×
Ad

ಶ್ರೀಕೃಷ್ಣಮಠದಲ್ಲಿ ಸಂಭ್ರಮದ ಮೂರುತೇರು ಉತ್ಸವ

Update: 2026-01-14 21:45 IST

ಉಡುಪಿ, ಜ.14: ಪರ್ಯಾಯ ಪುತ್ತಿಗೆ ಮಠ ಆಶ್ರಯದಲ್ಲಿ ಶ್ರೀಕೃಷ್ಣ ಮಠದಲ್ಲಿ ಮಕರಸಂಕ್ರಾಂತಿಯ ಪ್ರಯುಕ್ತ ಬುಧವಾರ ಸಂಜೆ ಬ್ರಹ್ಮರಥ ಸಹಿತ ಸಂಭ್ರಮದ ಮೂರುತೇರು ಉತ್ಸವ ನಡೆಯಿತು.

800 ವರ್ಷಗಳ ಹಿಂದೆ ಆಚಾರ್ಯ ಮಧ್ವರು ಮಕರ ಸಂಕ್ರಮಣದಂದು ಶ್ರೀಕೃಷ್ಣನ ಪ್ರತಿಷ್ಠಾಪನೆ ನಡೆಸಿದರು ಎಂಬ ಐತಿಹ್ಯದ ಹಿನ್ನೆಲೆಯಲ್ಲಿ ಪ್ರತಿ ವರ್ಷ ಮಕರ ಸಂಕ್ರಾಂತಿಯ ದಿನದಂದು ಈ ಉತ್ಸವವನ್ನು ಸಂಭ್ರಮ ಹಾಗೂ ಸಡಗರಗಳಿಂದ ನಡೆಸಲಾಗುತ್ತದೆ. ರಾತ್ರಿ ರಥಬೀದಿಯಲ್ಲಿ ಮೂರು ತೇರುಗಳ ಉತ್ಸವ ನಡೆಯುವುದು ಇದರ ವೈಶಿಷ್ಟ್ಯವಾಗಿದೆ.

ಇಂದು ಬೆಳಗ್ಗಿನಿಂದಲೇ ಮಹಾಭಿಷೇಕ ಸಹಿತ ವಿಶೇಷ ಪೂಜೆಗಳನ್ನು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರು ಮತ್ತು ಕಿರಿಯ ಯತಿ ಶ್ರೀಸುಶ್ರೀಂದ್ರತೀರ್ಥರು ನೆರವೇರಿಸಿದರು. ಇಂದು ಏಕಾದಶಿ ಹಿನ್ನೆಲೆಯಲ್ಲಿ ಪ್ರಸಾದ ಭೋಜನ ವ್ಯವಸ್ಥೆ ಮಠದಲ್ಲಿ ಇರಲಿಲ್ಲ.

ಸಂಜೆ ಪರ್ಯಾಯ ಪುತ್ತಿಗೆ ಶ್ರೀಪಾದರ ನೇತೃತ್ವದಲ್ಲಿ ಮುಹೂರ್ತ ನಡೆದಿದ್ದು, ಅದಮಾರು ಹಿರಿಯ ಯತಿ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಮತ್ತು ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಇದರಲ್ಲಿ ಭಾಗವಹಿಸಿದ್ದರು. ಭಾವಿ ಪರ್ಯಾಯ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಮುಹೂರ್ತ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಭಕ್ತಿಭೃಂಗ ಸ್ವಾಮೀಜಿ ಭಾಗಿ: 1971ರಲ್ಲಿ ಇಸ್ಕಾನ್‌ನ ಪ್ರಭುಪಾದರಿಂದ ಪ್ರಭಾವಿತರಾದ ಭಕ್ತಿಭೃಂಗ ಶ್ರೀಗೋವಿಂದ ಸ್ವಾಮಿ ಮಹಾರಾಜ್ ವಿದೇಶ ದಿಂದ ಉಡುಪಿಗೆ ಆಗಮಿಸಿ, ರಥೋತ್ಸವದಲ್ಲಿ ಭಾಗಿಯಾದರು. ಅವರು ಖಜಕಿಸ್ತಾನ ಮುಂತಾದ ಇಸ್ಲಾಂ ರಾಷ್ಟ್ರಗಳಲ್ಲಿ ಕೃಷ್ಣ ಭಕ್ತಿ ಪ್ರಚಾರ ಮಾಡುತ್ತಿದ್ದಾರೆ.

ಗುರುವಾರ ಚೂರ್ಣೋತ್ಸವ: ಇಂದು ಮೂರು ತೇರು ಉತ್ಸವದ ಬಳಿಕ ನಾಳೆಜ.15ರ ಬೆಳಿಗ್ಗೆ 9ರಿಂದ ರಥಬೀದಿ ಯಲ್ಲಿ ಚೂರ್ಣೋತ್ಸವ ನಡೆಯಲಿದೆ. ಅಪರಾಹ್ನ 12ರಿಂದ ಅನ್ನಸಂತರ್ಪಣೆ ಆರಂಭವಾಗಲಿದೆ. ಪರ್ಯಾಯ ಪುತ್ತಿಗೆ ಶ್ರೀಪಾದದ್ವಯರು ಮಕರ ಸಂಕ್ರಾಂತಿಯಂದು ಏಕಾದಶಿಯ ನಿರ್ಜಲ ಉಪವಾಸದಲ್ಲಿದ್ದು, ಮಾರನೆ ದಿನ ದ್ವಾದಶಿಯಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಆನಂತರ ಚೂರ್ಣೋತ್ಸವ ಆರಂಭವಾಗಲಿದೆ ಎಂದು ಶ್ರೀಮಠದ ದಿವಾನ ನಾಗರಾಜ ಆಚಾರ್ಯ ಹಾಗೂ ಅಂತಾರಾಷ್ಟ್ರೀಯ ಕಾರ್ಯದರ್ಶಿ ವಿದ್ವಾನ್ ಪ್ರಸನ್ನ ಆಚಾರ್ಯ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News