಬಿಡುತ್ತಿರುವ ಬಿಜೆಪಿಯವರು ಹಿಂದೂ ಧರ್ಮದ ಪವಿತ್ರ ಅಷ್ಟಮಂಗಲ ಪ್ರಶ್ನೆ ಪದ್ಧತಿಯನ್ನು ಅಪಹಾಸ್ಯ ಮಾಡತ್ತಿದ್ದಾರೆ . ಅಷ್ಟಮಂಗಲ ಪ್ರಶ್ನೆ ಹಾಕಿದರೆ ತುಳುನಾಡಿನ ಕರ್ತ ಪರಶುರಾಮನಿಗೆ ನಡೆದಿರುವ ಮೋಸ, ಮೋಸ ಮಾಡಿದವರ ಹಾಗೂ ಮಾಡುತ್ತಿರುವವರ ಬಣ್ಣ ಬಯಲಾಗುತ್ತದೆ ಎಂದು ಕಾಂಗ್ರೆಸ್ ವಕ್ತಾರ ಪ್ರದೀಪ್ ಬೆಲಾಡಿ ಆರೋಪಿಸಿದರು.
ಅವರು ಕಾರ್ಕಳದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಬೆಟ್ಟದ ಮೇಲೆ ಬೆಂಕಿ ಕಾಣಿಸಿಕೊಳ್ಳುವುದು, ಮೂರ್ತಿ ಕಳ್ಳತನ ಹಾಗೂ ವಸ್ತುಗಳ ಕಳ್ಳತನದಂತಹ ದುರ್ಘಟನೆಗಳು ಏಕೆ ಸಂಭವಿಸುತ್ತವೆ ಎಂಬುದನ್ನು ತಿಳಿಯಲು ವಿದ್ವಾಂಸರು ಹಾಗೂ ಪುರೋಹಿತರನ್ನು ಒಳಗೊಂಡು ಅಷ್ಟಮಂಗಲ ಪ್ರಶ್ನೆ ಹಾಕಬೇಕು. ಇದರಿಂದ ತಪ್ಪು ಎಲ್ಲಿದೆ ಎಂಬ ನೈಜತೆ ಜನರಿಗೆ ತಿಳಿಯಬೇಕು ಎಂದರು.
“ಕಾರ್ಕಳ ತಾಲೂಕು ಯಾರಿಗೂ ಪಿತೃಾರ್ಜಿತ ಆಸ್ತಿಯಲ್ಲ. ಬೆದರಿಕೆಗಳು ಹಾಗೂ ಗೂಂಡಾ ಪ್ರವೃತ್ತಿಗಳು ಕಾರ್ಕಳದಂತಹ ಸಾತ್ವಿಕ ಭೂಮಿಗೆ ಶೋಭೆ ತರುವುದಿಲ್ಲ” ಎಂದು ಹೇಳಿದರು.
ಪರಶುರಾಮ ಥೀಮ್ ಪಾರ್ಕ್‌ನ ನಕಲಿ ಪ್ರತಿಮೆ ಹಗರಣದಿಂದ ಕಂಗೆಟ್ಟಿರುವ ಶಾಸಕ ಸುನಿಲ್ ಕುಮಾರ್ ತಮ್ಮ ಮೇಲಿನ ಆರೋಪಗಳಿಗೆ ಉತ್ತರ ನೀಡುವುದನ್ನು ಬಿಟ್ಟು ಆರೋಪಗಳಿಂದ ಪಾರಾಗಲು ತಮ್ಮ ಹಿಂಬಾಲಕರ ಮೂಲಕ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ನಾಯಕರ ತೇಜೋವಧೆಗೆ ಯತ್ನಿಸಿರುವುದು ಖಂಡನೀಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರ ಹಿಂಬಾಲಕರ ಮಾತುಗಳನ್ನು ಕೇಳಿದಾಗ, ಅವರು ಹಗರಣದಿಂದ ಸಂಪೂರ್ಣ ವಿಚಲಿತರಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ಅವರು ತುಳುನಾಡಿನ ದೈವಸ್ಥಾನ, ದೇವಸ್ಥಾನಗಳ ಅಭಿವೃದ್ಧಿ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕ ಮತ್ತು ಬಡ ಜನರ ಆರೋಗ್ಯ ಸೇವೆಗೆ ತಮ್ಮ ಪ್ರಾಮಾಣಿಕ ಸಂಪಾದನೆಯನ್ನು ದಾನ ಮಾಡಿದ ಧರ್ಮಿಷ್ಠ ನಾಯಕರ. ಎಲ್ಲಾ ಜಾತಿ, ಧರ್ಮ ಮತ್ತು ಸಮುದಾಯಗಳ ಜನರನ್ನು ಪ್ರೀತಿಸುವ, ಗೌರವಿಸುವ ವ್ಯಕ್ತಿತ್ವದವರು. ಇಂತಹ ಸಚ್ಚರಿತ್ರ್ಯವಂತ ನಾಯಕನ ಬಗ್ಗೆ ಬ್ರಹ್ಮoಡ ಭ್ರಷ್ಟಾಚಾರದಲ್ಲಿರುವ ಸುನಿಲ್ ಕುಮಾರ್ ಅವರ ಹಿಂಬಾಲಕರಿಗೆ ಮಾತನಾಡುವ ನೈತಿಕತೆಯೇ ಇಲ್ಲ ಎಂದು ಕಿಡಿಕಾರಿದರು.
ಪರಶುರಾಮ ಥೀಮ್ ಪಾರ್ಕ್ ನಿರ್ಮಾಣಕ್ಕಾಗಿ ಕಾರ್ಕಳದ ನಾಗರಿಕರು ಯಾರೂ ಮನವಿ ಸಲ್ಲಿಸಿರಲಿಲ್ಲ. ಸ್ವಯಂ ಪ್ರೇರಣೆಯಿಂದ ಅನುದಾನ ಬಿಡುಗಡೆಗೊಳಿಸಿ, ಚುನಾವಣಾ ದೃಷ್ಟಿಯಿಂದ ತರಾತುರಿಯಲ್ಲಿ ಆಗಿನ ಮುಖ್ಯಮಂತ್ರಿ ಗಳನ್ನು ಕರೆಸಿ ಅಪೂರ್ಣ ಪ್ರತಿಮೆಯನ್ನು ಉದ್ಘಾಟಿಸಲಾಯಿತು. ಮಳೆಗಾಲ ಆರಂಭವಾಗುತ್ತಿದ್ದಂತೆ “ಕಂಚಿನ ಪ್ರತಿಮೆ”ಯ ಬಣ್ಣ ಬಯಲಾಗಿದ್ದು, ಅದನ್ನು ಮುಚ್ಚಲು ಟಾರ್ಪಲ್ ಸುತ್ತಿ ಬಣ್ಣ ಬಳಿಯಲು ಯತ್ನಿಸಲಾಯಿತು
ಈ ಯೋಜನೆಯ ಸತ್ಯಾಸತ್ಯತೆ ಕುರಿತು ಅನುಮಾನಗೊಂಡ ಸಮಾನ ಮನಸ್ಕ ಸಂಘಟನೆ ಉಪವಾಸ ಸತ್ಯಾಗ್ರಹ ನಡೆಸಿದರೂ, ತುಟಿ ಪಿಟಿಕ್ ಅನ್ನದ. ಶಾಸಕ ಸುನಿಲ್ ಕುಮಾರ್ ಪ್ರಕರಣವನ್ನು ತಿರುವುಮಾಡಲು ಯತ್ನಿಸಿದ್ದಾರೆ. ತಪ್ಪು ಮಾಡಿಲ್ಲವೆಂದರೆ ತನಿಖೆಗೆ ಸಹಕರಿಸಬೇಕಿತ್ತು. ಆದರೆ ಕಾಂಗ್ರೆಸ್ ನಾಯಕರ ತೇಜೋವಧೆಗೆ ಇಳಿದಿರುವುದು ಭ್ರಷ್ಟಾಚಾರದ ಅನುಮಾನಕ್ಕೆ ಪುಷ್ಟಿ ನೀಡುತ್ತದೆ ಎಂದು ಹೇಳಿದರು.
ಉದ್ಘಾಟನಾ ಸಂದರ್ಭದಲ್ಲಿ ಥೀಮ್ ಪಾರ್ಕ್ ಧಾರ್ಮಿಕ ಕ್ಷೇತ್ರ ಎಂದಿದ್ದ ಶಾಸಕರು, ಬಳಿಕ ಅದನ್ನು ಪ್ರವಾಸಿ ತಾಣ ಎಂದು ಹೇಳುತ್ತಿರುವುದು ದ್ವಂದ್ವ ನೀತಿಯಾಗಿದೆ. ಅದು ಪ್ರವಾಸಿ ತಾಣವಾಗಿದ್ದರೆ ಪರಶುರಾಮನ ಕಾಲಿನಡಿ ತುಳು ನಾಡಿನ ದೈವಗಳನ್ನು ಚಿತ್ರಿಸುವ ಅಗತ್ಯವೇನು ಎಂದು ಪ್ರಶ್ನಿಸಿದರು. ಇದು ತುಳುನಾಡಿನ ಭಕ್ತರ ಭಾವನೆಗಳಿಗೆ ಮಾಡಿದ ಅಪಮಾನವಾಗಿದೆ ಎಂದು ಹೇಳಿದರು.
ಉಮಿಕಲ್ ಬೆಟ್ಟದ ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆಯನ್ನು ಉಲ್ಲೇಖಿಸಿದ ಅವರು, ಅಲ್ಲಿ ತುಳುನಾಡಿನ ಅವಳಿ ವೀರರಾದ ಕೋಟಿ–ಚೆನ್ನಯ್ಯರ ಪಾದಗುರುತು ಇದ್ದು, ಅದನ್ನು ಒಡೆದು ತೆಗೆದಿರುವುದು ಸಮಸ್ತ ತುಳು ನಾಡಿನ ದೈವಗಳಿಗೆ ಮಾಡಿದ ಅಪಚಾರವಾಗಿದೆ ಸರ್ವಾಧಿಕಾರಿ ಮನೋಭಾವದ ದಿಂದಿರುವ ಬಿಜೆಪಿಗೆ , ಕಾಂಗ್ರೆಸ್ ಪಕ್ಷ ತಕ್ಕ ಉತ್ತರ ನೀಡಲಿದೆ ಎಂದು ಎಚ್ಚರಿಸಿದರು.
ಯುತ್ ಕಾಂಗ್ರೆಸ್ ಅಧ್ಯಕ್ಷ ಸೂರಜ್ ಶೆಟ್ಟಿ ನಕ್ರೆ ಮಾತನಾಡಿ, ನಕಲಿ ಪ್ರತಿಮೆ ವಿಚಾರದಲ್ಲಿ ಬಿಜೆಪಿ ಆತ್ಮಸಾಕ್ಷಿಯಿಂದ ಸ್ಪಷ್ಟನೆ ನೀಡಬೇಕು ಎಂದರು. ಜೆಡಿಎಸ್‌ನಿಂದ ಪಂಚಾಯತ್ ಸದಸ್ಯ ಹಾಗೂ ಎಪಿಎಂಸಿ ಸದಸ್ಯರಾಗಿದ್ದ ಮಹಾ ವೀರ ಹೆಗ್ಡೆಯನ್ನು ಬಿಜೆಪಿ ಸೇರಿದ ತಕ್ಷಣ ಕ್ಷೇತ್ರಾಧ್ಯಕ್ಷರನ್ನಾಗಿ ಮಾಡಿದ ಹಿಂದಿನ ಕಾರಣವೇನು ಎಂಬುದನ್ನು ಬಿಜೆಪಿ ಕಾರ್ಯಕರ್ತರಿಗೆ ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ವಕ್ತಾರ ಸಂತೋಷ್ ದೇವಾಡಿಗ, , ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಶೆಣೈ, ಮಂಜುನಾಥ ಜೋಗಿ, ಅನಿಲ್ ಪೂಜಾರಿ ನೆಲ್ಲಿಗುಡ್ಡೆ ಸೇರಿದಂತೆ ಇತರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.