ಉಡುಪಿ ನಗರಸಭೆಯ ಜನನ-ಮರಣ ಪ್ರಮಾಣಪತ್ರದ ವಿಭಾಗ ಪರಿಶೀಲನೆ
ಉಡುಪಿ : ಉಡುಪಿ ನಗರಸಭೆಯ ಜನನ ಮರಣ ಪ್ರಮಾಣ ಪತ್ರ ವಿಭಾಗದಲ್ಲಿ ಅಧಿಕಾರಿಗಳ ವಿಳಂಬ ಧೋರಣೆ, ಅಸಹಕಾರದ ಬಗ್ಗೆ ಸಾರ್ವಜನಿಕರಿಂದ ದೂರಿನ ಹಿನ್ನೆಲೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜನನ ಮರಣ ಪ್ರಮಾಣ ಪತ್ರ ವಿಭಾಗದಲ್ಲಿ ನೂರಾರು ಕಡತಗಳು ಬಾಕಿ ಇದ್ದು, ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ದರ್ಪದಿಂದ ವರ್ತಿಸುತ್ತಿದ್ದಾರೆ. ಈ ಬಗ್ಗೆ ಪೂರಕ ಮಾಹಿತಿ ನೀಡಲು ಸಹಕಾರ ನೀಡುತ್ತಿಲ್ಲ ಎಂದು ಶಾಸಕ ಯಶ್ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ತಿದ್ದುಪಡಿ ಅರ್ಜಿಗಳು ಬರುತ್ತಿದ್ದು, ಜನನ ಪ್ರಮಾಣ ಪತ್ರ ಅರ್ಜಿ ಸ್ವೀಕರಿಸುವಾಗಲೇ ಅರ್ಜಿದಾರರಿಗೆ ಮಾಹಿತಿ ಕೊರತೆ ಇದ್ದಲ್ಲಿ ಈ ಬಗ್ಗೆ ಸೂಕ್ತ ಮಾಹಿತಿ ನೀಡಿ ಸಾರ್ವಜನಿಕರೊಂದಿಗೆ ಸಂಯಮದಿಂದ ವರ್ತಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರಸಭೆಯ ಜನನ ಮರಣ ಪ್ರಮಾಣ ಪತ್ರ ವಿಭಾಗಕ್ಕೆ ಅಗತ್ಯವಿರುವ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಹಾಗೂ ಕಂಪ್ಯೂಟರ್ ನ ವ್ಯವಸ್ಥೆ ಮಾಡುವಂತೆ ಪೌರಾಯುಕ್ತರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.