ಗ್ರಾಪಂಗಳ ಮೂಲಕ ಪೆಟ್ರೋಲ್ ಬಂಕ್, ಭಾರತ್ ಕೆಫೆ ಶೀಘ್ರ ಪ್ರಾರಂಭ: ಸಂಸದ ಕೋಟ

Update: 2026-07-17 20:17 IST

ಉಡುಪಿ, ಜು.17: ತೆಲಂಗಾಣ ರಾಜ್ಯದ ನಂತರ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ 9 ಗ್ರಾಮ ಪಂಚಾಯತ್‌ ಗಳ ವ್ಯಾಪ್ತಿಯ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಭಾರತ್ ಪೆಟ್ರೋಲಿಯಂ ಬಂಕ್, ಇ. ಚಾರ್ಜಿಂಗ್ ಕೇಂದ್ರ ಹಾಗೂ ಭಾರತ್ ಕೆಫೆಗಳನ್ನು ಶೀಘ್ರದಲ್ಲಿ ತೆರೆಯಲಾಗುವುದು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಭಾರತ್ ಪೆಟ್ರೋಲಿಯಂ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ವಿವಿಧ ಗ್ರಾಮ ಪಂಚಾಯತ್ ಅಧಿಕಾರಿಗಳು ಮತ್ತು ತಹಶೀಲ್ದಾರರೊಂದಿಗೆ ನಡೆಸಿದ ಸಭೆಯಲ್ಲಿ ಅವರು ಈ ಮಾಹಿತಿಗಳನ್ನು ಒದಗಿಸಿದರು.

ಆಯ್ದ ಗ್ರಾಮಪಂಚಾಯತ್‌ಗಳ ಹೆದ್ದಾರಿಗೆ ಹೊಂದಿಕೊಂಡ ಪಂಚಾಯತ್ ನಿವೇಶನಗಳಲ್ಲಿ ಭಾರತ್ ಪೆಟ್ರೋಲಿಯಂ ಮೂಲಕ ಪೆಟ್ರೋಲ್ ಬಂಕ್ ಗಳು, ಇ-ಚಾರ್ಜಿಂಗ್ ಕೇಂದ್ರ, ಸಿಎನ್‌ಜಿ ಮತ್ತು ಭಾರತ್ ಕೆಫೆಗಳನ್ನು ಪ್ರಾರಂಭಿಸಲಾ ಗುತ್ತದೆ. ಕನಿಷ್ಠ ಇನ್ನಾರು ತಿಂಗಳಲ್ಲಿ ಅಂದರೆ ಮುಂದಿನ ವರ್ಷದ ಪ್ರಾರಂಭದ ವೇಳೆಗೆ ಈ ಯೋಜನೆಯನ್ನು ಕಾರ್ಯ ಗತಗೊಳಿ ಸುವುದು ಕೇಂದ್ರ ಸರಕಾರದ ಗುರಿಯಾಗಿದೆ ಎಂದವರು ವಿವರಿಸಿದರು.

ಪ್ರಥಮ ಹಂತದಲ್ಲಿ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುದ್ರಾಡಿ, ಬೆಳ್ವೆ, ಅಲ್ಬಾಡಿ, ಕಾರ್ಕಳ ತಾಲೂಕಿನ ಮುಡಾರು, ಬೆಳ್ಮಣ್ಣು, ಸಾಣೂರು, ಕುಕ್ಕಂದೂರು, ಬೈಲೂರು ಉಡುಪಿ ತಾಲೂಕಿನ ತೆಂಕನಿಡಿಯೂರು ಗ್ರಾಮ ಪಂಚಾಯತ್‌ಗಳಲ್ಲಿ ನಿವೇಶನಗಳನ್ನು ಗುರುತಿಸಿದ್ದು, ಸಂಸ್ಥೆಯ ಮಾನದಂಡ ದಡಿ ಆಯ್ಕೆ ಮಾಡಿ ಶಿಫಾರಸು ಮಾಡಲಾಗಿದೆ. ಜಿಲ್ಲೆಯ ಇತರ ತಾಲೂಕು ಗಳಲ್ಲಿಯೂ ಸಮೀಕ್ಷೆ ನಡೆಯುತ್ತಿದ್ದು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪಂಚಾಯತ್ ಪೆಟ್ರೋಲ್ ಬಂಕ್ ತೆರೆಯಲು ಕ್ರಮ ಕೈಗೊಳ್ಳುವುದಾಗಿ ನುಡಿದರು.

ಪಂಚಾಯತ್‌ಗಳ ಮೂಲಕ ಪೆಟ್ರೋಲ್ ಪಂಪ್‌ಗೆ ನೀಡುವ ನಿವೇಶನ ಗಳಿಗೆ ಭಾರತ್ ಪೆಟ್ರೋಲಿಯಂ ಸಂಸ್ಥೆ, ಬಾಡಿಗೆ ಮತ್ತು ವ್ಯವಹಾರದಲ್ಲಿ ಕಮಿಷನ್ ಗ್ರಾಮ ಪಂಚಾಯತ್‌ಗಳಿಗೆ ನೀಡಲಿದ್ದು ಇದರಿಂದ ಗ್ರಾಪಂಗಳ ಆರ್ಥಿಕ ಮತ್ತು ಆಡಳಿತಾತ್ಮಕ ಶಕ್ತಿ ಹೆಚ್ಚಲಿದೆ ಎಂದು ಕೋಟ ಅಭಿಪ್ರಾಯ ಪಟ್ಟರು.

ಗ್ರಾಮಪಂಚಾಯತಿಗಳು ನಡೆಸುವ ಪೆಟ್ರೋಲ್ ಪಂಪ್‌ಗಳಲ್ಲಿ ಇ. ಚಾಜಿರ್ಂಗ್ ಜೊತೆಗೆ ಸಿಎನ್‌ಜಿ ವಿತರಣೆಗೂ ಅವಕಾಶವಿರುತ್ತದೆ. ಡೀಸೆಲ್ ಸಹಿತ ಇತರ ಪೆಟ್ರೋಲಿಯಂ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲ ವಾಗಲಿದೆ ಎಂದರು.

ಸಭೆಯಲ್ಲಿ ಭಾರತ್ ಪೆಟ್ರೋಲಿಯಂನ ಪ್ರಾದೇಶಿಕ ಮ್ಯಾನೇಜರ್ ವಿಪಿನ್ ದಾಸ್ ವಂಶ್ವಾಲ್, ಉಡುಪಿ ಜಿಪಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಉಡುಪಿ ಜಿಪಂನ ಸಹಾಯಕ ಕಾರ್ಯದರ್ಶಿ ಜೇಮ್ಸ್ ಡಿಸಿಲ್ವಾ, ಕಾರ್ಕಳ ತಾಪಂನ ಇಒ ಪ್ರಶಾಂತ್ ಎಂ.ಎನ್., ಉಡುಪಿ ತಾಪಂನ ಇಒ ವಿಜಯ, ಹೆಬ್ರಿ ತಾಲೂಕು ಡೆಪ್ಯೂಟಿ ತಹಶೀಲ್ದಾರರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ದಯಾನಂದ ಬೆನ್ನೂರು, ಪ್ರದೀಪ್, ನಾಗರಾಜ್ ಎಂ.ಕೆ, ರಮೇಶ್, ವಿಶ್ವನಾಥ್, ಮಮತಾ ವೈ, ಸುಭಾಶ್, ಸತೀಶ್ ಉಪಸ್ಥಿತರಿದ್ದರು.

ಸಭೆಯಲ್ಲಿ ಆಯ್ದ ಗ್ರಾಪಂಗಳ ನಿವೇಶನ ಪಟ್ಟಿಯನ್ನು ಸಂಸದ ಕೋಟ ಭಾರತ್ ಪೆಟ್ರೋಲಿಯಂ ಅಧಿಕಾರಿಗಳಿಗೆ ಹಸ್ತಾಂತರಿಸಿ ಬೇಗನೆ ಅನುಷ್ಠಾನ ಮಾಡುವಂತೆ ಸಲಹೆ ನೀಡಿದರು. ಗ್ರಾಪಂ ಮೂಲಕ ಪೆಟ್ರೋಲ್ ಪಂಪ್ ಗಳನ್ನು ಪ್ರಾರಂಭಿಸುವ ಯೋಜನೆ ತನಗೆ ಖಷಿ ತಂದಿದೆ ಎಂದು ಸಂಸದ ಕೋಟ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News