×
Ad

ಸೇನಾ ಮುಖ್ಯಸ್ಥೆಯ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ ಮಧ್ಯಪ್ರದೇಶದ ಬಿಜೆಪಿ ಸಚಿವರನ್ನು ವಜಾಗೊಳಿಸಿ : ಭಾನುಭಾಸ್ಕರ ಪೂಜಾರಿ

Update: 2025-05-16 12:22 IST

ಕಾರ್ಕಳ : ಭಾರತೀಯ ಸೇನೆಯ ಅತ್ಯುನ್ನತ ಅಧಿಕಾರಿ ಕರ್ನಲ್ ಸೋಫಿಯಾ ಖುರೇಷಿಯವರನ್ನು ಉಗ್ರವಾದಿಗಳ ಸಹೋದರಿ ಎಂದ ಮಧ್ಯಪ್ರದೇಶದ ಬಿಜೆಪಿ ಸಚಿವನ ಹೇಳಿಕೆಯ ವಿರುದ್ದ ಕಾರ್ಕಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನುಭಾಸ್ಕರ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಡೀ ದೇಶವೇ ಗೌರವಿಸುವ ಸೈನ್ಯದ ಅ‌ತ್ಯುನ್ನತ ಸ್ಥಾನದಲ್ಲಿರುವ ಮಹಿಳಾ ಸೇನಾ ಮುಖ್ಯಸ್ಥೆಯ ವಿರುದ್ದ ಇಂತಹ ಅವಹೇಳನಕಾರಿ ಹೇಳಿಕೆಯನ್ನು ನೀಡಿದ ಬಿಜೆಪಿ ಸಚಿವರನ್ನು ತಕ್ಷಣ ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಅವರು ಆಗ್ರಹಿಸಿದ್ದಾರೆ.

ಭಾರತೀಯ ಸೇನಯು ಧರ್ಮ ನಿರಪೇಕ್ಷವಾಗಿ ದೇಶ ರಕ್ಷಣೆಯ ಕೆಲಸದಲ್ಲಿ ತೊಡಗಿದ್ದು, ಶಿಸ್ತು ಸಂಯಮ ಮತ್ತು ಸೇನಾ ನ್ಯಾಯಕ್ಕೆ ವಿಶ್ವದಲ್ಲಿಯೇ ಅತ್ಯುತ್ತಮ ಹೆಸರು ಪಡೆದುಕೊಂಡಿದೆ. ಸೇನೆಯಲ್ಲಿ ಅನೇಕ ಜಾತಿ, ಸಮುದಾಯ, ಧರ್ಮ , ಪ್ರಾಂತವಾರು ಭೇದಭಾವ ಇಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ದೇಶ ರಕ್ಷಣೆಯ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಇಂತಹ ಸೇನೆಗೆ ಈ ಬಿಜೆಪಿ ನಾಯಕರು ಅವಹೇಳನಕಾರಿಯಾಗಿ ಮಾತನಾಡುವುದು ಅವರ ಕೊಳಕು ಮನಸ್ಥಿತಿಗೆ ಸಾಕ್ಷಿಯಾಗಿದೆ ಎಂದರು.

ಸ್ವತಃ ನಾನು ಸೇನೆಯ ಮಾಜಿ ಯೋಧನ ಪತ್ನಿಯಾಗಿ ಸೇನೆಯ ಯೋಧರ ಸುಖ ಕಷ್ಟಗಳ ಅರಿವು ನನಗಿದೆ. ತನ್ನ ಕುಟುಂಬವನ್ನು ತೊರೆದು ಸಾವಿರಾರು ಕಿಲೋಮೀಟರ್ ದೂರದಲ್ಲಿನ ದೇಶದ ಗಡಿಯಲ್ಲಿ ಜೀವದ ಹಂಗು ತೊರೆದು ದೇಶಕ್ಕಾಗಿ ಹೋರಾಡುವ ಸೈನ್ಯದ ಬಗ್ಗೆ ಬಿಜೆಪಿ ನಾಯಕ ಕೀಳುಮಟ್ಟದಲ್ಲಿ ನಾಲಿಗೆ ಹರಿಬಿಟ್ಟಿರುವುದು ಇದು ದೇಶದ ಸೈನ್ಯಕ್ಕೆ ಮಾಡಿದ ಅವಮಾನವಾಗಿದೆ.

ಗಾಂಧಿ, ನೆಹರು, ಅಂಬೇಡ್ಕರ್ ಮುಂತಾದ ರಾಷ್ಟ್ರ ನಾಯಕರನ್ನು ನಿರಂತರವಾಗಿ ಅವಹೇಳನ ಮಾಡುತ್ತಿದ್ದ ಬಿಜೆಪಿ ಈಗ ದೇಶದ ಸೈನಿಕರನ್ನೂ ಅವಹೇಳನ ಮಾಡುತ್ತಿದೆ. ಇವರಿಗೆ ದೇಶದ ಬಗ್ಗೆಯಾಗಲಿ ದೇಶ ಕಾಯುವ ಸೈನಿಕರ ಬಗ್ಗೆಯಾಗಲಿ ಯಾವುದೇ ಭಾವನೆಗಳು ಇಲ್ಲ. ಬಿಜೆಪಿಯವರಿಗೆ ಬೇಕಿರುವುದು ಕೇವಲ ಹಿಂದು ಮುಸ್ಲಿಮ್ ಹೆಸರಿನಿಂದ ದೇಶದ ವಿಭಜನೆ ಮಾತ್ರ. ಮಧ್ಯಪ್ರದೇಶದ ಸಚಿವನ ಹೇಳಿಕೆಯು ಇದು ಸಮಸ್ತ ಬಿಜೆಪಿ ಪಕ್ಷದವರ ಮನಸ್ಥಿತಿಯಾಗಿದೆ. ಬಿಜೆಪಿಯ ರಾಷ್ಟ್ರ ವಿರೋಧಿ ಮನಸ್ಥಿತಿಯನ್ನು ಕಾಂಗ್ರೆಸ್ ಪಕ್ಷ ಗಂಭೀರವಾಗಿ ಪರಿಗಣಿಸಿ ಖಂಡಿಸುತ್ತದೆ ಎಂದು ಕಾರ್ಕಳ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಭಾನುಭಾಸ್ಕರ ಪೂಜಾರಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ‌.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News