×
Ad

ಇಎಸ್‌ಐ ನೌಕರರ ವೇತನ ಮಿತಿ ಹೆಚ್ಚಿಸಲು ಕೇಂದ್ರ ಸರಕಾರದಿಂದ ತಜ್ಞರ ಸಮಿತಿ ರಚನೆ: ಸಂಸದ ಕೋಟ

Update: 2025-11-13 18:56 IST

ಉಡುಪಿ: ನೌಕರರಿಗೆ ಇಎಸ್‌ಐ ಸೌಲಭ್ಯ ದೊರೆಯಲು ಇರುವ ಮಾಸಿಕ ವೇತನದ ಮಿತಿಯನ್ನು 21,000ರೂ.ಗಳಿಂದ 35,000ರೂ.ಗಳಿಗೆ ಹೆಚ್ಚಿಸಬೇಕೆಂಬ ತಮ್ಮ ಮನವಿಗೆ ಸ್ಪಂದಿಸಿರುವ ಕೇಂದ್ರ ಕಾರ್ಮಿಕ ಇಲಾಖೆ ವೇತನ ಮಿತಿ ಹೆಚ್ಚಳದ ಬಗ್ಗೆ ಪರಿಶೀಲಿಸಿ ವರದಿ ನೀಡಲು ತಜ್ಞರ ಸಮಿತಿಯೊಂದನ್ನು ರಚಿಸಿದೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ನೌಕರರಿಗೆ ಆರೋಗ್ಯ ವಿಮೆಗೆ ಪೂರಕವಾಗಿ ಇಎಸ್‌ಐ ಸೌಲಭ್ಯ ದೊರೆಯುತಿದ್ದು, ಈ ಸೌಲಭ್ಯ ಪಡೆಯುತ್ತಿರುವ ಖಾಸಗಿ ವಲಯ ಮತ್ತು ಅರೆ ಸರಕಾರಿ ನೌಕರರ ವೇತನ ಕಾಲಕಾಲಕ್ಕೆ ಪರಿಷ್ಕರಣೆಯಾಗುತ್ತಿದ್ದರೂ, ಇಎಸ್‌ಐ ಸೌಲಭ್ಯ ಮಾಸಿಕ 21,000 ರೂ. ಒಳಗಿನ ವೇತನ ಪಡೆಯುವ ಸಿಬ್ಬಂದಿಗಳಿಗೆ ಮಾತ್ರ ಅನ್ವಯಿಸುತ್ತಿದೆ. ಅದಕ್ಕಿಂತ ಹೆಚ್ಚು ವೇತನ ಪಡೆಯುವವರು ಇಎಸ್‌ಐ ಸೌಲಭ್ಯದಿಂದ ವಂಚಿತರಾಗುತ್ತಿರುವುದರಿಂದ ಮಾಸಿಕ ವೇತನದ ಮಿತಿಯನ್ನು 35,000ರೂ.ಗೆ ಹೆಚ್ಚಿಸಬೇಕೆಂದು ಸಂಸದ ಕೋಟ, ಕೇಂದ್ರ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಿದ್ದರು.

ಕೇಂದ್ರ ಇ.ಎಸ್.ಐ ಕಾರ್ಪೊರೇಷನ್ ಅಧ್ಯಕ್ಷರನ್ನೊಳಗೊಂಡು ವಿ.ವಿ ಗಿರಿ ರಾಷ್ಟ್ರೀಯ ಕಾರ್ಮಿಕ ನಿಗಮದ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆಯಾಗಿದ್ದು, ಸಮಿತಿಯ ಶಿಫಾರಸುಗಳನ್ನು ನಿರೀಕ್ಷಿಸಿ ಇಎಸ್‌ಐ ವೇತನ ಹೆಚ್ಚಳದ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಂದನಾ ಗುರ್ನಾನಿ ಅವರು ತಮಗೆ ಪತ್ರ ಮೂಲಕ ಮಾಹಿತಿ ನೀಡಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸಮಿತಿಯು, ಕಾರ್ಮಿಕರ ಪರವಾಗಿ ಸಂಪೂರ್ಣವಾಗಿ ಸ್ಪಂದಿಸುವ ಭರವಸೆ ಇದೆ ಎಂದು ಉಡುಪಿ ಸಂಸದರ ಕಛೇರಿ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News