×
Ad

ಹಳಿಗಳ ದ್ವಿಪಥ, ಬೆಂಗಳೂರು-ಕಾರವಾರ ನಡುವೆ ವಂದೇಭಾರತ್ ರೈಲು ಕರಾವಳಿ ಜನರ ಬೇಡಿಕೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ ರೈಲ್ವೆ ನಿಲ್ದಾಣದಲ್ಲಿ ವಿವಿಧ ಸೌಲಭ್ಯಗಳ ಉದ್ಘಾಟನೆ

Update: 2026-01-14 20:04 IST

ಉಡುಪಿ, ಜ.14: ರಾಜ್ಯ ಕರಾವಳಿಯ ಕೊಂಕಣ ರೈಲು ಹಳಿಗಳ ದ್ವಿಪಥ ಹಾಗೂ ಬೆಂಗಳೂರು- ಮಂಗಳೂರು ನಡುವಿನ ವಂದೇಭಾರತ್ ರೈಲನ್ನು ಕಾರವಾರದವರೆಗೆ ವಿಸ್ತರಣೆ, ಇವೆರಡು ಕರಾವಳಿ ಜಿಲ್ಲೆಗಳ ರೈಲ್ವೆ ಬಳಕೆ ದಾರರ ಪ್ರಮುಖ ಬೇಡಿಕೆಯಾಗಿದ್ದು, ಇವುಗಳ ಬಗ್ಗೆ ತಾವು ರೈಲ್ವೆ ಸಚಿವಾಲಯ ಹಾಗೂ ರೈಲ್ವೆ ಸಚಿವರ ಮೂಲಕ ಪ್ರಯತ್ನಿಸುವುದಾಗಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕೊಂಕಣ ರೈಲ್ವೆ ನಿಗಮದ (ಕೆಆರ್‌ಸಿಎಲ್) ವತಿಯಿಂದ ಉಡುಪಿ ರೈಲ್ವೆ ನಿಲ್ದಾಣದಲ್ಲಿ ನೂತನವಾಗಿ ನಿರ್ಮಾಣ ಗೊಂಡ ಪ್ಲಾಟ್‌ಫಾರ್ಮ್ ಸರ್ಫೇಸಿಂಗ್, ಪ್ಲಾಟ್‌ಫಾರ್ಮ್ ಶೆಲ್ಟರ್ ಮತ್ತು ಫುಟ್‌ಓವರ್ ಬ್ರಿಡ್ಜ್ ರೂಫ್‌ಗಳನ್ನು ಉಡುಪಿಯ ರೈಲ್ವೆ ನಿಲ್ದಾಣದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮಂಗಳೂರಿನ ತೋಕೂರಿನಿಂದ ಕಾರವಾರದವರೆಗೆ ಕೊಂಕಣ ರೈಲ್ವೆ ಹಳಿಗಳ ದ್ವಿಪಥ ಈಗಿನ ಅವಶ್ಯಕತೆಯಾ ಗಿದೆ. ಇದಕ್ಕಾಗಿ ವಿಸ್ತೃತ ಯೋಜನಾ ವರದಿಯನ್ನು ಸಲ್ಲಿಸಲು ಕೇಂದ್ರ ರೈಲ್ವೆ ಸಚಿವರು ಈಗಾಗಲೇ ಸೂಚನೆಗಲನ್ನು ನೀಡಿದ್ದಾರೆ. ಇದರ ಜೊತೆಗೆ ಮಡಗಾಂವ್ - ಮಂಗಳೂರು ವಂದೇ ಭಾರತ್ ರೈಲನ್ನು ಮುಂಬೈವರೆಗೆ ಮತ್ತು ಬೆಂಗಳೂರು-ಮಂಗಳೂರು ರೈಲನ್ನು ಕಾರವಾರದವರೆಗೆ ವಿಸ್ತರಣೆ ಮಾಡಿದಲ್ಲಿ ಕರಾವಳಿಯ ಜನರಿಗೆ ಬಹಳ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಇರುವ ಅಡಚಣೆ ಕುರಿತು ಕೊಂಕಣ ರೈಲ್ವೆಯೊಂದಿಗೆ ಸಮಾಲೋಚನೆ ನಡೆಸಿ ರೈಲ್ವೆ ಸಚಿವಾಲಯಕ್ಕೆ ಬೇಡಿಕೆ ಮಂಡಿಸಲಾಗುವುದು ಎಂದು ಕೋಟ ಹೇಳಿದರು.

ಕರಾವಳಿ ಜಿಲ್ಲೆಗಳ ಎಲ್ಲ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲು 100 ಕೋಟಿ ರೂ.ಗಳ ಕಾಮಗಾರಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅನುಮೋದನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಥಮ ಹಂತದ ಕಾಮಗಾರಿಗಳಲ್ಲಿ ಉಡುಪಿಯಲ್ಲಿ ಪ್ಲಾಟ್‌ಫಾರ್ಮ್-2ನ್ನು ಸುಮಾರು 2.6 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿ ಸಲಾಗುವುದು. ಶೀಘ್ರವೇ ಇಲ್ಲಿ ಹಿರಿಯ ನಾಗರಿಕರ ಅನುಕೂಲಕ್ಕಾಗಿ 3 ಲಿಫ್ಟ್‌ಗಳನ್ನು ಅಳವಡಿಸಲಾಗುವುದು ಎಂದು ಕೋಟ ವಿವರಿಸಿದರು.

ಬಾರಕೂರು-ಮುಲ್ಕಿ ರೈಲ್ವೆ ಪ್ಲಾಟ್‌ಫಾರ್ಮ್‌ಗಳನ್ನು 4.28 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಅಮೃತ್ ಭಾರತ್ ಸ್ಟೇಶನ್ ಸ್ಕೀಮ್ ಯೋಜನೆಯಡಿ 105 ಕೋಟಿ ರೂ. ವೆಚ್ಚದಲ್ಲಿ 10 ರೈಲು ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗೆ ಕೇಂದ್ರದಿಂದ ಅನುಮೋದನೆ ದೊರೆಯಲಿದೆ ಎಂದರು.

ಕರಾವಳಿ ಮೂಲಕ ಬೆಂಗಳೂರು ಹಾಗೂ ಮುಂಬೈ ಸಂಪರ್ಕ ಸುಲಭ ಹಾಗೂ ನಿರಂತರವಾಗಿರಬೇಕೆಂದು ಕರಾವಳಿಗರ ನಿರೀಕ್ಷೆ. ಮುಂದಿನ ಬಜೆಟ್‌ನಲ್ಲಿ ಇವುಗಳನ್ನು ಸೇರಿಸುವ ಬಗ್ಗೆ ಎಲ್ಲಾ ಪ್ರಯತ್ನ ನಡೆಸಲಾಗುವುದು. ಅದೇ ರೀತಿ ಉಡುಪಿ ರೈಲು ನಿಲ್ದಾಣವನ್ನು ‘ಶ್ರೀಕೃಷ್ಣ ರೈಲು ನಿಲ್ದಾಣ’ವೆಂದು ಹೆಸರಿಸಲು ಎಲ್ಲಾ ಪ್ರಯತ್ನವನ್ನೂ ಮಾಡಲಾಗುವುದು ಎಂದು ಕೋಟ ಭರವಸೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೆಆರ್‌ಸಿಎಲ್‌ನ ಸಿಎಂಡಿ ಸಂತೋಷ್ ಕುಮಾರ್ ಝಾ, ಇಂದು ಉದ್ಘಾಟನೆ ಗೊಂಡ ಈ ಎಲ್ಲಾ ಪ್ರಯಾಣಿಕರ ಸೌಲಭ್ಯಗಳನ್ನು ಸುಮಾರು 2.40 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ. ಮುಂದಿನ ಒಂದು ವರ್ಷದೊಳಗೆ ಉಡುಪಿ ರೈಲ್ವೆ ನಿಲ್ದಾಣ ವಿಶ್ವ ದರ್ಜೆಯ ಸೌಲಭ್ಯಗಳೊಂದಿಗೆ ರಾರಾಜಿಸಲಿದೆ ಎಂದರು.

ಉಡುಪಿಯಲ್ಲಿ ಅಮೃತ್‌ಭಾರತ್ ಸ್ಟೇಶನ್ ಸ್ಕೀಮ್‌ನಡಿ ಸೇರ್ಪಡೆಗೊಳಿಸ ಲಾಗಿದೆ. ಇದಕ್ಕೆ 100 ಕೋಟಿ ರೂ.ಅನುದಾನ ಲಭ್ಯವಾಗಲಿದೆ. ಇವುಗಳಲ್ಲಿ ಫ್ಲಾಟ್‌ಫಾರಂ ನಂ.3, ವಿಶಾಲವಾದ ರೆಸ್ಟೋರೆಂಟ್, ಎಕ್ಸಿಕ್ಯೂಟಿವ್ ಲಾಂಝ್ ಇನ್ನೆರಡು ತಿಂಗಳಲ್ಲಿ ಲಭ್ಯವಾಗಲಿದೆ ಎಂದರು.

ಅಲ್ಲದೇ ಕರಾವಳಿಯ ರೈಲ್ವೆ ನಿಲ್ದಾಣಗಳಿಗೂ ಹಲವು ಸೌಲಭ್ಯಗಳನ್ನು, ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಇವುಗಳಲ್ಲಿ ಬಾರಕೂರು, ಮುಲ್ಕಿಯ ರೈಲು ನಿಲ್ದಾಣಗಳು ಸೇರಿವೆ. ಕರ್ನಾಟಕದ 10 ನಿಲ್ದಾಣಗಳಲ್ಲಿ ಸುಸಜ್ಜಿತ ಶೌಚಾಲಯಗಳು ನಿರ್ಮಾಣಗೊಳ್ಳಲಿವೆ. ಮುಲ್ಕಿಯಲ್ಲಿ ಎರಡು ಕೋಟಿ ರೂ.ವೆಚ್ಚದಲ್ಲಿ ಪುಟ್‌ಓವರ್ ಬ್ರಿಜ್ ನಿರ್ಮಾಣಗೊಳ್ಳಲಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕರಾದ ಯಶ್‌ಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕೊಂಕಣ ರೈಲ್ವೆಯ ಅಧಿಕಾರಿ ಗಳಾದ ದಿಲೀಪ್ ಭಟ್, ಇನಾಯತ್ ಹುಸೇನ್, ವಿಜಯಕುಮಾರ್, ಸುಧಾ ಕೃಷ್ಣಮೂರ್ತಿ, ಜಿ.ಡಿ.ಮೀನಾ ಮುಂತಾದವರು ಉಪಸ್ಥಿತರಿದ್ದರು.

ಕಾರವಾರ ವಿಭಾಗದ ರೈಲ್ವೆ ಮ್ಯಾನೇಜರ್ ಆಶಾ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News