ಡಾ.ರವಿಚಂದ್ರ ರಾವ್ ಉಚ್ಚಿಲ ನಿಧನ
ಉಡುಪಿ, ಜ.10: ಮಾರ್ಪಳ್ಳಿ ನಿವಾಸಿ, ಆಯುರ್ವೇದ ವೈದ್ಯ ಡಾ.ರವಿಚಂದ್ರ ರಾವ್ ಉಚ್ಚಿಲ(79) ಅಸೌಖ್ಯದಿಂದ ಶುಕ್ರವಾರ ರಾತ್ರಿ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಡಾ.ಉಚ್ಚಿಲ ಎಂದೇ ಹೆಸರುವಾಸಿಗಿದ್ದ ಇವರು ಉಚ್ಚಿಲದಲ್ಲಿ 40 ವರ್ಷಗಳ ಆಯುರ್ವೇದ ವೈದ್ಯರಾಗಿ ಸೇವೆ ಸಲ್ಲಿಸಿ ದ್ದರು. ಕಳೆದ ಹದಿನೈದು ವರ್ಷಗಳಿಂದ ಮಾರ್ಪಳ್ಳಿ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ವಾಸವಾಗಿದ್ದ ಇವರು ಸ್ಥಳೀಯವಾಗಿ ಉತ್ತಮ ಆಯುರ್ವೇದ ವೈದ್ಯರಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು.
ಬ್ರಾಹ್ಮಣ ಸಮಾಜ, ಪರ್ಯಾಯ ಸ್ವಾಗತ ಕಮಿಟಿಗಳಲ್ಲಿ ತೊಡಗಿಸಿ ಕೊಂಡಿದ್ದ ಇವರು ಉತ್ತಮ ಸಾಮಾಜಿಕ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸೇವೆ ನೀಡಿದ್ದರು. ಶ್ರೀಕೃಷ್ಣ ಮಠದ ಉಚಿತ ಆರೋಗ್ಯ ಸೇವೆ ಮತ್ತು ಅಂಬಲಪಾಡಿ ದೇವಳದಲ್ಲಿ ರೋಗಿಗಳಿಗೆ ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವೆ ನೀಡುತ್ತಿದ್ದರು. ಪೇಜಾವರ ಮಠ ಕೊಡಮಾಡುವ ಶ್ರೀರಾಮ ವಿಠಲ ಪ್ರಶಸ್ತಿ ಸಹಿತ ಹಲವಾರು ಸಂಘ ಸಂಸ್ಥೆಗಳ ಗೌರವಕ್ಕೆ ಇವರು ಪಾತ್ರರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಮೊಮ್ಮಕ್ಕಳನ್ನು ಅಗಲಿದ್ದಾರೆ.