ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೆ ಶೀಘ್ರ ವಿಲೀನಕ್ಕೆ ಕ್ರಮ: ಉಡುಪಿ ನಿಲ್ದಾಣದಲ್ಲಿ ಲಿಫ್ಟ್ ಸೌಲಭ್ಯ ಉದ್ಘಾಟಿಸಿ ಸಂಸದ ಕೋಟ

Update: 2026-07-17 20:10 IST

ಉಡುಪಿ, ಜು.17: ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಿದರೆ ಮಾತ್ರ ಕೇಂದ್ರ ಸರಕಾರದಿಂದ ಹೆಚ್ಚಿನ ಅನುದಾನ ದೊರೆತು ಕೊಂಕಣ ರೈಲ್ವೆ ಸರ್ವತೋಮುಖ ಅಭಿವೃದ್ಧಿಗೆ ವೇಗ ಸಿಗಲಿದೆ. ಈ ನಿಟ್ಟಿನಲ್ಲಿ ಕರಾವಳಿ ಭಾಗದ ಮೂವರು ಸಂಸದರಿಂದ ವಿಶೇಷ ಪ್ರಯತ್ನ ನಡೆಸಿದ್ದು, ಶೀಘ್ರವೇ ಇದು ಸಾಧ್ಯವಾಗುವ ನಿರೀಕ್ಷೆ ಇದೆ ಎಂದು ಉಡುಪಿ - ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಉಡುಪಿಯ ಇಂದ್ರಾಳಿಯಲ್ಲಿರುವ ಕೊಂಕಣ ರೈಲ್ವೆ ನಿಗಮದ ಉಡುಪಿ ನಿಲ್ದಾಣದ ಫ್ಲಾಟ್‌ಫಾರಂ 1 ಮತ್ತು 2ರಲ್ಲಿ ಹೊಸದಾಗಿ ಅಳವಡಿಸಲಾಗಿರುವ ಲಿಫ್ಟ್ ಸೌಲಭ್ಯವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಇಂದು 2.26 ಕೋಟಿ ರೂ.ವೆಚ್ಚದಲ್ಲಿ ಲಿಫ್ಟ್ ಸೌಲಭ್ಯ, ಸುಮಾರು 35 ಲಕ್ಷ ರೂ.ವೆಚ್ಚದಲ್ಲಿ ವಿಶ್ರಾಂತಿ ಕೊಠಡಿಯ ನವೀಕರಣ ಹಾಗೂ 10 ಲಕ್ಷ ರೂ. ವೆಚ್ಚದ ಶೌಚಾಲಯ ಉನ್ನತೀಕರಣ ಸೇರಿದಂತೆ ಒಟ್ಟು 2.75 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಉದ್ಘಾಟಿಸಲಾಗಿದೆ ಎಂದರು.

ಕೊಂಕಣ ರೈಲ್ವೆಯಲ್ಲಿ ಮಹಾರಾಷ್ಟ್ರ, ಗೋವಾ, ಕರ್ನಾಟಕ ಹಾಗೂ ಕೇರಳಗಳು ಪಾಲು ಬಂಡವಾಳ ಹೂಡಿದ ರಾಜ್ಯಗಳಾಗಿದ್ದು, ಕೇರಳ ಮತ್ತು ಗೋವಾ ಈಗಾಗಲೇ ತಮ್ಮ ಪಾಲಿನ ಷೇರುಗಳನ್ನು ಕೇಂದ್ರಕ್ಕೆ ಹಸ್ತಾಂತರಿಸಿವೆ. ಕರ್ನಾಟಕ ಇದರಲ್ಲಿ ಸ್ವಲ್ಪ ಹಿಂದಿದೆ. ಎರಡು ದಿನಗಳ ಹಿಂದಷ್ಟೇ ತಾವು ಈ ಸಂಬಂಧ ರಾಜ್ಯದ ಮುಖ್ಯಮಂತ್ರಿ ಡಿಕೆಶಿ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಮಾಡಿದ್ದು, ಸಂಪೂರ್ಣ ಸಹಕಾರದ ಭರವಸೆ ನೀಡಿದ್ದಾರೆ ಎಂದರು.

ಅದೇ ರೀತಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರ ಜೊತೆ ಸಹ ಈ ಬಗ್ಗೆ ಮಾತನಾಡಿದ್ದು, ಅವರಿಂದಲೂ ಒಪ್ಪಿಗೆ ಸಿಕ್ಕಿದೆ. ಹೀಗಾಗಿ ಶೀಘ್ರವೇ ರಾಜ್ಯದ ಪಾಲಿನ ಷೇರುಗಳನ್ನು ಕೇಂದ್ರಕ್ಕೆ ಹಸ್ತಾಂತರಿಸುವ ವಿಶ್ವಾಸವಿದೆ. ಇನ್ನು ಮಹಾರಾಷ್ಟ್ರ ಸರಕಾರದ ಒಪ್ಪಿಗೆ ಬೇಕಾಗಿದ್ದು, ಆ ರಾಜ್ಯದ ಸಹಮತ ಪಡೆಯಲು ನಾವು ಪ್ರಯತ್ನಿಸುತ್ತೇವೆ ಎಂದು ವಿವರಿಸಿದರು.

ವಂದೇಭಾರತ್ ರೈಲು: ಬೆಂಗಳೂರು ಹಾಗೂ ಕಾರವಾರ ಮಧ್ಯೆ ವಂದೇಭಾರತ್ ರೈಲು ಸಂಚಾರ ನಮ್ಮ ಪ್ರಮುಖ ಬೇಡಿಕೆಯಾಗಿದೆ. ಇದಕ್ಕೆ ಈಗಾಗಲೇ ಪ್ರಾಯೋಗಿಕ ಸರ್ವೆ ನಡೆಯುತ್ತಿದೆ. ಇದು ಬೆಂಗಳೂರಿನಿಂದ ಹೊರಟು ಮಂಗಳೂರು, ಉಡುಪಿ ಹಾಗೂ ಕರಾವಳಿಯ ಕೊನೆಯ ಭಾಗವಾದ ಕಾರವಾರದವರೆಗೆ ಸಂಚರಿಸುವಂತಾಗಬೇಕು ಎಂಬ ನಿಟ್ಟಿನಲ್ಲಿ ಪ್ರಾಯೋಗಿಕ ಸರ್ವೇ ಕಾರ್ಯ ನಡೆಯುತ್ತಿವೆ ಎಂದ ವಿವರಿಸಿದರು.

ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ನಿಲ್ದಾಣಗಳಲ್ಲಿ ಹೆಚ್ಚಿನ ಮೂಲಭೂತ ಸೌಕರ್ಯ ಗಳನ್ನು ಕಲ್ಪಿಸಲು ಮುಂದಾಗಿದೆ. ವೃದ್ಧರು, ವಿಶೇಷಚೇತನರು, ಗರ್ಭಿಣಿಯರು, ಅಶಕ್ತರು ಒಂದು ಫ್ಲಾಟ್ ಫಾರಂ ನಿಂದ ಮತ್ತೊಂದು ಫ್ಲಾಟ್ ಫಾರಂಗೆ ಸುಲಭವಾಗಿ ಸಂಚರಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಕೊಂಕಣ ರೈಲ್ವೆಯಿಂದ ಇದೀಗ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಲಿಫ್ಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.

ಶಿಕ್ಷಣ ಮತ್ತು ಆರೋಗ್ಯದಲ್ಲಿ ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದಿರುವ ಉಡುಪಿಗೆ ಹೊರರಾಜ್ಯ, ಜಿಲ್ಲೆಗಳಿಂದ ಶಿಕ್ಷಣ, ವೈದ್ಯಕೀಯ ಸೌಲಭ್ಯ, ಪ್ರವಾಸ ಸೇರಿದಂತೆ ವಿವಿಧ ಕಾರಣಗಳಿಗೆ ಜನರು ಆಗಮಿಸುತ್ತಿರುತ್ತಾರೆ. ವಿವಿದೆಡೆ ತೆರಳಲು ಇವರು ರೈಲು ಸೇವೆ ಬಳಸುತ್ತಿದ್ದಾರೆ. ಹೀಗಾಗಿ ನಿಲ್ದಾಣದ ಪ್ಲಾಟ್‌ಫಾರ್ಮ್‌ಗಳಿಗೆ ಹೋಗಲು ಇರುವ ಓವರ್‌ಬ್ರಿಜ್‌ಗಳಿಗೆ ಲಿಫ್ಟ್ ಅಳವಡಿಸುವ ಮೂಲಕ ಪ್ರಯಾಣಿಕರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸಲು ರೈಲ್ವೆ ಇಲಾಖೆ ಮುಂದಾಗಿದೆ ಎಂದರು.

ಬಾರಕೂರು ನಿಲ್ದಾಣದ ಅಭಿವೃದ್ಧಿ: ಮುಂದಿನ ದಿನಗಳಲ್ಲಿ ಬಾರ್ಕೂರು ರೈಲ್ವೆ ನಿಲ್ದಾಣದ ಸಮುಗ್ರ ಅಭಿವೃದ್ಧಿಗೆ ಯೋಜನೆಗಳನ್ನು ಹಾಕಿಕೊಳ್ಳಲಾ ಗಿದ್ದು, ಸುಮಾರು 14.5 ಕೋಟಿ ರೂ. ವೆಚ್ಚದ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರವೇ ಬಾರಕೂರಿನಲ್ಲಿ ಪ್ಲಾಟ್‌ಫಾರಂ ಹಾಗೂ ಶೆಲ್ಟರ್‌ಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

ಶಾಸಕ ಯಶ್‌ಪಾಲ್ ಎ ಸುವರ್ಣ ಹಾಗೂ ಉಡುಪಿ ನಗರಾಭಿವೃಧ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು, ಸಭೆಯನ್ನುದ್ದೇಶಿಸಿ ಮಾತನಾಡಿದರು.

ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಕಾರವಾರದ ಕೊಂಕಣ ರೈಲ್ವೆ ಪ್ರಾದೇಶಿಕ ರೈಲ್ವೆ ಮ್ಯಾನೇಜರ್ ಆಶಾ ಶೆಟ್ಟಿ, ಮುಂಬರುವ ದಿನಗಳಲ್ಲಿ ಇಂದ್ರಾಳಿ ರೈಲ್ವೆ ನಿಲ್ದಾಣದ ಸುತ್ತಮುತ್ತಲಿನ ಪರಿಸರವನ್ನು ಸುಂದರವಾಗಿಸುವ ನಿಟ್ಟಿನಲ್ಲಿ ಮೂಲಭೂತ ಸೌಕರ್ಯ, ಪಾರ್ಕಿಂಗ್, ಸಂಪರ್ಕ ವ್ಯವಸ್ಥೆ ಸೇರಿದಂತೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಉಡುಪಿ ರೈಲ್ವೆ ಯಾತ್ರಿಸಂಘದ ವತಿಯಿಂದ ಉಡುಪಿ ರೈಲ್ವೆ ನಿಲ್ದಾಣದ ಸಮಸ್ಯೆಗಳು ಹಾಗೂ ಅಭಿವೃದ್ಧಿಯ ಕುರಿತಂತೆ ಸಂಸದರಿಗೆ ಮನವಿ ಪತ್ರವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಡೆಪ್ಯುಟಿ ಚೀಫ್ ಇಂಜಿನಿಯರ್ ವಿಜಯ್ ಕುಮಾರ್, ಮಂಗಳೂರು ಕೊಂಕಣ ರೈಲ್ವೆ ಪಿಆರ್‌ಓ ಸುಧಾ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರೆ, ಕೊಂಕಣ ರೈಲ್ವೆಯ ಸೀನಿಯರ್ ಡಿವಿಜನಲ್ ಮ್ಯಾನೇಜರ್ ದಿಲೀಪ್ ಭಟ್ ವಂದಿಸಿದರು. 




Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News