ಮಲ್ಪೆ ಬಂದರಿನಲ್ಲಿ ಮೀನು ಕಾರ್ಮಿಕನ ಸಾವಿನ ಪ್ರಕರಣ: ಆರೋಪಿಗೆ ಜೈಲುಶಿಕ್ಷೆ
ಉಡುಪಿ, ಜ.26: ನಾಲ್ಕು ವರ್ಷಗಳ ಹಿಂದೆ ಮಲ್ಪೆ ಬಾಪುತೋಟ ಧಕ್ಕೆಯಲ್ಲಿ ಲಂಗಾರು ಹಾಕಿದ್ದ ಬೋಟಿನಲ್ಲಿ ಮೀನು ಕಾರ್ಮಿಕ ಕೊಪ್ಪಲ ಜಿಲ್ಲೆಯ ಕುಕ್ಕುನೂರಿನ ಮಹಾಂತೇಶ್(35) ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೈಲುಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಹೊನ್ನಾವರ ತಾಲೂಕಿನ ಬೇಳೆಕೆರೆಯ ನಾಗರಾಜ್ ಅಂಬಿಗ(30) ಶಿಕ್ಷೆಗೆ ಗುರಿಯಾಗಿರುವ ಆರೋಪಿ. ಇವರು ಶ್ರೀಗುರು ಸಿದ್ದಿ ಬೋಟಿನಲ್ಲಿ ಮೀನುಗಾರಿಕೆ ಮಾಡಿಕೊಂಡಿದ್ದು, ಕೆಲಸ ಮುಗಿಸಿ 2022ರ ಎ.13ರಂದು ಬೋಟಿನಲ್ಲಿ ನಾಗರಾಜ ಮಲಗಿದ್ದರು. ಮಹಾಂತೇಶ್ ಹಾಗೂ ಇತರ ಇಬ್ಬರು ಊಟ ಮಾಡಲು ಬೋಟಿನ ಕ್ಯಾಬಿನ್ ಒಳಗಡೆಯ ಲೈಟ್ ಹಾಕಿದರು. ಆಗ ಲೈಟ್ ಆಫ್ ಮಾಡುವಂತೆ ನಾಗರಾಜ ತಿಳಿಸಿದ್ದು, ಇದೇ ವಿಚಾರವಾಗಿ ಮಹಾಂತೇಶ ಮತ್ತು ನಾಗರಾಜ ಮಾತಿನ ಚಕಮಕಿ ನಡೆಯಿತು.
ಮಾತಿಗೆ ಮಾತು ಬೆಳೆದು ನಾಗರಾಜ ಸಿಟ್ಟಿನಿಂದ ಕಬ್ಬಿಣದ ರಾಡ್ನಿಂದ ಮಹಾಂತೇಶನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದನು. ಇದರಿಂದ ಗಂಭೀರವಾಗಿ ಗಾಯಗೊಂಡ ಮಹಾಂತೇಶ್, ಚಿಕಿತ್ಸೆ ಫಲಕಾರಿಯಾಗದೆ ಎ.14ರಂದು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟರು. ಇದನ್ನು ತಡೆಯಲು ಹೋದ ಇನ್ನೋರ್ವನಿಗೂ ನಾಗರಾಜ್ ಹಲ್ಲೆ ಮಾಡಿದನು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಚಾರಣೆ ನಡೆಸಿದ ನ್ಯಾಯಾಲಯವು, ಆರೋಪಿ ಮಹಾಂತೇಶನನ್ನು ಕೊಲೆ ಮಾಡುವ ಉದ್ದೇಶ ಹೊಂದಿರಲಿಲ್ಲ, ಆದರೆ ಈತ ಹಲ್ಲೆಯಿಂದ ಮಹಾಂತೇಶ್ ಮೃತಪಟ್ಟಿರುವುದು ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟು, ಆರೋಪಿ ನಾಗರಾಜ ಅಂಬಿಗನಿಗೆ ಐಪಿಸಿ ಸೆಕ್ಷನ್ 304ರ ಅಡಿಯಲ್ಲಿ ನಾಲ್ಕು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 65,000 ರೂ. ದಂಡ ವಿಧಿಸಿದೆ. ದಂಡದ ಮೊತ್ತವನ್ನು ಪಾವತಿಸಲು ವಿಫಲವಾದಲ್ಲಿ, ಆರು ತಿಂಗಳ ಕಾಲ ಸರಳ ಹೆಚ್ಚುವರಿ ಜೈಲುಶಿಕ್ಷೆ ವಿಧಿಸಿ ಆದೇಶಿಸಿದೆ.
ಅದೇ ರೀತಿ ತಡೆಯಲು ಬಂದವರಿಗೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಆರು ತಿಂಗಳ ಜೈಲುಶಿಕ್ಷೆ ಹಾಗೂ 10ಸಾವಿರ ರೂ. ದಂಡ ವಿಧಿಸಲಾಗಿದೆ. ಮೃತರ ಪತ್ನಿಗೆ 75ಸಾವಿರ ರೂ. ಪರಿಹಾರ ನೀಡುವಂತೆ ನ್ಯಾಯಾಲಯವು ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶ ನೀಡಿದೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು.