ನಿರ್ಗಮನ ಪರ್ಯಾಯ ಪುತ್ತಿಗೆ ಯತಿಗಳಿಗೆ ಅಭಿನಂದನಾ ಕಾರ್ಯಕ್ರಮ
ಉಡುಪಿ, ಜ.17: ಚತುರ್ಥ ಪರ್ಯಾಯ ಮಹೋತ್ಸವವನ್ನು ಯಶಸ್ವಿಯಾಗಿ ಪೂರೈಸಿದ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಕಿರಿಯ ಯತಿ ಶ್ರೀಸುಶ್ರೀಂದ್ರ ತೀರ್ಥ ಸ್ವಾಮೀಜಿ ಅವರಿಗೆ ಶಿರೂರು ಪರ್ಯಾಯ ಸ್ವಾಗತ ಸಮಿತಿಯ ವತಿಯಿಂದ ಅಭಿನಂದನಾ ಕಾರ್ಯಕ್ರಮವನ್ನು ಶನಿವಾರ ಉಡುಪಿ ರಥಬೀದಿಯಲ್ಲಿ ಆಯೋಜಿಸಲಾಗಿತ್ತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ, ಕೆಲವರಲ್ಲಿ ಪುತ್ತಿಗೆ ಸ್ವಾಮೀಜಿ ಯವರಲ್ಲಿ ಕೋಟಿಗಟ್ಟಲೆ ಹಣ ಸಂಗ್ರಹ ಇದೆ ಎಂಬ ಭಾವನೆ ಇದೆ. ಆದರೆ ನಮ್ಮ ಹತ್ತಿರ ಯಾವುದೇ ಹಣ ಸಂಗ್ರಹ ಇಲ್ಲ. ಖರ್ಚು ಮಾಡಿದಷ್ಟು ಹಣ ಬರುತ್ತದೆ ಎಂಬ ಭಾವನೆ ನಮ್ಮದು. ಹಣ ಖರ್ಚು ಮಾಡುವುದೇ ಹಣ ಸಂಪಾದನೆ ಮಾಡುವ ಗುಟ್ಟು. ನಾವು ಹಣ ಕೂಡಿಟ್ಟು ಯಾವುದೇ ಯೋಜನೆ ಮಾಡಿಲ್ಲ. ನಮ್ಮಲ್ಲಿ ಹಣ ಇಲ್ಲ, ಜನರ ವಿಶ್ವಾಸ ಇದೆ. ಅದೇ ನಮ್ಮ ದೊಡ್ಡ ಸಂಪತ್ತು ಎಂದರು.
ಅಧ್ಯಕ್ಷತೆಯನ್ನು ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಯಶ್‌ಪಾಲ್ ಸುವರ್ಣ ವಹಿಸಿದ್ದರು. ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿದರು. ಉಡುಪಿ ಸಂಸ್ಕೃತ ಕಾಲೇಜಿನ ಉಪನ್ಯಾಸಕ ಡಾ.ಷಣ್ಮುಗ ಹೆಬ್ಬಾರ್ ಅಭಿನಂದನಾ ಭಾಷಣ ಮಾಡಿದರು.
ಮುಖ್ಯ ಅತಿಥಿಗಳಾಗಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ನಗರಸಭೆ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ಪೂಜಾರಿ, ಪೌರಾಯುಕ್ತ ಮಹಾಂತೇಶ್ ಹಂಗರಗಿ, ಬಡಗಬೆಟ್ಟು ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಉಪಸ್ಥಿತರಿದ್ದರು.
ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ದರು. ಸ್ವಾಗತ ಸಮಿತಿಯ ಕೋಶಾಧಿಕಾರಿ ಜಯ ಪ್ರಕಾಶ್ ಕೆದ್ಲಾಯ ಅಭಿನಂದನಾ ಪತ್ರವನ್ನು ವಾಚಿಸಿದರು. ಹೊರೆಕಾಣಿಕೆ ಸಮಿತಿಯ ಸಂಚಾಲಕ ಸುಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.