ನೇಜಾರು ನಾಲ್ವರ ಹತ್ಯೆ ಪ್ರಕರಣ: ಒಟ್ಟು 18 ಸಾಕ್ಷಿಗಳ ವಿಚಾರಣೆ ಪೂರ್ಣ
ಕೊಲೆ ಆರೋಪಿ
ಉಡುಪಿ, ಜ.10: ನೇಜಾರು ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣಕ್ಕೆ ಮೃತದೇಹ ಮಹಜರಿಗೆ ಸಂಬಂಧಿಸಿ ನಾಲ್ಕು ಸಾಕ್ಷಿಗಳ ಮುಖ್ಯ ವಿಚಾರಣೆ ಹಾಗೂ ಪಾಟಿ ಸವಾಲು ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಜ.7ರಂದು ನಡೆಯಿತು.
ಕೊಲೆಯ ನಾಲ್ವರ ಮೃತದೇಹಗಳ ಮಹಜರು ನಡೆಸಿದವರನ್ನು ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವಾ ಮುಖ್ಯ ವಿಚಾರಣೆಗೆ ಒಳಪಡಿಸಿದರೆ, ಆರೋಪಿ ಪರ ವಕೀಲ ರಾಜು ಪೂಜಾರಿ ಪಾಟಿಸವಾಲು ನಡೆಸಿದರು. ಎರಡನೇ ಹಂತದಲ್ಲಿ ಒಟ್ಟು 15 ಸಾಕ್ಷಿಗಳಿಗೆ ಸಮನ್ಸ್ ಜಾರಿ ಮಾಡಲಾಗಿದ್ದು, ಅದರಲ್ಲಿ 11ಮಂದಿಯನ್ನು ಕೈಬಿಟ್ಟು ಕೇವಲ ನಾಲ್ಕು ಮಂದಿಯ ವಿಚಾರಣೆ ಮಾತ್ರ ನಡೆಸಲಾಯಿತು.
ಈವರೆಗೆ ಒಟ್ಟು 18 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. ಮುಂದಿನ ವಿಚಾರಣೆಯನ್ನು ಜ.30 ಮತ್ತು 31ಕ್ಕೆ ನಿಗದಿ ಪಡಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದರು. ಆ ದಿನದಂದು ಮತ್ತೆ 15 ಸಾಕ್ಷಿಗಳ ವಿಚಾರಣೆ ಗಾಗಿ ಸಮನ್ಸ್ ಜಾರಿ ಮಾಡಲು ಸೂಚಿಸಲಾಗಿದೆ. ಈ ಸಂದರ್ಭದಲ್ಲಿ ಆರೋಪಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಯಿತು.