ಅನಾಥ ಮಕ್ಕಳನ್ನು ಮೀಸಲಾತಿ ವ್ಯಾಪ್ತಿಗೆ ತಂದಿದ್ದು ತೃಪ್ತಿದಾಯಕ ಕ್ಷಣ: ಹಿರಿಯ ರಾಜಕಾರಣಿ ಜಯಪ್ರಕಾಶ್ ಹೆಗ್ಡೆ
ಐವರು ಸಾಧಕರಿಗೆ ಮಣಿಪಾಲ ಸಮೂಹದ ‘ಹೊಸ ವರ್ಷದ ಪ್ರಶಸ್ತಿ’ ಪ್ರದಾನ
ಮಣಿಪಾಲ, ಜ.10: ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಾಗಿ ರಾಜ್ಯದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಯನ್ನು ನೀಡುವ ಸಂದರ್ಭದಲ್ಲಿ ಅನಾಥ ಮಕ್ಕಳನ್ನು ಮೀಸಲಾತಿಯ ವ್ಯಾಪ್ತಿಗೆ ತಂದಿರುವುದು ನನ್ನ ಈವರೆಗಿನ ಸೇವಾವಧಿಯಲ್ಲಿ ಅತ್ಯಂತ ತೃಪ್ತಿದಾಯಕ ಕ್ಷಣಗಳಲ್ಲಿ ಒಂದಾಗಿದೆ ಎಂದು ಮಾಜಿ ಮೀನುಗಾರಿಕಾ ಸಚಿವ, ಮಾಜಿ ಸಂಸದ ಹಾಗೂ ಹಿರಿಯ ರಾಜಕಾರಣಿ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲ ಎಜುಕೇಶನ್ ಆ್ಯಂಡ್ ಮೆಡಿಕಲ್ ಗ್ರೂಪ್ (ಎಂಇಎಂಜಿ) ಬೆಂಗಳೂರು, ಮಣಿಪಾಲ್ ಮೀಡಿಯಾ ನೆಟ್ವರ್ಕ್ ಲಿ.(ಎಂಎಂಎನ್‌ಎಲ್) ಹಾಗೂ ಡಾ. ಟಿ.ಎಂ.ಎ. ಪೈ ಫೌಂಡೇಶನ್‌ಗಳ ಸಹಯೋಗದೊಂದಿಗೆ ಮಣಿಪಾಲದ ಫಾರ್ಚ್ಯೂನ್ ವ್ಯಾಲಿ ವ್ಯೂನಲ್ಲಿ ಇಂದು ಆಯೋಜಿಸಿದ್ದ ‘ಹೊಸ ವರ್ಷದ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಐವರು ಸಾಧಕರಲ್ಲಿ ಒಬ್ಬರಾಗಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡುತಿದ್ದರು.
ಸಮಾರಂಭದಲ್ಲಿ ಸಾಮಾಜಿಕ, ಕಲೆ, ಸಂಸ್ಕೃತಿ ಹಾಗೂ ಇತರ ಕ್ಷೇತ್ರಗಳಿಗೆ ನೀಡಿದ ಅಸಾಧಾರಣ ಕೊಡುಗೆಗಾಗಿ ಐವರು ಗಣ್ಯ ಸಾಧಕ ವ್ಯಕ್ತಿಗಳನ್ನು ‘ಹೊಸವರ್ಷದ ಪ್ರಶಸ್ತಿ-2026’ ನೀಡಿ ಗೌರವಿಸಲಾಯಿತು.
ಹೆತ್ತವರಿಲ್ಲದ ಅನಾಥ ಮಕ್ಕಳನ್ನೂ ಮೀಸಲಾತಿ ವ್ಯಾಪ್ತಿಗೆ ತರುವ ಮೂಲಕ ಕುಟುಂಬವಿಲ್ಲದ ಮಕ್ಕಳೂ ಸಮಾನ ಅವಕಾಶ ಪಡೆಯಲು ಸಾಧ್ಯವಾಗಿದೆ. ಪ್ರಾಯಶ: ಇಂಥ ಸಮಾಜಪರ ಕೆಲಸಗಳಿಂದಾಗಿಯೇ ನಾನು ಈ ಪ್ರಶಸ್ತಿ ಸ್ವೀಕರಿಸಲು ಅರ್ಹನಿರುವುದಾಗಿ ಭಾವಿಸಿದ್ದೇನೆ ಎಂದು ಹೆಗ್ಡೆ ಹೇಳಿದರು.
ಪ್ರಶಸ್ತಿ ಸ್ವೀಕರಿಸಿದ ಯುಎಇಯ ತುಂಬೆ ಗ್ರೂಪ್‌ನ ಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದಿನ್ ಮಾತನಾಡಿ, 2026ನೇ ಸಾಲಿನ ಹೊಸ ವರ್ಷದ ಪ್ರಶಸ್ತಿ ನೀಡಿ ಗೌರವಿಸಿರುವುದು ನನಗೆ ಸಿಕ್ಕ ಗೌರವ ಮಾತ್ರವಲ್ಲ, ಇದು ಇಡೀ ‘ತುಂಬೆ ಸಮೂಹ’ದ ಸಂಘಟಿತ ದೃಷ್ಟಿಕೋನ ಹಾಗೂ ಅಚಲ ಬದ್ಧತೆಗೆ ಸಂದ ಮನ್ನಣೆಯಾಗಿದೆ ಎಂದರು.
ಮಾಹೆಯು ಪಾಲಿಸಿಕೊಂಡು ಬರುತ್ತಿರುವ ಶ್ರೇಷ್ಠತೆ, ನಾವೀನ್ಯ, ಸಹಾನುಭೂತಿ ಹಾಗೂ ಶಿಕ್ಷಣ ಮತ್ತು ಚಿಕಿತ್ಸೆಯ ಮೂಲಕ ಸಮಾಜದಲ್ಲಿ ಪರಿವರ್ತನೆ ತರಬಹುದೆಂಬ ದೃಢ ವಿಶ್ವಾಸವೇ ನನ್ನ ಸಂಸ್ಥೆಗಳ ಬೆಳವಣಿಗೆಗೆ ಬುನಾದಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಬಹುಭಾಷಾ ಚಲನಚಿತ್ರ ಹಾಗೂ ರಂಗಭೂಮಿ ನಟಿ ಉಡುಪಿ ವಿನಯಾ ಪ್ರಸಾದ್ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ನನ್ನ ಕಲಾಯಾನ ಕನ್ನಡ ಸೇರಿದಂತೆ ದಕ್ಷಿಣದ ನಾಲ್ಕು ಭಾಷೆಗಳಲ್ಲಿ ಸಾಗಿ ಬಂದಿದೆ. ಪ್ರತಿ ಹಂತವೂ ನನಗೆ ಶಿಸ್ತು ಹಾಗೂ ಸಮರ್ಪಣಾ ಮನೋಭಾವನ್ನು ಕಲಿಸಿದೆ. ಜನರು, ಭಾವನೆಗಳು ಹಾಗೂ ಸಮಾಜದ ಕುರಿತ ನಮ್ಮ ತಿಳುವಳಿಕೆಯನ್ನು ರೂಪಿಸುವ ಪ್ರಬಲ ಮಾಧ್ಯಮ ಸಿನಿಮಾ ಎಂದರು.
ಮಣಿಪಾಲ ಸಮೂಹದ ‘ಹೊಸ ವರ್ಷದ ಪ್ರಶಸ್ತಿ-2026’ನ್ನು ಸ್ವೀಕರಿಸಿದ ಇನ್ನಿಬ್ಬರು ಸಾಧಕರು ಮಾಹೆಯ ಕುಲಪತಿ ಲೆ.ಜ.(ಡಾ.) ಎಂ.ಡಿ.ವೆಂಕಟೇಶ್ ಹಾಗೂ ಕೆನರಾ ಬ್ಯಾಂಕಿನ ಮಾಜಿ ಕಾರ್ಯ ನಿರ್ವಾಹಕ ನಿರ್ದೇಶಕ ಕೆ. ಲಕ್ಷ್ಮೀನಾರಾಯಣ್ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಮಾಹೆ ಟ್ರಸ್ಟ್‌ನ ಅಧ್ಯಕ್ಷ, ಅಕಾಡೆಮಿಯ ರಿಜಿಸ್ಟ್ರಾರ್ ಹಾಗೂ ಎಂಇಎಂಜಿ ಅಧ್ಯಕ್ಷರಾದ ಡಾ.ರಂಜನ್ ಆರ್. ಪೈ, ಮಾಹೆ ಟ್ರಸ್ಟಿನ ಟ್ರಸ್ಟಿ ವಸಂತಿ ಆರ್. ಪೈ, ಮಣಿಪಾಲ ಮೀಡಿಯಾ ನೆಟ್ವರ್ಕ್‌ನ ಕಾರ್ಯ ನಿರ್ವಾಹಕ ಅಧ್ಯಕ್ಷ ಹಾಗೂ ಎಜಿಇ ಉಪಾಧ್ಯಕ್ಷರಾದ ಟಿ.ಸತೀಶ್ ಯು. ಪೈ ಮತ್ತು ಮಣಿಪಾಲದ ಡಾ.ಟಿ.ಎಂ.ಎ ಪೈ ಫೌಂಡೇಶನ್‌ನ ಟ್ರಸ್ಟಿ ಟಿ. ಸಚಿನ್ ಪೈ ಉಪಸ್ಥಿತರಿದ್ದರು.
ಎಜಿಇ ಅಧ್ಯಕ್ಷ ಹಾಗೂ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಮಣಿಪಾಲ ಎಂಐಟಿ ನಿರ್ದೇಶಕ ಕಮಾಂಡರ್ ಡಾ. ಅನಿಲ್ ರಾಣಾ ವಂದಿಸಿದರೆ, ಮಣಿಪಾಲ ಎಂಐಸಿಯ ಸಹಾಯಕ ಪ್ರಾಧ್ಯಾಪಕಿ ಶೃತಿ ವಿ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.