ಜಲಕ್ರೀಡೆ ಬೋಟ್‌ಗೆ ಪರವಾನಿಗೆ ಪಡೆಯಲು ಸಿಎಸ್ಪಿ ಪೊಲೀಸರ ಆದೇಶ
ಉಡುಪಿ, ಜು.17: ಕರಾವಳಿ ಕಾವಲು ಪೊಲೀಸ್ ಠಾಣಾ ಸರಹದ್ದಿನಲ್ಲಿ ಜಲಕ್ರೀಡೆ (ವಾಟರ್ ಸ್ಪೋರ್ಟ್ಸ್) ನಡೆಸಲು ವಿವಿಧ ಇಲಾಖೆಗಳಿಂದ ಪರವಾನಿಗೆ ಪಡೆಯುವುದು ಅಗತ್ಯವಿದ್ದು, ಇನ್ನೂ ಪರವಾನಿಗೆ ಪಡೆಯ ದವರು ಶೀಘ್ರ ಆ ಪ್ರಕ್ರಿಯೆ ಮುಗಿಸಿಕೊಳ್ಳಲು ಕರಾವಳಿ ಕಾವಲು ಪೊಲೀಸ್ ಪ್ರಭಾರ ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಈ ಹಿಂದೆ ಒಟ್ಟು 227 ಜಲಕ್ರೀಡೆ ಬೋಟ್ ಮಾಲಕರಿದ್ದು ಅವರಲ್ಲಿ 42 ಮಂದಿ ಜಲಕ್ರೀಡೆ ಬೋಟ್ ಪರವಾನಿಗೆ ಹೊಂದಿದ್ದರು. ಉಳಿದ 185 ಮಂದಿ ಮಾಲಕರು ಪರವಾನಿಗೆ ಪಡೆಯಲು ಬಾಕಿಯಿತ್ತು. ಈ ಬಗ್ಗೆ 9 ಕರಾವಳಿ ಕಾವಲು ಪೊಲೀಸ್ ಠಾಣೆಗಳಲ್ಲಿ ಬೋಟು ಮಾಲಕರ ಮತ್ತು ಚಾಲಕರ ಸಭೆಯನ್ನು ನಡೆಸಿ ಸೂಕ್ತ ಸೂಚನೆಗಳನ್ನು ನೀಡಲಾಗಿದ್ದು, ಸಭೆ ನಡೆಸಿದ ನಂತರ ಪ್ರಸ್ತುತ 227 ಬೋಟ್ ಮಾಲಕರಲ್ಲಿ 151 ಮಾಲಕರು ಪರವಾನಿಗೆಯನ್ನು ಪಡೆದುಕೊಂಡಿದ್ದಾರೆ. ಇನ್ನೂ 76 ಬೋಟ್ ಮಾಲಕರುಗಳ ಲೈಸೆನ್ಸ್ ನವೀಕರಣಕ್ಕೆ ಬಾಕಿಯಿದೆ ಎಂದು ಅವರು ತಿಳಿಸಿದರು.
ಬಾಕಿ ಇರುವ ಲೈಸೆನ್ಸ್ ನವೀಕರಣಕ್ಕೆ ಕಾಲಾವಕಾಶವನ್ನು ನೀಡಲಾಗಿದ್ದು ಈವರೆಗೆ ನವೀಕರಣ ಮಾಡಿದ ಬಗ್ಗೆ ಯಾವುದೇ ಮಾಹಿತಿಯನ್ನು ಕೆಲ ಬೋಟ್ ಮಾಲಕರು ನೀಡಿಲ್ಲ. ಆದ್ದರಿಂದ ಕರಾವಳಿ ಕಾವಲು ಪೊಲೀಸ್ ಠಾಣಾ ಸರಹದ್ದಿನಲ್ಲಿ ಜಲಕ್ರೀಡೆ ಮತ್ತು ಬೋಟಿಂಗ್ ನಡೆಸುವ ಎಲ್ಲಾ ಬೋಟ್ ಮಾಲಕರು ನಿಗದಿತ ಸಮಯದೊಳಗೆ ಜಲಕ್ರೀಡೆ ಪರವಾನಿಗೆಯನ್ನು ಪಡೆದುಕೊಂಡು ಜಲಕ್ರೀಡೆ ನಡೆಸಲು ಸೂಚಿಸಲಾಗಿದೆ. ತಪ್ಪಿದಲ್ಲಿ ಮುಂದಕ್ಕೆ ಆಗುವ ಯಾವುದೇ ಅನಾಹುತಗಳಿಗೆ ಸಂಬಂಧಪಟ್ಟ ಜಲಕ್ರೀಡೆ ಬೋಟ್ ಮಾಲಕರನ್ನು ಹೊಣೆಗಾರರನ್ನಾಗಿ ಮಾಡಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಕರಾವಳಿ ಕಾವಲು ಪಡೆ ಪೊಲೀಸರ ಪ್ರಕಟಣೆ ತಿಳಿಸಿದೆ.
2026ರ ಜ.26ರಂದು ಕೋಡಿಬೆಂಗ್ರೆ ಡೆಲ್ಟಾ ಬೀಚ್‌ನಿಂದ ಸಮುದ್ರ ವಿಹಾರಕ್ಕಾಗಿ ಸುಮಾರು 28 ಮಂದಿ ಸುಹಾಸ್ ಮತ್ತು ಸೂಫಿಯಾನ ಎಂಬವರ ಮಾಲಕತ್ವದೆರಡು ಬೋಟ್‌ಗಳಲ್ಲಿ ಪಡುಕೆರೆ ಡಾನ್ ವಿವ್ಯೆ ನೋಡಲು ತೆರಳಿ ವಾಪಾಸು ಬರುವಾಗ ಡೆಲ್ಟಾ ಬೀಚ್ ಕ್ರಾಸ್, ಕನ್ಯಾನ ಗ್ರಾಮ ಬಳಿ ಸಮುದ್ರದಲ್ಲಿ ಬೋಟ್ ನೀರಿನ ರಭಸಕ್ಕೆ ಮಗುಚಿ ಬಿದ್ದು, ಸಿಂಧೂ ಹಾಗೂ ಶಂಕರಪ್ಪ ಎಂಬವರು ಮೃತಪಟ್ಟಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಆರೋಪಿಗಳ ವಿರುದ್ಧ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.