×
Ad

ಉಡುಪಿ | ಗಣರಾಜ್ಯೋತ್ಸವ: ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕರಿಗೆ ಸನ್ಮಾನ

Update: 2026-01-26 19:07 IST

 

ಉಡುಪಿ : ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ವತಿಯಿಂದ 2025-26ನೇ ಸಾಲಿನ ಆತ್ಮ ಯೋಜನೆಯಡಿ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆಯಾದ 10 ಮಂದಿ ರೈತರನ್ನು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಲಾ 25,000 ರೂ. ನಗದು ಬಹುಮಾನದೊಂದಿಗೆ ಸನ್ಮಾನಿಸಿದರು.

ಬೊಮ್ಮರಬೆಟ್ಟು ಹಿರಿಯಡ್ಕದ ಸುಮಾ, ಕುಂದಾಪುರ ಮೊಳಹಳ್ಳಿಯ ಗುಲಾಬಿ, ಹೆಬ್ರಿ ಮಡಾಮಕ್ಕಿಯ ಸೀತಾರಾಮ ಪೂಜಾರಿ, ಕಾರ್ಕಳ ಪಳ್ಳಿಯ ರಾಜೀ ನಾಯ್ಕ, ಹೆಬ್ರಿ ಚಾರಾದ ರೇವತಿ ಭಟ್, ಉಡುಪಿ ಬೈರಂಪಳ್ಳಿಯ ಜೋಧಾ ಶೆಟ್ಟಿ, ಬೈಂದೂರು ಕಾಲ್ತೋಡಿನ ಸುಚಿತ್ರಾ, ಯಳಜಿತ್ನ ಸೀತು, ಕಾರ್ಕಳ ಕೆರ್ವಾಶೆಯ ಅಣ್ಣಿ ಪರವ ಮತ್ತು ಬ್ರಹ್ಮಾವರ ಚೇರ್ಕಾಡಿಯ ಸುಮತಿ ನಾಯಕ್ ಅವರು ಇಂದು ಸನ್ಮಾನಿತರಾದರು.

ಇವರೊಂದಿಗೆ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆಯಾದ ನೀಲಾವರದ ಮಮತಾ ಪಿ.ಶೆಟ್ಟಿ, ಕಟ್ಟಿಂಗೇರಿ ಕಾಪುನ ವಸಂತಿ ಕರ್ಕೇರ, ಮಲ್ಲಾರು ಗ್ರಾಮದ ಶ್ರೀನಿವಾಸ ರಾವ್, ಹೆಗ್ಗುಂಜೆಯ ಶಕೀಲ ಶೆಟ್ಟಿ ಹಾಗೂ ಶಿರ್ವದ ಭಾವನಾ ಭಟ್ ಅವರನ್ನು ತಲಾ 10,000 ರೂ. ನಗದು ನೀಡಿ ಸನ್ಮಾನಿಸಲಾಯಿತು.

2023-24ನೇ ಸಾಲಿನ ಜಿಲ್ಲಾ ಮಟ್ಟದ ಕೃಷಿ ಪ್ರಶಸ್ತಿಗೆ ಆಯ್ಕೆಯಾದ ಮಣೂರಿನ ಲಕ್ಷ್ಮೀ, ಕೆದೂರಿನ ಕರುಣಾಕರ ಶೆಟ್ಟಿ ಮತ್ತು ಪಾದೂರಿನ ನಿತ್ಯಾನಂದ ನಾಯಕ್ ಹಾಗೂ ರೈತ ಮಹಿಳೆಯರ ವಿಭಾಗದಲ್ಲಿ ನೀಲಾವರದ ಲಲಿತಾ ಶೆಟ್ಟಿ, ಗುಲ್ವಾಡಿ ನಾಗರತ್ನ ಪೂಜಾರಿ ಹಾಗೂ ಮಠದಬೆಟ್ಟು ಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳಿಗೆ ಸನ್ಮಾನ :

ಕಳೆದ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸರಕಾರಿ ಪ್ರೌಢ ಶಾಲೆಗಳ ವಿದ್ಯಾರ್ಥಿಗಳನ್ನು ನಗದು ಬಹುಮಾನದೊಂದಿಗೆ ಸನ್ಮಾನಿಸಲಾಯಿತು. ಗರಿಷ್ಠ 625 ಅಂಕಗಳಿಸಿದ ಹಾಲಾಡಿಯ ಶ್ರೀರಾಮ ಶೆಟ್ಟಿ ಅವರಿಗೆ 50,000 ರೂ. ನಗದು ನೀಡಿ ಗೌರವಿಸಲಾಯಿತು. 623 ಅಂಕ ಪಡೆದ ಉಡುಪಿಯ ತೃಪ್ತಿ, ತಲಾ 622 ಅಂಕ ಪಡೆದ ಕಾಳಾವರದ ನೂರ್ ಮಾಝೀನ್ ಮತ್ತು ಸೃಷ್ಟಿ ಆಚಾರ್ ರನ್ನು ಸಹ ಸನ್ಮಾನಿಸಲಾಯಿತು. ಇವರೊಂದಿಗೆ ತಾಲೂಕು ಮಟ್ಟದಲ್ಲಿ ಅಗ್ರಸ್ಥಾನ ಪಡೆದ ಮೂವರನ್ನು ಸಹ ಸನ್ಮಾನಿಸಲಾಯಿತು.

ಪಥಸಂಚಲನ ಪ್ರಶಸ್ತಿ :

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆಕರ್ಷಕ ಪಥ ಸಂಚಲನ ನಡೆಸಿದ ಕಾಲೇಜು, ಪ್ರೌಢ ಶಾಲೆ ಹಾಗೂ ಪ್ರಾಥಮಿಕ ಶಾಲಾ ತಂಡಗಳಿಗೆ ಸಹ ಬಹುಮಾನಗಳನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿತರಿಸಿದರು.

ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ :

ಕೊನೆಯಲ್ಲಿ ಆಕರ್ಷಕ ಸಾಂಸ್ಕೃತಿಕ ಹಾಗೂ ದೇಶಭಕ್ತಿ ಕುರಿತ ನೃತ್ಯ ಕಾರ್ಯಕ್ರಮದಲ್ಲಿ ಉತ್ತಮ ಪ್ರದರ್ಶನ ನೀಡಿದ ಒಳಕಾಡು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ, ಉಡುಪಿ ಪಣಿಯಾಡಿ ಶ್ರೀ ಅನಂತೇಶ್ವರ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ, ಉಡುಪಿಯ ಮುಕುಂದ ಕೃಪಾ ಆಂಗ್ಲಮಾಧ್ಯಮ ಶಾಲೆ ತೃತೀಯ ಸ್ಥಾನ ಹಾಗೂ ಉದ್ಯಾವರ ಸೈಂಟ್ ಕ್ಲೇಯರ್ ಆಂಗ್ಲಮಾಧ್ಯಮ ಶಾಲೆ ಸಮಾಧಾನಕರ ಬಹುಮಾನ ಪಡೆದವು.

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News