ಬೀದಿಬದಿ ಅಂಗಡಿ ತೆರವು ನಿರ್ಧಾರ ಏಕಪಕ್ಷೀಯವಲ್ಲ: ಕುಂದಾಪುರ ಪುರಸಭಾ ಅಧ್ಯಕ್ಷ ಮೋಹನದಾಸ ಶೆಣೈ ಸಮರ್ಥನೆ
ಕುಂದಾಪುರ: ನಗರದ ಬೀದಿಬದಿಯ ವ್ಯಾಪಾರಸ್ಥರ ತೆರವು ವಿಚಾರ ಯಾವುದೇ ರಾಜಕೀಯ ಪಕ್ಷದ ನಿಲುವಲ್ಲ. ಎರಡೂ ಪಕ್ಷದ ಸದಸ್ಯರು ಏಕಮತದಿಂದ ನಿರ್ಣಯಿಸಿ ಆಡಳಿತಾತ್ಮಕವಾಗಿ ತೆಗೆದುಕೊಂಡ ನಿರ್ಧಾರ ಇದಾಗಿದೆ. ಇದರಲ್ಲಿ ಶಾಸಕ, ಸಂಸದರ ಒತ್ತಾಯ ಕೂಡಾ ಇಲ್ಲ ಎಂದು ಕುಂದಾಪುರ ಪುರಸಭೆಯ ಅಧ್ಯಕ್ಷ ಮೋಹನದಾಸ ಶೆಣೈ ಸಮರ್ಥಿಸಿಕೊಂಡಿದ್ದಾರೆ.
ಗುರುವಾರ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋಹನದಾಸ ಶೆಣೈ, ಈ ವಿಷಯದಲ್ಲಿ ಸಾರ್ವಜನಿಕರಲ್ಲಿ ಗೊಂದಲ ಮೂಡಿದೆ. ಪುರಸಭೆ ಆಡಳಿತದ ಮೇಲೆ ಆಪಾದನೆ ಬರುತ್ತಿದೆ. ವ್ಯಾಪಾರಸ್ಥರ ನಡುವೆಯೇ ಗೊಂದಲ ಇದೆ. ಅಂಗಡಿ ತೆರವು ನಿರ್ಧಾರ ಸರ್ವಾನುಮತದ್ದು ವಿನಾ ಏಕಪಕ್ಷೀಯವಲ್ಲ ಎಂದವರು ವಿವರಿಸಿದರು.
ಪುರಸಭೆಯ ಎಲ್ಲಾ ಸದಸ್ಯರು ಸುಮಾರು 6 ತಿಂಗಳಿನಿಂದ ಪುರಸಭೆ ಮೀಟಿಂಗ್‌ನಲ್ಲಿ ಚರ್ಚೆ ಮಾಡಿಯೇ ಅನಧಿಕೃತ, ಲೈಸನ್ಸ್ ಇಲ್ಲದ ಗೂಡಂಗಡಿಗಳ ತೆರವು ಮಾಡಲಾಗಿದೆ ಎಂದು ಅವರು ಪುರಸಭೆಯ ನಡೆಯನ್ನು ಬಲವಾಗಿ ಸಮರ್ಥಿಸಿಕೊಂಡರು.
ಕುಂದಾಪುರದ ಗಾಂಧಿ ಮೈದಾನದ ಎದುರು, ನೆಹರೂ ಮೈದಾನದಲ್ಲಿದ್ದ ಅಂಗಡಿಗಳ ತೆರವಿಗೆ ಡಿಸಿ ಸೂಚಿಸಿದ್ದರು. ಆಗಲೂ ನಾವು ವ್ಯಾಪಾರಿಗಳ ಪರವಾಗಿ ಸಮಯಾವಕಾಶ ಕೇಳಿದ್ದೆವು. ಕೆಲವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ತೆಗೆಸಿದರು. ಬಸ್ರೂರು ಮೂರುಕೈಯಿಂದ ಜೂನಿಯರ್ ಕಾಲೇಜು ಎದುರು, ಫ್ಲೈಓವರ್ ಕೆಳಗೆ ಏಕಾಏಕಿ ಅಂಗಡಿಗಳು ಕಂಡು ಬಂದಿದ್ದವು ಎಂದವರು ಹೇಳಿದರು.
ಉತ್ತರಪ್ರದೇಶ, ರಾಜಸ್ಥಾನದವರ ಪಾನಿಪೂರಿ ಅಂಗಡಿಗಳು ಸಾಲಾಗಿ ಅನಧಿಕೃತವಾಗಿ ತೆರೆದವು. ಇದರಿಂದ ಸಾರ್ವಜನಿಕರ ಆರೋಗ್ಯದ ಕುರಿತಾದ ಕಾಳಜಿ ವಹಿಸಬೇಕಾದ್ದು ನಮ್ಮ ಆದ್ಯತೆಯಾಗಿತ್ತು. ಜತೆಗೆ ಈಗಾಗಲೇ ಲೈಸನ್ಸ್ ಪಡೆದು ವ್ಯಾಪಾರ ಮಾಡುವವರಿಗೂ ತೊಂದರೆ ಆಗುತ್ತಿತ್ತು ಎಂದು ಮೋಹನದಾಸ ಶೆಣೈ ವಿವರಿಸಿದರು.
ಕೊರೊನಾ ಸಂದರ್ಭದಲ್ಲಿ 75 ಮಂದಿಗೆ ಬೀದಿಬದಿ ವ್ಯಾಪಾರಿಗಳ ಲೈಸೆನ್ಸ್, ಅಗತ್ಯ ಉಳ್ಳವರಿಗೆ ಆಹಾರ ಲೈಸನ್ಸ್ ಕೊಡಿಸಲಾಗಿತ್ತು. ಪುರಸಭೆ ಇದನ್ನು ಲಾಭದ ದೃಷ್ಟಿಯಿಂದ ನೋಡಿಲ್ಲ. ಇವರಿಂದ ಯಾವುದೇ ಶುಲ್ಕ ಪಡೆಯುವುದಿಲ್ಲ. ಆದ್ದರಿಂದ ಪಾರ್ಕಿಂಗ್, ಸಾರ್ವಜನಿಕ ಆರೋಗ್ಯ ಸೇರಿದಂತೆ ಬೇರೆ ಬೇರೆ ಕಾರಣಗಳಿಗಾಗಿ ಈಚಿನ ದಿನಗಳಲ್ಲಿ ಹಾಕಿದ, ಲೈಸೆನ್ಸ್ ಇಲ್ಲದ 11 ಅಂಗಡಿಗಳನ್ನಷ್ಟೇ ತೆಗೆಯಲಾಗಿದೆ. ಅದೂ ಅವರಿಗೆ ಸೂಚನೆ ನೀಡಲಾಗಿತ್ತು. ಮುಂದಿನ ದಿನಗಳಲ್ಲಿ ಸರಿಯಾದ ಜಾಗ ಗುರುತಿಸಿ, ಲೈಸೆನ್ಸ್ ನೀಡಿ ವ್ಯಾಪಾರಕ್ಕೆ ಅವಕಾಶ ನೀಡಲಾಗುವುದು. ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎಂದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶೆಣೈ, ಅನಧಿಕೃತವಾಗಿ ಅಂಗಡಿ ಹಾಕಿದವರಿಗೆ ನೋಟಿಸ್ ನೀಡಿ, ಪತ್ರಿಕಾ ಪ್ರಕಟನೆ ನೀಡಿ, ಮೈಕ್ ಪ್ರಚಾರ ನಡೆಸಿ ತೆಗೆಸಬೇಕಾಗಿತ್ತು. ಅಧಿಕಾರಿ ವರ್ಗದಿಂದ ತಪ್ಪಾಗಿದೆ. ಇದರಿಂದಾಗಿ ಇದು ರಾಜಕೀಯ ಬಣ್ಣ ಪಡೆದು ಆಡಳಿತಕ್ಕೆ ಮುಜುಗರ ತರುವಂತಾಗಿದೆ ಎಂದರು.
ಪುರಸಭೆಯ ಉಪಾಧ್ಯಕ್ಷೆ ವನಿತಾ ಬಿಲ್ಲವ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ ವಿ. ಉಪಸ್ಥಿತರಿದ್ದರು.