‘ಇತಿಹಾಸದ ಕ್ಷೇತ್ರ ಕಾರ್ಯ, ಉತ್ಖನನ ಯಾವತ್ತೂ ರೋಮಾಂಚಕಾರಿ’
ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಸ್ವೀಕರಿಸಿ ಡಾ.ಎಂ.ಎಸ್.ಕೃಷ್ಣಮೂರ್ತಿ
ಉಡುಪಿ, ನ.28: ಇತಿಹಾಸ ತಾಣಗಳ ಕ್ಷೇತ್ರ ಕಾರ್ಯ ಪುರಾತತ್ವ ಉತ್ಖನನ ಯಾವಾಗಲೂ ರೋಮಾಂಚಕಾರಿ ಅನುಭವ. ಅದು ಹೊಸ ಶಕ್ತಿ ಹಾಗೂ ಅನುಭವವನ್ನು ನೀಡುತ್ತದೆ ಎಂದು ಹಿರಿಯ ಪುರಾತತ್ವಜ್ಞ ಹಾಗೂ ಶಾಸನ ಶಾಸ್ತ್ರ ತಜ್ಞರೂ ಆಗಿರುವ ತಲಕಾಡು, ರಾಜಘಟ್ಟ, ಅಣ್ಣಿಗೇರಿ ಉತ್ಖನನಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಮೈಸೂರಿನ ಡಾ.ಎಂ. ಎಸ್.ಕೃಷ್ಣಮೂರ್ತಿ ಹೇಳಿದ್ದಾರೆ.
ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ ಮಣಿಪಾಲ ಇವರ ಸಹಯೋಗದಲ್ಲಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಇಂದು ನಡೆದ ಸಮಾರಂಭದಲ್ಲಿ ‘ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ-2025’ ನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು. ಪ್ರಶಸ್ತಿಯು ಒಂದು ಲಕ್ಷ ರೂ. ನಗದು, ಪ್ರಶಸ್ತಿ ಫಲಕಗಳನ್ನು ಒಳಗೊಂಡಿತ್ತು.
ಕ್ಷೇತ್ರಕಾರ್ಯ ಯಾವತ್ತೂ ನನಗೆ ಇಷ್ಟದ ಕೆಲಸ. ಇದರಿಂದ ಹೊಸದನ್ನು ಕಂಡಾಗ ರೋಮಾಂಚನವಾಗುತ್ತದೆ. ಚರಿತ್ರೆ, ಇತಿಹಾಸದ ಪುಟಗಳಲ್ಲಿ ಕೆಲವು ಸಾಲುಗಳನ್ನು ನಾನೂ ಸೇರಿಸಿದ್ದೇನೆ ಎಂಬ ಹೆಮ್ಮೆ ನನಗಿದೆ. ಇತಿಹಾಸದ ಕುರಿತು ವಿದ್ಯಾರ್ಥಿಗಳಲ್ಲಿ ಆಸಕ್ತಿ ಹುಟ್ಟಿಸಲು ಅವರಿಗೆ ಕ್ಷೇತ್ರ ಕಾರ್ಯಕ್ಕಿಳಿ ಯಲು ಪ್ರೋತ್ಸಾಹಿಸುತ್ತೇನೆ ಎಂದರು.
ಭಾರತೀಯ ದೇವಾಲಯ ವಾಸ್ತುಶಿಲ್ಪ ಮತ್ತು ಶಿಲ್ಪಕಲೆ ಹಾಗೂ ಬೌದ್ಧರ ವಾಸ್ತುಶಿಲ್ಪದ ಕುರಿತು ನನಗೆ ಆಸಕ್ತಿ ಮೂಡಿಸಿದವರು ನನ್ನ ಇತಿಹಾಸದ ಪ್ರಾಧ್ಯಾಪಕರಾದ ಡಾ.ನಾಗರಾಜ್. ಇದರಿಂದ ತಲಕಾಡಿನ ಮರಳುದಿಬ್ಬಗಳ ಉತ್ಖನನದಿಂದ 5-10 ಅಡಿ ಕೆಳಗೆ ಗಂಗರ ಕಾಲದ ಅದ್ಭುತ ಪಟ್ಟಣ, ಪ್ರಾಚೀನ ವೈದಿಕ ದೇವಸ್ಥಾನ, ಆ ಕಾಲದಲ್ಲಿ ಅಕ್ಕಸಾಲಿಗನೊಬ್ಬ ಚಿನ್ನದಲ್ಲಿ ತಯಾರಿಸುತಿದ್ದ ಖೋಟಾ ನಾಣ್ಯ ತಯಾರಿಕಾ ಕಾರ್ಯಾಲಯದ ಕುರುಹು ಸಿಕ್ಕಿತ್ತು ಎಂದರು.
ತಲಕಾಡು ಎಂಬುದು ಮಹಿಷಮಂಡಲ ಪ್ರಾಂತ್ಯದ ಪ್ರಬುದ್ಧ ನಗರ ಆಗಿತ್ತು ಎಂಬುದಕ್ಕೆ ಪುರಾವೆಗಳು ಉತ್ಖನನದಲ್ಲಿ ದೊರಕಿತ್ತು. ಅದೇ ರೀತಿ ಅಶೋಕ ಚಕ್ರವರ್ತಿ ಬೌದ್ಧ ಧರ್ಮದ ಪ್ರಚಾರಕ್ಕಾಗಿ ಇಲ್ಲಿಗೆ ಪ್ರತಿನಿಧಿಗಳನ್ನು ಕಳುಹಿಸಿರುವುದು, ಜೈನ ದೇವಾಲಯದ ಕುರುಹು, ಗಂಗರಸರ ಕಾಲದ ಹಲವು ಅಪರೂಪದ ವಸ್ತುಗಳು, ಗಾಳಿ ತಡೆಗೋಡೆ ಸಹ ಅಲ್ಲಿ ಕಂಡುಬಂದಿತ್ತು ಎಂದರು.
ನಾನು ಯಾವುದೇ ಪ್ರಶಸ್ತಿಗಾಗಿ ಸಂಶೋಧನೆ, ಉತ್ಖನನ ಕೈಗೊಂಡಿರಲಿಲ್ಲ. ಕ್ಷೇತ್ರಕಾರ್ಯ ನಾನು ಕಲಿತ ವಿದ್ಯೆ ಹಾಗೂ ರೂಢಿಸಿಕೊಂಡ ಸಂಕಲ್ಪವಾಗಿತ್ತು. ಇಂದಿನ ವಿದ್ಯಾರ್ಥಿಗಳೂ ವಿಜ್ಞಾನ, ಇಂಜಿನಿಯರಿಂಗ್, ಮೆಡಿಕಲ್ ಹಿಂದೆ ಬೀಳದೇ ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಿ. ಇದರಿಂದ ಬದುಕಿನಲ್ಲಿ ಯಶಸ್ಸು ಖಂಡಿತ ಸಿಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಂಗಳೂರಿನ ಸೈಂಟೋ ಅಲೋಸಿಯಸ್ ಡೀಮ್ಡ್ ವಿವಿಯ ರಿಸರ್ಚ್ ಪ್ರೊಪೆಸರ್ ಡಾ.ಡೆನಿಸ್ ಫೆರ್ನಾಂಡೀಸ್ ಅವರು ‘ಎಂ. ಗೋವಿಂದ ಪೈಗಳ ಏತಿಹಾಸಿಕ ಬರಹಗಳಲ್ಲಿ ಪ್ರಾದೇಶಿಕ ಹಿರಿಮೆ ಹಾಗೂ ರಾಷ್ಟ್ರೀಯವಾದಿ ಚಿಂತನೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ನ ಕಾರ್ಯದರ್ಶಿ ಡಾ.ನಾರಾಯಣ ಸಭಾಹಿತ್ ಅವರು ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಇತಿಹಾಸಜ್ಞ, ನಿವೃತ್ತ ಪ್ರಾಧ್ಯಾಪಕ ಡಾ.ಪುಂಡಿಕಾ ಗಣಪಯ್ಯ ಭಟ್ ತನ್ನ ಗುರುಗಳ ಅಭಿನಂದನಾ ಭಾಷಣ ಮಾಡಿದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರೆ, ಆರ್ಆರ್ಸಿಯ ಸಹ ಸಂಶೋಧಕ ಡಾ.ಅರುಣ್ಕುಮಾರ್ ಎಸ್.ಆರ್. ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.