ರಾಷ್ಟ್ರೀಯ ಹೆದ್ದಾರಿ-66 ಸಮಸ್ಯೆ | ಹುಸಿಯಾದ ಜಿಲ್ಲಾಡಳಿತದ ಭರವಸೆ; ಡಿ.23ಕ್ಕೆ ಬ್ರಹ್ಮಾವರ ಹೆದ್ದಾರಿ ಉಳಿಸಿ ಸಮಿತಿಯಿಂದ ಬಂದ್ಗೆ ಕರೆ
ಡಿ.24ರಿಂದ ತಾಲೂಕು ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ಎಚ್ಚರಿಕೆ
ಬ್ರಹ್ಮಾವರ, ನ.28: ರಾಷ್ಟ್ರೀಯ ಹೆದ್ದಾರಿ ಸಮಸ್ಯೆಯ ಕುರಿತು, ಫ್ಲೈಓವರ್ ನಿರ್ಮಾಣದ ಬಗ್ಗೆ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಧ್ವನಿಯೆತ್ತಿದ್ದ ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ-66 ಉಳಿಸಿ ಸಮಿತಿಗೆ ಕಳೆದ ಆಗಸ್ಟ್ ತಿಂಗಳಲ್ಲಿ ನೀಡಿದ ಯಾವುದೇ ಬೇಡಿಕೆ ಈಡೇರಿಲ್ಲ. ನಮ್ಮ ಎರಡು ಪ್ರಮುಖ ಬೇಡಿಕೆಗಳ ಕುರಿತಂತೆ ಡಿ.19ರೊಳಗೆ ಲಿಖಿತ ಭರವಸೆ ನೀಡದಿದ್ದಲ್ಲಿ ಡಿ.23ರಂದು ಬ್ರಹ್ಮಾವರ ಬಂದ್ಗೆ ಕರೆ ಕೊಡಲಾಗುತ್ತದೆ. ಹಾಗೂ ಡಿ.24ರಿಂದ ಬ್ರಹ್ಮಾವರ ತಹಶೀಲ್ದಾರ್ ಕಚೇರಿಯೆದುರು ಅನಿರ್ಧಿಷ್ಟಾವಧಿ ಧರಣಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ-66 ಉಳಿಸಿ ಸಮಿತಿಯ ಸಂಚಾಲಕ ಬಿ.ಗೋವಿಂದರಾಜ್ ಹೆಗ್ಡೆ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಬ್ರಹ್ಮಾವರದ ರಾಷ್ಟ್ರೀಯ ಹೆದ್ದಾರಿ-66ರ ಸಮಸ್ಯೆಗಳ ಕುರಿತು ಶನಿವಾರ ಇಲ್ಲಿನ ಆಶ್ರಯ ಹೋಟೆಲ್ ಸಭಾಂಗಣದಲ್ಲಿ ಕರೆಯಲಾದ ಸಮಾಲೋಚನಾ ಸಭೆಯ ಬಳಿಕ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಸಭೆಯಲ್ಲಿ ತೆಗೆದುಕೊಂಡ ನಿರ್ಣಯದ ಕುರಿತು ತಿಳಿಸಿದರು.
ಬ್ರಹ್ಮಾವರದಲ್ಲಿ ಕನಿಷ್ಠ ಏಳು ಪಿಲ್ಲರ್ಸ್ಗಳನ್ನು ಅಳವಡಿಸಿ ಫ್ಲೈಓವರ್ ರಚನೆ ಹಾಗೂ ಭದ್ರಗಿರಿಯಿಂದ ಮಾಬುಕಳ ಸೇತುವೆ ತನಕ ಹೆದ್ದಾರಿಯ ಎರಡೂ ಕಡೆ ಸರ್ವೀಸ್ ರಸ್ತೆ ನಿರ್ಮಾಣದ ಬೇಡಿಕೆಯನ್ನು ಜಿಲ್ಲಾಡಳಿತದ ಮುಂದಿರಿ ಸಿತ್ತು. ಆದರೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ನಡೆದ ಸಭೆಯ ಯಾವುದೇ ನಿರ್ಣಯಗಳನ್ನು ಈವರೆಗೆ ಈಡೇರಿಸಲಾಗಿಲ್ಲ ಎಂದವರು ಹೇಳಿದರು.
ನಿರಂತರ ಅಪಘಾತ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಕುರಿತು 13 ವರ್ಷಗಳ ಹಿಂದೆಯೇ ನಾವು ಬ್ರಹ್ಮಾವರ ಬಂದ್ ಮಾಡಿ ಪ್ರತಿಭಟಿಸಿ ಬೇಡಿಕೆ ಮುಂದಿಟ್ಟಿದ್ದೆವು. ನಿರಂತರವಾಗಿ ಹೋರಾಟ, ಮನವಿ ನೀಡುತ್ತಲೇ ಇದ್ದೇವೆ. ಬೇಡಿಕೆ ಈಡೇರಿಕೆ ಬಗ್ಗೆ ಕಳೆದ ಆಗಸ್ಟ್ ತಿಂಗಳಲ್ಲಿ ಮತ್ತೊಮ್ಮೆ ಮನವಿ ನೀಡಿದ್ದು, ಈಡೇರಿಸದಿದ್ದರೆ ಸೆ.4ರಂದು ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದೆವು.
ಇದರ ಹಿನ್ನೆಲೆಯಲ್ಲಿ ಸೆ.2ರಂದು ಸಂಸದರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಕರೆದು ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ತಾತ್ಕಾಲಿಕವಾಗಿ ಕೈಬಿಟ್ಟಿದ್ದೆವು. ಆದರೆ ಅವರು ತಿಳಿಸಿದಂತೆ ಡಿಪಿಆರ್ ನಿರ್ವಹಿಸುವ ಎಜೆನ್ಸಿಯಾದ ಧ್ರುವ ಕನ್ಸಲ್ಟೆನ್ಸಿ ಈವರೆಗೆ ನಮ್ಮನ್ನು ಸಂಪರ್ಕಿಸಿಲ್ಲ. ಫ್ಲೈಓವರ್ ಹಾಗೂ ಸರ್ವೀಸ್ ರಸ್ತೆ ನಿರ್ಮಾಣದ ಬಗ್ಗೆ ಯಾವುದೇ ತಯಾರಿ ನಡೆದಿಲ್ಲ ಎಂಬುದು ನಾವು ಪಡೆದ ಆರ್ಟಿಐ ಮಾಹಿತಿ ಯಲ್ಲಿ ಉತ್ತರ ಬಂದಿದೆ. ಸಂಸದರ ಭರವಸೆಯೂ ಭರವಸೆಯಾಗಿಯೇ ಉಳಿದಿದೆ ಎಂದು ಗೋವಿಂದರಾಜ ಹೆಗ್ಡೆ ಬೇಸರ ವ್ಯಕ್ತಪಡಿಸಿದರು.
ಸಿಐಟಿಯು ಉಡುಪಿ ಜಿಲ್ಲಾಧ್ಯಕ್ಷ ಶಶಿಧರ ಗೊಲ್ಲ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭದಿಂದಲೇ ಬ್ರಹ್ಮಾವರದಲ್ಲಿ ಜನತೆ ಎಚ್ಚೆತ್ತುಕೊಂಡು ಸಮರ್ಪಕ ಕಾಮಗಾರಿ ನಡೆಯಬೇಕು, ಪ್ಲೈಓವರ್ ಆಗಬೇಕೆಂಬ ಒತ್ತಾಯ ಮಾಡಿದ್ದರೂ ಕೂಡ ಜನಪ್ರತಿನಿಧಿಗಳ ಅಸಡ್ಡೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಅದನ್ನು ನಿರ್ಲಕ್ಷಿಸಿ ರಸ್ತೆ ನಿರ್ಮಿಸಿ ದ್ದಾರೆ. ಇದರಿಂದ ಬಸ್ ನಿಲ್ದಾಣ ಮತ್ತು ಇನ್ನೊಂದು ಭಾಗದ ಸಂಪರ್ಕ ಸಂಪೂರ್ಣ ಕಡಿತವಾಗುವಂತಾಗಿದೆ ಎಂದರು.
ಆದ್ದರಿಂದ ಈಗ ಬ್ರಹ್ಮಾವರದಲ್ಲಿ ಪ್ಲೈಓವರ್ ನಿರ್ಮಾಣವಾಗಬೇಕು. ರಾ.ಹೆದ್ದಾರಿ ಕಾಮಗಾರಿ ವೈಜ್ಞಾನಿಕವಾಗಿ ಆಗಬೇಕೆಂದು ಜಿಲ್ಲೆಯಲ್ಲೇ ಪ್ರಥಮವಾಗಿ ಹೋರಾಟ ನಡೆದಿದ್ದು ಬ್ರಹ್ಮಾವರದಲ್ಲಿ. ಆದರೆ ಇಲ್ಲಿ ಸರ್ವೀಸ್ ರಸ್ತೆ ಸಹಿತ ನಮ್ಮ ಬೇಡಿಕೆ ಈಡೇರದೇ ಇರುವುದು ನಮ್ಮ ದುರಂತ. ಈಗ ನಗರಕ್ಕೂ, ಜನವಸತಿ ಪ್ರದೇಶಕ್ಕೂ ಸಂಪರ್ಕ ಇಲ್ಲವಾಗಿದೆ. ಜನರ ಜೀವಕ್ಕೆ ಬೆಲೆ ಇಲ್ಲವಾಗಿದೆ ಎಂದು ಗೊಲ್ಲ ದೂರಿದರು.
ಸಭೆಯಲ್ಲಿ ಉದ್ಯಮಿಗಳಾದ ರಾಜಾರಾಮ್ ಶೆಟ್ಟಿ, ದಯಾನಂದ ಶೆಟ್ಟಿ, ಉಡುಪಿ ಜಿಲ್ಲಾ ಸಂಘದ ಅಧ್ಯಕ್ಷ ಸುಭಾ ಶ್ಚಂದ್ರ ನಾಯಕ್, ಆಟೋ ಚಾಲಕರ ಸಂಘದ ಗೌರವಾಧ್ಯಕ್ಷ ರಾಜು ಪೂಜಾರಿ, ಟ್ಯಾಕ್ಸಿ ಮಾಲಕರ ಸಂಘದ ಗೌರವ ಸಲಹೆಗಾರ ಕರುಣಾಕರ ಪೂಜಾರಿ, ಎಸ್.ಎಂ.ಎಸ್. ಸಮೂಹ ಸಂಸ್ಥೆಗಳ ಪರವಾಗಿ ಅಲ್ವಾರಿಸ್ ಡಿಸಿಲ್ವ, ಗ್ಯಾರೆಜ್ ಮಾಲಕರ ಸಂಘದಿಂದ ಗಿಲ್ಬರ್ಟ್ ರೋಡ್ರಿಗಸ್, ರಿಕ್ಷಾ ಮಾಲಕರ ಸಂಘದ ಉಪಾಧ್ಯಕ್ಷ ಸದಾಶಿವ ಪೂಜಾರಿ, ಟೆಂಪೋ ಮಾಲಕರ ಸಂಘದ ಉಪಾಧ್ಯಕ್ಷ ಗಣೇಶ್ ಶ್ರೀಯಾನ್, ಬಸ್ ಮಾಲಕರ ಸಂಘದ ವಸಂತ್ ಶೆಟ್ಟಿ, ಬ್ರಹ್ಮಾವರ ಅಭಿವೃದ್ಧಿ ಸಂಘದ ಪ್ರತೀತ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
‘ಉಡುಪಿಯ ಮಾಜಿ ಸಂಸದೆ ಶೋಭಾ ಕರಂದ್ಲಾಜೆ ಅವರು ಮಹೇಶ್ ಆಸ್ಪತ್ರೆ ಬಳಿ ಜನ ಓಡಾಡಲು ಮೇಲ್ಸೇತುವೆ ನಿರ್ಮಾಣದ ಭರವಸೆ ನೀಡಿದ್ದು ಈಗಲೂ ಆಶ್ವಾಸನೆಯಾಗಿಯೇ ಉಳಿದಿದೆ. ಅಕ್ಕಪಕ್ಕದಲ್ಲಿ ಶಾಲೆ, ಪೇಟೆಗಳಿವೆ. ಹಿರಿಯ ನಾಗರಿಕರು ಹೆದ್ದಾರಿ ದಾಟುವುದು ಕಷ್ಟಸಾಧ್ಯವಾಗಿದೆ. ಯಾವಾಗ ಬೇಡಿಕೆ ಈಡೇರಿಸುತ್ತೀರಿ ಎಂಬುದನ್ನು ಜನಪ್ರತಿನಿಧಿಗಳು ಜನತೆಗೆ ತಿಳಿಸಲಿ. ಇಲ್ಲಿ ಇನ್ನೆಷ್ಟು ಜನರ ಬಲಿ ಬೇಕು?. ಕಾರ್ಮಿಕರು ಸಮಸ್ಯೆ ಅನುಭವಿಸುತ್ತಿ ದ್ದಾರೆ. ಎಸ್ಕಾರ್ಟ್ನಲ್ಲಿ ಹೋಗುವವರಿಗೆ ಜನಸಾಮಾನ್ಯರ ಕಷ್ಟ ಅರ್ಥವಾ ಗುತ್ತಿಲ್ಲ. ಸಂಸದರು, ಶಾಸಕರು, ಜನಪ್ರತಿನಿಧಿಗಳು ಶೀಘ್ರ ಫ್ಲೈಓವರ್, ಸರ್ವೀಸ್ ರಸ್ತೆ ನಿರ್ಮಿಸಿ, ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಹೆದ್ದಾರಿ ಬಂದ್ ಮಾಡಿ ಹೋರಾಟ ಖಚಿತ. ಹೆದ್ದಾರಿ ಸಮಸ್ಯೆಯಿಂದ ಹಲವರು ಮೃತರಾಗಿದ್ದಾರೆ. ಸಂಸದರ ಬಳಿ ಹೋದರೆ ನಾಳೆ ಮಾಡಿಕೊಡುವುದಾಗಿ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಾರೆ. ಇನ್ಮುಂದೆ ಅಪಘಾತವಾಗಿ ಸಾವು ಸಂಭವಿ ಸಿದರೆ ಇದಕ್ಕೆ ಜವಾಬ್ದಾರರ ಮನೆ ಮುಂದೆ ಪ್ರತಿಭಟಿಸುತ್ತೇವೆ. ಜನ ಪರ ಕಾಳಜಿಯಿಲ್ಲದೆ ಕೇವಲ ಓಟಿಗಾಗಿ ಮಾತ್ರವೇ ಯಾವ ಎಂಪಿ, ಎಂಎಲ್ಎಯೂ ಇರಬಾರದು.
-ಶಶಿಧರ ಗೊಲ್ಲ, ಸಿಐಟಿಯು ಉಡುಪಿ ಜಿಲ್ಲಾಧ್ಯಕ್ಷ.