ಉಡುಪಿ, ನ.28: ಬ್ರಹ್ಮಾವರ ತಾಲೂಕು ಚಾಂತಾರು ಗ್ರಾಮದ, ಧಾರ್ಮಿಕ ದತ್ತಿ ಇಲಾಖೆ ಅಧೀನದ ಮಹ ತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ ಅಂಗವಾಗಿ ಡಿ. 17,18ರಂದು ಕಲಾ ಸಂಕೋಚ ಕಾರ್ಯಕ್ರಮ ಆರಂಭವಾಗಲಿದೆ.

ದೇವಳದ ಸಂಪೂರ್ಣ ನವೀಕರಣಕ್ಕೆ 18 ಕೋಟಿ ರೂ. ವೆಚ್ಚವಾಗಲಿದ್ದು, ಶಿಲಾ ಕೆಲಸ ಆರಂಭವಾಗಿದೆ. 2028ರ ಫೆಬ್ರವರಿಯಲ್ಲಿ ಬ್ರಹ್ಮಕಲಶದ ಗುರಿ ಹೊಂದಲಾಗಿದೆ ಎಂದು ದೇವಳ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ. ಗೋವಿಂದರಾಜ್ ಹೆಗ್ಡೆ ತಿಳಿಸಿದ್ದಾರೆ.

ಕಲಾ ಸಂಕೋಚ ವಿವರ: ಡಿ.17ರಂದು ಬೆಳಗ್ಗೆ 9ಗಂಟೆಗೆ ದೇವತಾ ಪ್ರಾರ್ಥನೆ, ದ್ವಾದಶ ನಾಳಿಕೇರ ಗಣಯಾಗ, ದುರ್ಗಾ ಹೋಮ, ಶತರುದ್ರಾಭಿಷೇಕ, ಸಂಜೆ 5ಗಂಟೆಗೆ ರಾಕ್ಷೋಘ್ನ ಹೋಮ, ವಾಸುತಿ ಪೂಜಾ ಬಲಿ ಜರುಗಲಿದೆ. ಡಿ. 18ರಂದು ಬೆಳಗ್ಗೆ 9ಗಂಟೆಗೆ ಮಹಾಲಿಂಗೇಶ್ವರ ದೇವರಿಗೆ ಕಲಶ ಸ್ಥಾಪನೆ, ಅಧಿವಾಸ ಹೋಮ, ಅಮ್ಮನವರಿಗೆ ನವಕ ಪ್ರಧಾನ ಕಲಶ, ಮಹಾಪೂಜೆ, ಸಂಜೆ 6ಗಂಟೆಗೆ ಕಲಾ ಸಂಕೋಚ, ಜೀವ ಕುಂಭ ಸ್ಥಾಪನೆ, ಬಿಂಬ ಚಲನೆ ನಡೆಯಲಿದೆ.

ಧಾರ್ಮಿಕ ದತ್ತಿ ಇಲಾಖೆಯ ಸಿ ಗ್ರೇಡ್ ದೇವಳವು ಎಂಟು ಗ್ರಾಮ ವ್ಯಾಪ್ತಿ ಹೊಂದಿದ್ದು ಜೀರ್ಣೋದ್ಧಾರ ನಿಟ್ಟಿನಲ್ಲಿ ಮಾಧವನ್ ಪೊದುವಾಳ್ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆ, ಪ್ರಾಯಶ್ಚಿತ್ತ, ಪರಿಹಾರ ಕಾರ್ಯಗಳು ನಡೆದಿವೆ.

ಶಿಲಾಮಯ ಗರ್ಭಗುಡಿ, ತಾಮ್ರ ಹೊದಿಕೆ, ತೀರ್ಥ ಮಂಟಪ, ಸುತ್ತು ಪೌಳಿ, ಧ್ವಜಸ್ಥಂಭ ನಿರ್ಮಾಣವಾಗಲಿದೆ. ತಂತ್ರಿ ಕೃಷ್ಣ ಸೋಮಯಾಜಿ ನೇತೃತ್ವದಲ್ಲಿ ವಾಸ್ತು ತಜ್ಞ ಮುನಿಯಂಗಳ ಮಹೇಶ್ ಭಟ್ ಮಾರ್ಗದರ್ಶನ ಮಾಡಿದ್ದಾರೆ. ದೇವಳದ ವಾರ್ಷಿಕ ಸಪ್ತೋತ್ಸವ ಅಂಗವಾಗಿ ಆರು ರಾತ್ರಿ ಸಣ್ಣ ರಥೋತ್ಸವ ಹಾಗೂ ಏಳನೇ ದಿನ ಹಗಲು ಬ್ರಹ್ಮ ರಥೋತ್ಸವ ನಡೆಯುತ್ತದೆ.

‘ಮಹಾಲಿಂಗೇಶ್ವರ ದೇವಳ ಜೀರ್ಣೋದ್ಧಾರ ನಿರ್ವಿಘ್ನವಾಗಿ ನಡೆಯ ಲೆಂದು ಎಂಟು ಗ್ರಾಮ ವ್ಯಾಪ್ತಿಯ ದೇವಳ,ಗರಡಿ, ಬಬ್ಬುಸ್ವಾಮಿ ದೈವಸ್ಥಾನ, ಸಾರ್ವಜನಿಕ ದೈವಸ್ಥಾನ, ನಾಗಬನಗಳಲ್ಲಿ ಡಿ.15ರೊಳಗೆ ಸಾಮೂಹಿಕ ಪ್ರಾರ್ಥನೆ ಕಾರ್ಯಕ್ರಮ ಆಯೋಜಿಸಲಾಗಿದೆ.

-ಬಿ.ಗೋವಿಂದರಾಜ್ ಹೆಗ್ಡೆ, ಅಧ್ಯಕ್ಷರು, ಜೀರ್ಣೋದ್ಧಾರ ಸಮಿತಿ ಶ್ರೀಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಾವರ.

ವೀರ ಪಾಂಡ್ಯದೇವ ಅಳುಪೇಂದ್ರನ ಕ್ರಿ.ಶ. 1,254 ಹಾಗೂ 1,280ರ ಶಾಸನ ದೇವಳದಲ್ಲಿದೆ. ಬಿರ್ತಿ ಶೇಡಿಗೆರೆ ಶಾಸನದಲ್ಲಿ ಮಹಾಲಿಂಗೇಶ್ವರನಿಗೆ ಹಿರಿಯ ದೇವರೆನ್ನುವ ಉಲ್ಲೇಖವಿದೆ.

-ಡಾ.ಬಿ.ಜಗದೀಶ್ ಶೆಟ್ಟಿ, ಇತಿಹಾಸ ತಜ್ಞ ಬ್ರಹ್ಮಾವರ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor