ಭೂಗತ ಪಾತಕಿ ಕಲಿ ಯೋಗೀಶ್ ಸಹಚರ ರಾಜೇಶ್ ಕೇಶವ ಆಚಾರ್ಯ ಯುಎಇಯಿಂದ ಭಾರತಕ್ಕೆ ಗಡಿಪಾರು
ಮುಂಬೈನಲ್ಲಿ ವಶಕ್ಕೆ ಪಡೆಯಲಿರುವ ಉಡುಪಿ ಪೊಲೀಸ್
ಉಡುಪಿ: ಭೂಗತ ಪಾತಕಿ ಕಲಿ ಯೋಗೀಶ್ ಸಹಚರ ರಾಜೇಶ್ ಕೇಶವ ಆಚಾರ್ಯನನ್ನು ಸಿಬಿಐ, ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಗೃಹ ವ್ಯವಹಾರಗಳ ಸಚಿವಾಲಯ ಹಾಗೂ ಕರ್ನಾಟಕ ಪೊಲೀಸರ ಸಮನ್ವಯತೆಯೊಂದಿಗೆ ಯುಎಇಯಿಂದ ಭಾರತಕ್ಕೆ ಗಡಿಪಾರು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
2002ರಲ್ಲಿ ನಡೆದಿದ್ದ ಮನೋಹರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಕೊಲೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದ ರಾಜೇಶ್ ಕೇಶವ ಆಚಾರ್ಯ ತಲೆಮರೆಸಿಕೊಂಡಿದ್ದು 2026ರ ಮೇ ತಿಂಗಳಲ್ಲಿ ಈತನ ವಿರುದ್ಧ ಇಂಟರ್‌ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿತ್ತು. ಅಲ್ಲದೆ, ಮೂರು ತಿಂಗಳ ಹಿಂದೆಯೇ ಪಾಸ್‌ಪೋರ್ಟ್ ರದ್ದುಗೊಳಿಸಲಾಗಿತ್ತು ಎಂದು ಎಸ್ಪಿ ಹೇಳಿದ್ದಾರೆ.
ಆರೋಪಿಯನ್ನು ಯುಎಇಯಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಕರೆತಂದಿದ್ದು, ರವಿವಾರ ಉಡುಪಿಗೆ ಕರೆತರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆಯಲು ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಪೊಲೀಸರು ಮತ್ತು ಉಡುಪಿ ಪೊಲೀಸರ ಜಂಟಿ ತಂಡವು ತೆರಳುತ್ತಿದೆ ಎಂದು ಅವರು ಹೇಳಿದ್ದಾರೆ.
ರಾಜೇಶ್ ಕೇಶವ ಆಚಾರ್ಯ 2019ರಲ್ಲಿ ಭಾರತದಿಂದ ಪರಾರಿಯಾಗಿದ್ದು ಯುಎಇ ಅಬುಧಾಬಿಯಲ್ಲಿ ವಾಸವಿದ್ದ ಎನ್ನಲಾಗಿದೆ. ಮನೋಹರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೇಶ್ ಕೇಶವ ಆಚಾರ್ಯ ಸೇರಿದಂತೆ ಎಲ್ಲಾ ಆರೋಪಿಗಳ ವಿರುದ್ಧ ಈಗಾಗಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ರಾಜೇಶ್ ವಿರುದ್ಧ ಹಳೆ ಐಪಿಸಿ ಕಾಯ್ದೆಯಡಿ ಕೊಲೆ ಪ್ರಕರಣ (ಕಲಂ302), ಅಪರಾಧಿಕ ಒಳಸಂಚು (ಕಲಂ 120ಬಿ), ಆರ್/ಡಬ್ಲ್ಯೂ 34ಅಡಿ ಪ್ರಕರಣಗಳು ದಾಖಲಾಗಿತ್ತು.