×
Ad

ಕ್ಯಾಂಪ್ಕೊ ಕುಂದಾಪುರ ಶಾಖೆಯ ನವೀಕೃತ ಕಚೇರಿ, ಗೋದಾಮು ಕಟ್ಟಡದ ಉದ್ಘಾಟನೆ

Update: 2025-11-25 20:08 IST

ಕುಂದಾಪುರ, ನ.25: ಕ್ಯಾಂಪ್ಕೊ ರೈತರ ಪರವಾದ ಸಂಸ್ಥೆ. ಕೇವಲ ಲಾಭ ಮಾಡುವ ಉದ್ದೇಶವಲ್ಲದೆ ಸಾರ್ವಜನಿಕ ಸೇವೆ, ರೈತರಿಗೆ ಉಪಯೋಗ ಎಲ್ಲವೂ ಅಡಗಿದೆ. ರೈತರ ಸಹಭಾಗಿತ್ವ ಇಲ್ಲದೇ ಯಾವುದೇ ಸಹಕಾರಿ ಸಂಸ್ಥೆ ಬೆಳವಣಿಗೆ ಕಾಣುವುದಿಲ್ಲ. ಕ್ಯಾಂಪ್ಕೊ ಜತೆ ವ್ಯವಹಾರ ಮಾಡಿ ಕ್ಯಾಂಪ್ಕೊದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಹೇಳಿದ್ದಾರೆ.

ಕುಂದಾಪುರ ಎಪಿಎಂಸಿ ಪ್ರಾಂಗಣದಲ್ಲಿ ಸೋಮವಾರ ಕ್ಯಾಂಪ್ಕೊದ ಕುಂದಾಪುರ ಶಾಖೆಯ ನವೀಕೃತ ಕಚೇರಿ, ಗೋದಾಮು ಕಟ್ಟಡದ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಕ್ಯಾಂಪ್ಕೋ ವ್ಯವಸ್ಥಾಪನ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ ಮಾತನಾಡಿ, ಕಳೆದ ವರ್ಷ 3,632 ಕೋ.ರೂ. ವ್ಯವಹಾರ ಮಾಡಿ 49 ಕೋ.ರೂ. ಲಾಭ ಮಾಡಿದೆ. ಕೆಜಿಯೊಂದಕ್ಕೆ ಅಡಿಕೆಗೆ 2 ರೂ., ಕೊಕೊಗೆ 6ರೂ. ಹಸಿಬೀಜಕ್ಕೆ 4ರೂ. ಪ್ರೋತ್ಸಾಹಧನ ನೀಡಿದ್ದು, ಕ್ಯಾಂಪ್ಕೋ ಇತಿಹಾಸದಲ್ಲೇ ಮೊದಲು ಎಂದರು.

ಈ ವರ್ಷ ಈಗಾಗಲೇ 30,400 ಟನ್ ಅಡಿಕೆ ಖರೀದಿಸಲಾಗಿದೆ. ಕಳೆದ ವರ್ಷಕ್ಕಿಂತ 1 ಸಾವಿರ ಟನ್ ಹೆಚ್ಚು. 880 ಮೆ.ಟನ್ ರಬ್ಬರ್‌ ಖರೀದಿಸಲಾಗಿದೆ. 857 ಮೆ.ಟನ್ ಕಾಳುಮೆಣಸು ಖರೀದಿಸಲಾಗಿದೆ. 6,435 ಟನ್ ಚಾಕಲೇಟ್ ಉತ್ಪನ್ನಗಳನ್ನು ತಯಾರಿಸಲಾಗಿದೆ. ಕಳೆದ ವರ್ಷ 5,684 ಮೆ.ಟನ್ ಉತ್ಪಾದನೆಯಾಗಿತ್ತು. ಕನಿಷ್ಟ 100 ಕೆಜಿಯಾದರೂ ಅಡಿಕೆ ನೀಡುವ ರೈತರಿಗೆ ವೈದ್ಯಕೀಯ ನೆರವು ಕೂಡಾ ದೊರೆಯುತ್ತದೆ ಎಂದು ಅವರು ತಿಳಿಸಿದರು.

ಉಪಾಧ್ಯಕ್ಷ ಶಂ.ನಾ.ಖಂಡಿಗೆ, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಟಿಎಪಿಸಿಎಂಎಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ನಿರ್ದೇಶಕರಾದ ಎಸ್.ಆರ್.ಸತೀಶ್ಚಂದ್ರ, ದಯಾನಂದ ಹೆಗ್ಡೆ, ಶಂಭುಲಿಂಗ ಜಿ.ಹೆಗಡೆ, ಕೆ. ಬಾಲಕೃಷ್ಣ ರೈ, ಜಯರಾಮ ಸರಳಾಯ, ಪದ್ಮರಾಜ ಪಟ್ಟಾಜೆ, ಎಂ.ಮಹೇಶ ಚೌಟ, ರಾಘವೇಂದ್ರ ಭಟ್, ಡಾ.ಜಯಪ್ರಕಾಶ ನಾರಾಯಣ ಟಿ.ಕೆ., ರಾಧಾಕೃಷ್ಣನ್, ಸತ್ಯನಾರಾಯಣ ಪ್ರಸಾದ್, ಸುರೇಶ್ ಕುಮಾರ್ ಶೆಟ್ಟಿ, ಜನರಲ್ ಮೆನೆಜರ್ ರೇಶ್ಮಾ ಮಲ್ಯ, ಡಿಜಿಎಂ ಗೋವಿಂದ ಭಟ್, ಸರಕಾರಿ ಆಸ್ಪತ್ರೆ ಆಡಳಿತ ಶಸ್ತ್ರಚಿಕಿತ್ಸಕ ವೈದ್ಯಾಧಿಕಾರಿ ಡಾ.ಚಂದ್ರ ಮರಕಾಲ ಉಪಸ್ಥಿತರಿದ್ದರು. ಮುಖ್ಯ ವ್ಯವಸ್ಥಾಪಕ ಚಂದ್ರ ವಿ.ಅಮೀನ್ ಕಾರ್ಯಕ್ರಮ ನಿರ್ವಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News