×
Ad

ಹರಿಪ್ರಸಾದ್, ನಾವು ಒಂದೇ; ಇಬ್ಬರು ಒಟ್ಟಾಗಿ ಕೆಲಸ ಮಾಡುತ್ತೇವೆ: ಕಾರ್ಕಳದಲ್ಲಿ ಸಚಿವ ಸತೀಶ್ ಜಾರಕಿಹೊಳಿ

Update: 2026-07-16 22:25 IST

ಆಗುಂಬೆಯ ಸನ್‌ಸೆಟ್ ವ್ಯೆ ಪಾಯಿಂಟ್‌ನಲ್ಲಿ ಸಚಿವ ಸತೀಶ್ ಜಾರಕಿಹೊಳಿ ವೀಕ್ಷಣೆ

ಉಡುಪಿ, ಜು.16: ಕೆಪಿಸಿಸಿಗೆ ನಮ್ಮವರೇ ಅಧ್ಯಕ್ಷರಾಗಿದ್ದಾರೆ. ಹರಿಪ್ರಸಾದ್ ನಮಗೆ ಬೇಕಾದವರೇ... ಕರಾವಳಿ ಜಿಲ್ಲೆಯವರು. ಹರಿಪ್ರಸಾದ್ ಅವರ ಜೊತೆ ನಾವು ಇದ್ದೇವೆ. ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷರಾದರೂ ಒಂದೇ.. ನಾವು ಆದರೂ ಒಂದೇ.. ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ..

ಹೀಗೆಂದು ಕಾರ್ಕಳದಲ್ಲಿ ಸುದ್ದಿಗಾರರೊಂದಿಗೆ ಬುದವಾರ ಮಾತನಾಡುತ್ತಾ ನುಡಿದವರು ರಾಜ್ಯ ಲೋಕೋಪ ಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಅದು ಕೈತಪ್ಪಿದ ಬಗ್ಗೆ ಸುದ್ದಿಗಾರರು ಕೇಳಿದ ಕೆಣಕು ಪ್ರಶ್ನೆಗೆ ಸತೀಶ್ ಹೀಗೆ ತಣ್ಣನೆಯ ಸ್ವರದಲ್ಲಿ ನುಡಿದರು.

ಮಂಗಳವಾರ ಹಾಗೂ ಬುಧವಾರ ಕರಾವಳಿ ಮತ್ತು ಮಲೆನಾಡು ಭಾಗದ ಪಶ್ಚಿಮ ಘಟ್ಟದ ಘಾಟಿ ಪ್ರದೇಶಗಳ ವೀಕ್ಷಣೆಗೆ ಆಗಮಿಸಿದ್ದ ಸತೀಶ್, ಹುಲಿಕಲ್ ಘಾಟಿ, ಆಗುಂಬೆ ಘಾಟಿ ಪ್ರದೇಶಗಳ ವೀಕ್ಷಣೆ ನಡೆಸಿ ಹೆಬ್ರಿ ಬಳಿಕ ಕಾರ್ಕಳದ ಐಬಿಗೆ ಆಗಮಿಸಿ ಅಲ್ಲಿ ಕಾಯುತಿದ್ದ ಸುದ್ದಿಗಾರರೊಂದಿಗೆ ಮಾತನಾಡಿದರು.

ಸಚಿವ ಸಂಪುಟ ವಿಸ್ತರಣೆ ಶೀಘ್ರ ನಡೆಯಬಹುದು. ಸಿಎಂ ತಂಡ ಹೊಸದಿಲ್ಲಿಗೆ ತೆರಳಿದೆ ಎಂದು ಸತೀಶ್, ಇತ್ತೀಚೆಗೆ ಸಿಎಂ ಜೊತೆ ಹೆಚ್ಚು ಕಾಣಿಸಿಕೊಳ್ಳದಿರುವ ವದಂತಿ ಬಗ್ಗೆ ಕೇಳಿದಾಗ ಉತ್ತರಿಸಿದರು. ನಾನು ಕಾರ್ಕಳದಲ್ಲಿದ್ದೇನೆ. ಇಲ್ಲಿಗೆ ಸಿಎಂ ಬರೋಕಾಗುತ್ತಾ ಎಂದು ಮರು ಪ್ರಶ್ನಿಸಿ, ನನ್ನ ಚಟುವಟಿಕೆಗಳು ಹೆಚ್ಚಾಗಿ ಬೆಂಗಳೂರು ಕೇಂದ್ರೀಕೃತವಾಗಿರೊಲ್ಲ. ಹಳ್ಳಿ, ಗುಡ್ಡಗಾಡು ಎಂದು ನಾನು ಓಡಾಡ್ತಾ ಇರುತ್ತೇನೆ. ಜಿಲ್ಲಾವಾರು ಪ್ರವಾಸ ಮಾಡುತ್ತೇನೆ ಎಂದರು.

ಸಚಿವ ಸಂಪುಟ ವಿಸ್ತರಣೆ ವಿಚಾರ ಕುರಿತು ಚರ್ಚಿಸಲು ಹೊಸದಿಲ್ಲಿಯಲ್ಲಿ ಮೀಟಿಂಗ್ ಕರೆದಿದ್ದಾರೆ. ಇನ್ನೆರಡು-ಮೂರು ದಿನಗಳಲ್ಲಿ ಆಗಬಹುದು. ಬೇಗ ಆಗಬೇಕು ಎಂಬ ನಿರೀಕ್ಷೆ ಇದೆ, ಯಾಕೆಂದರೆ ಇಪ್ಪತ್ತು ಸ್ಥಾನ ಖಾಲಿ ಇದೆ ಎಂದರು.

ಉಡುಪಿಗೆ ಯಾರು ಎಂದು ಪ್ರಶ್ನಿಸಿದಾಗ, ಉಡುಪಿಯಲ್ಲಿ ಯಾರು ಎಂಎಲ್‌ಎ ಇಲ್ಲ. ಹೀಗಾಗಿ ಸಚಿವ ಸ್ಥಾನ ಸಿಗೋದು ಕಷ್ಟ. ಮಂಗಳೂರಿನಲ್ಲಿ ಈಗಾಗಲೇ ಖಾದರ್ ಸಚಿವರಾಗಿದ್ದಾರೆ. ಆದ್ದರಿಂದ ಸದ್ಯಕ್ಕೆ ಯಾರಿಗೂ ಅವಕಾಶ ಇರಲಿಕ್ಕಿಲ್ಲ ಎಂದರು.

ಬೆಂಗಳೂರಿನಲ್ಲಿ ಸಭೆ: ಆಗುಂಬೆಯಲ್ಲಿ ಸುರಂಗ ನಿರ್ಮಾಣದ ಕುರಿತು ಪ್ರಶ್ನಿಸಿದಾಗ, ಅದಕ್ಕೆ ತಜ್ಞರು ತಾಂತ್ರಿಕ ಮಾಹಿತಿ ನೀಡಬೇಕು. ಈ ಬಗ್ಗೆ ಬೆಂಗಳೂರಿನಲ್ಲಿ ಸಭೆ ಮಾಡುತ್ತೇವೆ. ಟನಲ್ ನಿರ್ಮಾಣ ಮಾಡಿದರೆ ತುಂಬಾ ದುಬಾರಿ ಆಗುತ್ತೆ. ಅದು ಕಾರ್ಯಸಾಧ್ಯವೊ, ಅಲ್ಲವೋ ಗೊತ್ತಿಲ್ಲ ಎಂದರು.

ಆಗುಂಬೆ ಘಾಟಿಯಲ್ಲಿ ಮೂರು- ನಾಲ್ಕು ಕಡೆಗಳಲ್ಲಿ ಮಾತ್ರ ಶಾರ್ಪ್ ಕರ್ವ್ ಇದೆ. ಮಿಕ್ಕ ಕಡೆಗಳಲ್ಲಿ ರಸ್ತೆ ಅಗಲವಾ ಗಿದೆ. ಮೂರು ನಾಲ್ಕು ಕಡೆಗಳಲ್ಲಿ ಹೆಚ್ಚಿನ ಫೋಕಸ್ ಮಾಡಬೇಕು. ಯಾವ ರೀತಿ ರಸ್ತೆ ಮಾಡಬೇಕೆಂದು ಬೆಂಗಳೂರಿನಲ್ಲಿ ಸಭೆ ಮಾಡುತ್ತೇವೆ. ಕಳೆದ 70 ವರ್ಷಗಳಲ್ಲಿ ಅನೇಕ ಡಿಪಿಆರ್ ಮಾಡಿದ್ದಾರೆ. ಆದರೆ ಅದು ಜಾರಿಯಾಗಬೇಕಲ್ಲ! ಎಂದು ನಕ್ಕರು.

‘ನಾವು ಐದಾರು ಸಾವಿರ ಕೋಟಿ ಅಂದಾಜು ಮಾಡಿದರೆ ಅವರು 15,000 ಕೋಟಿ ಹೇಳುತ್ತಾರೆ. ಅವಾಗ ಸರ್ಕಾರ ಒಪ್ರೋದಿಲ್ಲ. ಯಾವುದು ಕಡಿಮೆ ಖರ್ಚು ಹಾಗೂ ಬೇಗ ಆಗುತ್ತೆ ಅದನ್ನು ಮಾಡುವ ಪ್ರಯತ್ನ ಮಾಡುತ್ತೇವೆ. ಮುಂದಿನ ವಾರ ಬೆಂಗಳೂರಿನಲ್ಲಿ ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ ಸಭೆ ಮಾಡಿ ಚರ್ಚಿಸುತ್ತೇವೆ ಎಂದರು.

ಸುನಿಲ್‌ಗೆ ಟೀಕೆ: ಶಾಸಕ ಸುನಿಲ್ ಕುಮಾರ್ ಕಾರ್ಕಳ ಕ್ಷೇತ್ರಕ್ಕೆ ಅನುದಾನ ಇಲ್ಲ ಎಂದು ರಾಜಕೀಯ ಹೇಳಿಕೆ ನೀಡುತ್ತಾರೆ. ಆದರೆ ಪ್ರತಿ ವಾರ ಗುದ್ಧಲಿ ಪೂಜೆ ಮಾಡ್ತಾರೆ. ಅವೆಲ್ಲವೂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಕೊಟ್ಟ ದುಡ್ಡು. ಕಾಂಗ್ರೆಸ್ ಶಾಸಕರಿಗೆ ಹೆಚ್ಚು ಕೊಟ್ಟಿರಬಹುದು, ಇವರಿಗೆ ಸ್ವಲ್ಪ ಕಡಿಮೆ ಸಿಕ್ಕಿರಬಹುದು. ನಾವು ಶಾಸಕರಾಗಿದ್ದಾಗ ಇವರು ಏನು ಕೊಟ್ಟಿಲ್ಲ ಎಂದರು.

ಮುಂದಿನ ವರ್ಷ ಕಾರ್ಕಳದಲ್ಲಿ ಬಾಹುಬಲಿಗೆ ಮಹಾಮಸ್ತಕಾಭಿಷೇಕ ನಡೆಯುತ್ತೆ. ಅದು ಸರ್ಕಾರದ ಕಾರ್ಯಕ್ರಮ, ಅನುದಾನ ಕೊಟ್ಟೆ ಕೊಡ್ತೇವೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News