ವಿಶ್ವದಾಖಲೆ ಸಾಧಕ ದೃಶ್ಯಾ ಕೊಡಗುಗೆ ಅಭಿನಂದನಾ ಕಾರ್ಯಕ್ರಮ
ಉಡುಪಿ, ಜ.5: ಕೌಟುಂಬಿಕ ಹಾಗೂ ಸಾಮಾಜಿಕ ಹಿಂಸೆ ಮತ್ತು ದೌರ್ಜನ್ಯದ ವಿರುದ್ಧ ಜನಜಾಗೃತಿ ಮತ್ತು ಎಚ್ಚರಿಕೆ ಮೂಡಿಸುವ ಸಲುವಾಗಿ ವನಸುಮ ಟ್ರಸ್ಟ್ ಕಟಪಾಡಿ ವತಿಯಿಂದ ಜೆಸಿಐ ಕಟಪಾಡಿ ಮತ್ತು ಜೆಸಿಐ ಉಡುಪಿ ಸಿಟಿ ಸಹಯೋಗದಲ್ಲಿ ದೃಶ್ಯಾ ಕೊಡಗು ಮತ್ತು ಉಜ್ವಲ್ ಕಾಮತ್ 12 ದಿನಗಳ ಕಾಲ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಮೂರು ರಾಜ್ಯಗಳಲ್ಲಿ ಒಟ್ಟು ಮೂರು ಸಾವಿರ ಕಿಲೋಮೀಟರ್ ನಡೆಸಿದ ಬೈಕ್ ಸಂಚಾರವು ಇಂಡಿಯ ಬುಕ್ ಆಫ್ ರೆಕಾರ್ಡ್ ಸೇರ್ಪಡೆಯಾದ ಪ್ರಯುಕ್ತ ಅಭಿನಂದನಾ ಸಮಾರಂಭವನ್ನು ಉಡುಪಿ ಶಾರದಾ ಇಂಟರ್ ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಕಾಪು ಮಾಜಿ ಶಾಸಕ ಲಾಲಾಜಿ ಮೆಂಡನ್ ಮಾತನಾಡಿ, ಉತ್ತಮ ಸಂವೇದನೆ, ಜೀವನ ಮೌಲ್ಯಗಳು ಹಾಗೂ ಸ್ಫೂರ್ತಿದಾಯಕ ನುಡಿಗಳು ಪ್ರತಿಯೊಂದೂ ಕುಟುಂಬಗಳಿಗೆ ಅವಶ್ಯಕತೆಯಾಗಿದೆ. ಯುವಕರು ಮಾದಕ ವ್ಯಸನಗಳ ದುಶ್ಚಟಗಳಿಗೆ ಬಲಿಯಾಗದಂತೆ ಸಾಹಸ ಪ್ರವೃತ್ತಿಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಡಾ.ವಿಜಯೇಂದ್ರ ವಸಂತ್ ಅಭಿನಂದನಾ ಭಾಷಣ ಮಾಡಿದರು. ರಂಜನ್ ಕಲ್ಕೂರ ಮುಖ್ಯ ಅತಿಥಿಯಾಗಿದ್ದರು. ಅಂತರಾಷ್ಟ್ರೀಯ ಉತ್ತಮ ಬಾಲನಟ ಪ್ರಶಸ್ತಿ ಪುರಸ್ಕೃತ, ಚಲನಚಿತ್ರ ನಟ ಹಾಗೂ ಬೈಕ್ ಸಂಚಾರದಲ್ಲಿ ಸಾಧನೆ ಮಾಡಿದ ದೃಶ್ಯಾ ಕೊಡಗು ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮ, ಚಲನಚಿತ್ರ ನಟ ಸ್ವರಾಜ್ ಶೆಟ್ಟಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ ಹೇರೂರು, ಹಿರಿಯ ಜೇಸಿ ಡೆನಿಸ್ ಡಿಸೋಜ, ಜೇಸಿ ವಲಯ ಪೂರ್ವ ಧ್ಯಕ್ಷ ಅಭಿಲಾಷ್, ವಲಯಧಿಕಾರಿ ಸ್ವರಾಜ್, ವನಸುಮ ವೇದಿಕೆ ಅಧ್ಯಕ್ಷ ವಿನಯ್ ಆಚಾರ್ಯ, ಹಿರಿಯ ರಂಗ ನಿರ್ದೇಶಕ ಬಾಸುಮ ಕೊಡಗು, ಅಸಾಮಾನ್ಯ ಸಾಧಕಿ ಆದಿಸ್ವರೂಪ, ಜೆಸಿಐ ಸಿಟಿ ಅಧ್ಯಕ್ಷೆ ಪಲ್ಲವಿ ಕೊಡಗು, ಚಿತ್ರದುರ್ಗ ಜಿಲ್ಲೆಯ ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಹಾಗೂ ಕಟ್ಟೆಮಾರ್ ಉಪಸ್ಥಿತರಿದ್ದರು. ಜೆಸಿಐ ಉಡುಪಿ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.