×
Ad

ಫೆಬ್ರವರಿ ತಿಂಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಸಮಾವೇಶ: ಅಶೋಕ್ ಕುಮಾರ್ ಕೊಡವೂರು

Update: 2026-01-31 20:31 IST

ಉಡುಪಿ, ಜ.31: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ವ್ಯಾಪಕ ಪ್ರಚಾರಕ್ಕಾಗಿ ಹಾಗೂ ತಳಮಟ್ಟದಲ್ಲಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ತಾಲೂಕು ಮಟ್ಟದ ಸಮಾವೇಶವನ್ನು ಫೆಬ್ರವರಿ ತಿಂಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.

ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್‌ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ರಾಜ್ಯ ಸರಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿದ್ದು, ಗ್ಯಾರಂಟಿ ಯೋಜನೆಯ ಲಾಭವನ್ನು ಪ್ರತಿ ಫಲಾನುಭವಿ ಪಡೆಯುವಂತಾಗಲು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಫೆಬ್ರವರಿ ತಿಂಗಳಲ್ಲಿ ಎಲ್ಲಾ ತಾಲೂಕುಗಳಲ್ಲೂ ಸಮಾವೇಶವನ್ನು ನಡೆಸಲಾಗುವುದು ಎಂದವರು ವಿವರಿಸಿದರು.

ಪಂಚ ಗ್ಯಾರಂಟಿ ಯೋಜನೆಗಳ 2025ರ ಡಿಸೆಂಬರ್ ತಿಂಗಳವರೆಗಿನ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅಶೋಕ್ ಕೊಡವೂರು, ಶಕ್ತಿ ಯೋಜನೆಯಡಿ ಜಿಲ್ಲೆಯ ಉಡುಪಿ-ಕುಂದಾಪುರ ಘಟಕಗಳಿಂದ ಕಾರ್ಯಾಚರಣೆಯಾ ಗುವ ಸಾರಿಗೆಗಳಲ್ಲಿ ಈವರೆಗೆ ಒಟ್ಟು 3.53 ಕೋಟಿ ಮಹಿಳಾ ಪ್ರಯಾಣಿಕರು ಯೋಜನೆಯ ಸೌಲಭ್ಯ ಪಡೆದಿದ್ದು, ಒಟ್ಟು 137.59 ಕೋಟಿ ರೂ. ಮೊತ್ತದ ವೆಚ್ಚ ಭರಿಸಲಾಗಿದೆ ಎಂದರು.

ಬಸ್ ಸೇವೆ ಪ್ರಾರಂಭ: ಗ್ರಾಮೀಣ ಪ್ರದೇಶದ ಜನರ ಬೇಡಿಕೆಯಂತೆ ಗೋಳಿಯಂಗಡಿ- ವಡ್ಡರ್ಸೆ- ಕುಂದಾಪುರ ಮಾರ್ಗ, ಕೊರೋನಾ ಅವಧಿಯಲ್ಲಿ ಸ್ಥಗಿತಗೊಂಡಿದ್ದ ಕೋಡಿಬೆಂಗ್ರೆ ಸಾರಿಗೆ, ಉಡುಪಿ- ಬ್ರಹ್ಮಾವರ-ಹೆಬ್ರಿ, ಪೆಣರ್ಂಕಿಲ, ಕುಂದಾಪುರ- ತಲ್ಲೂರು- ಮಾವಿನಕಟ್ಟೆ- ನೇರಳಕಟ್ಟೆ ಮಾರ್ಗ, ಬೈಂದೂರು- ಪಡುವರಿ- ಸೋಮೇಶ್ವರ- ದೊಂಬೆ- ಕರಾವಳಿ-ಶಿರೂರು ಮಾರ್ಗ, ನಾಡಾ- ಬಡಾಕೆರೆ ಮಾರ್ಗದ ಬಸ್ಸುಗಳು ಜಿಲ್ಲಾ ಹಾಗೂ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳ ಸತತ ಪ್ರಯತ್ನದಿಂದ ಕಾರ್ಯಾರಂಭ ಮಾಡಿವೆ ಎಂದವರು ತಿಳಿಸಿದರು.

ಗೃಹಲಕ್ಷ್ಮಿ ಯೋಜನೆಯಡಿ ಯೋಜನೆಯ ಪ್ರಾರಂಭದಲ್ಲಿ ಜಿಲ್ಲೆಯಲ್ಲಿ 1,99,285 ಮಹಿಳಾ ಫಲಾನುಭವಿಗಳಿದ್ದು, ಸೆಪ್ಟೆಂಬರ್ 2025ರ ಅಂತ್ಯಕ್ಕೆ ಈ ಸಂಖ್ಯೆ 2,24,636ಕ್ಕೆ ಏರಿಕೆಯಾಗಿದೆ. ಇದುವರೆಗೆ 1050.90 ಕೋಟಿ ರೂ. ಗೃಹಲಕ್ಷ್ಮಿ ಅನುದಾನವನ್ನು ಮಹಿಳಾ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಪಾವತಿಸಲಾಗಿದೆ. ಈ ಯೋಜನೆ ಯಡಿ ಇದುವರೆಗೆ 2,36,995 ಮಹಿಳೆಯರು ನೊಂದಾಯಿಸಿಕೊಂಡಿದ್ದು, 2,24,636 ಫಲಾನುಭವಿಗಳು ಯೋಜನೆಯ ಸೌಲಭ್ಯವನ್ನು ಪಡೆಯುತಿದ್ದಾರೆ ಎಂದರು.

ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 3,80,040 ಬಳಕೆದಾರ ರಲ್ಲಿ 3,00,642 ಫಲಾನುಭವಿಗಳು ಯೋಜನೆಯ ಪ್ರಯೋಜನ ಪಡೆಯುತಿ ದ್ದಾರೆ. ಡಿಸೆಂಬರ್ ಅಂತ್ಯದವರೆಗೆ 591.07 ಕೋಟಿ ರೂ. ರಿಯಾಯಿತಿ ಮೊತ್ತವನ್ನು ಗೃಹಬಳಕೆ ಸ್ಥಾವರಗಳಿಗೆ ನೀಡಲಾಗಿದೆ. ಅನ್ನಭಾಗ್ಯ ಯೋಜನೆ ಯಡಿ 2026ರ ಜನವರಿ ಅಂತ್ಯದ ವರೆಗೆ ಒಟ್ಟು 1,87,576 ಪಡಿತರ ಚೀಟಿದಾರರಿಗೆ 39771.40 ಕ್ವಿಂಟಾಲ್ ಅಕ್ಕಿ ಹಂಚಿಕೆ ಮಾಡಲಾಗಿದೆ ಎಂದರು.

ಯುವನಿಧಿ ಯೋಜನೆಯಡಿ ಡಿಸೆಂಬರ್‌ವರೆಗೆ 4274 ವಿದ್ಯಾರ್ಥಿಗಳು ನೊಂದಣಿ ಮಾಡಿಕೊಂಡಿದ್ದು, 3350 ಫಲಾನುಭವಿಗಳು ಯೋಜನೆಯ ಲಾಭ ಪಡೆದಿದ್ದಾರೆ. ಒಟ್ಟು 8.54 ಕೋಟಿ ರೂ. ಡಿಬಿಟಿ ಮೂಲಕ ಅರ್ಹ ವಿದ್ಯಾರ್ಥಿ ಗಳ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂದ ಅವರು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠ್ಠಾನ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಇಲಾಖಾಧಿಕಾರಿಗಳೊಂದಿಗೆ ವಿವಿಧ ಶೈಕ್ಷಣಿಕ ಸಂಸ್ಥೆಗಳಿಗೆ ಭೇಟಿ ನೀಡಿ ಮಾಹಿತಿ ಶಿಬಿರಗಳನ್ನು ಏರ್ಪಡಿಸಿ, ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿ ಯೋಜನೆಯ ಬಗ್ಗೆ ವಿಚಾರವಿನಿಮಯ ನಡೆಸಿದ್ದಾರೆ ಎಂದರು.

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಗುಂಪುಗಳನ್ನು ರಚಿಸಿ ಸರಕಾರದ ವಿವಿಧ ಯೋಜನೆಗಳೊಂದಿಗೆ ಒಗ್ಗೂಡಿಸಿಕೊಂಡು ಬೇರೆ ಬೇರೆ ಚಟುವಟಿಕೆ ಗಳನ್ನು ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಈ ಬಗ್ಗೆ ಆದಷ್ಟು ಶೀಘ್ರದಲ್ಲಿ ಗುಂಪುಗಳನ್ನು ರಚನೆ ಮಾಡುವಂತೆ ಸಮಿತಿಗಳ ಸದಸ್ಯರಿಗೆ ಸೂಚನೆಗಳನ್ನು ನೀಡಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪಂಚಾಯತ್‌ನ ಮುಖ್ಯ ಯೋಜನಾಧಿಕಾರಿ ಉದಯ್‌ಕುಮಾರ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರು, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News