×
Ad

ರಕ್ತದಾನದಿಂದ ಸಮಾಜದಲ್ಲಿ ಬಾಂಧವ್ಯ ವೃದ್ಧಿ : ಎಡಿಸಿ ಆಬೀದ್ ಗದ್ಯಾಳ

Update: 2025-11-11 16:19 IST

ಉಡುಪಿ, ನ.11: ರಕ್ತದಾನವು ಮಾನವ ಜೀವ ಉಳಿಸುವ ಅತ್ಯಂತ ಶ್ರೇಷ್ಠ ದಾನ. ಇಂತಹ ಕಾರ್ಯಗಳು ಸಮಾಜದಲ್ಲಿ ಮಾನವೀಯತೆ, ಸಹಕಾರ ಮತ್ತು ಬಾಂಧವ್ಯವನ್ನು ವೃದ್ಧಿಸುತ್ತವೆ. ಒಂದು ರಕ್ತದ ಹನಿಯು ಅನೇಕ ಜೀವ ಉಳಿಸಬಲ್ಲದು. ಎಲ್ಲರೂ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಉಡುಪಿ ಅಪರ ಜಿಲ್ಲಾಧಿಕಾರಿ ಆಬೀದ್ ಗದ್ಯಾಳ ಹೇಳಿದ್ದಾರೆ.

ಉಡುಪಿ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್ ಮತ್ತು ಮಣಿಪಾಲ ಕೆಎಂಸಿ ಬ್ಲಡ್ ಸೆಂಟರ್ ಸಹಯೋಗದೊಂದಿಗೆ ಉಡುಪಿ ಜಾಮೀಯ ಮಸೀದಿ ವಠಾರದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಮುಸ್ಲಿಮ್ ವೆಲ್ಫೇರ್ ಅಸೋಸಿಯೇಷನ್ ನಿಂದ ಇಂತಹ ಸಾಮಾಜಿಕ ಸೇವಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುವುದು ಪ್ರಶಂಸನೀಯ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಇಂತಹ ಸಮಾಜಮುಖಿ ಕಾರ್ಯಗಳು ನಡೆಯಲಿ ಎಂದು ಅವರು ಹಾರೈಸಿದರು.

ಮಣಿಪಾಲ ಕೆಎಂಸಿ ಬ್ಲಡ್ ಸೆಂಟರ್‌ನ ಪ್ರೊಫೆಸರ್ ಮತ್ತು ವಿಭಾಗದ ಮುಖ್ಯಸ್ಥೆ ಡಾ.ಶಮೀ ಶಾಸ್ತ್ರೀ ರಕ್ತದಾನದ ಮಹತ್ವದ ಕುರಿತು ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಮುನೀರ್ ಮುಹಮ್ಮದ್ ವಹಿಸಿದ್ದರು.

ಉಡುಪಿ ಜಾಮೀಯ ಮಸೀದಿ ಅಧ್ಯಕ್ಷ ರಿಯಾಝ್ ಅಹ್ಮದ್, ಸಾಮಾಜಿಕ ಕಾರ್ಯಕರ್ತ ಮುನೀರ್ ಕಲ್ಮಾಡಿ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವಿ.ಎಸ್.ಉಮರ್ ಸ್ವಾಗತಿಸಿದರು. ಸದಸ್ಯರಾದ ರಿಯಾಝ್ ಕುಕ್ಕಿಕಟ್ಟೆ ವಂದಿಸಿದರು. ಇಕ್ಬಾಲ್ ಮನ್ನಾ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News